ಹೊಸ ದೆಹಲಿ, ಮೇ 28: ಮೇಕೆದಾಟು ಯೋಜನೆಯ (Mekedatu Project) ಕುರಿತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಧ್ವನಿ ಎತ್ತಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಂತಾರಾಜ್ಯ ಜಲ ವಿವಾದಗಳನ್ನು ಪರಸ್ಪರ ಸಹಕಾರ, ಸಕಾಲಿಕ ಅನುಮತಿ ಹಾಗೂ ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯ ಮೂಲಕ ಬಗೆಹರಿಸಿಕೊಳ್ಳುವಂತೆ ತಮಿಳುನಾಡು ಮತ್ತು ಕರ್ನಾಟಕಕ್ಕೆ ಕರೆ ನೀಡಿದ್ದಾರೆ. ಕೇನ್-ಬೆಟ್ವಾ ನದಿ ಜೋಡಣೆ ಯೋಜನೆಯು ಇಂತಹ ಉಪಕ್ರಮಗಳಿಗೆ ಮಾದರಿಯಾಗಬೇಕು ಎಂದು ಅವರು ಆಶಿಸಿದ್ದಾರೆ.
ಬುಧವಾರ ನಡೆದ 51ನೇ 'ಪ್ರಗತಿ' ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ, 9 ರಾಜ್ಯಗಳಲ್ಲಿ ಹರಡಿಕೊಂಡಿರುವ ರೈಲ್ವೆ, ವಿದ್ಯುತ್ ಮತ್ತು ರಸ್ತೆ ವಲಯಗಳಿಗೆ ಸಂಬಂಧಿಸಿದ ಸುಮಾರು 30,000 ಕೋಟಿ ರುಪಾಯಿ ವೆಚ್ಚದ 7 ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾದರೆ ವೆಚ್ಚ ಹೆಚ್ಚಾಗುವುದಲ್ಲದೆ, ನಾಗರಿಕರು ಸಕಾಲದಲ್ಲಿ ಅಗತ್ಯ ಸೇವೆಗಳು ಮತ್ತು ಮೂಲ ಸೌಕರ್ಯಗಳನ್ನು ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದರು.
ಪ್ರಗತಿ ಸಭೆಯ ಪ್ರಮುಖ ನಿರ್ಧಾರಗಳು
ಜಲ ಭದ್ರತೆ ಮತ್ತು ನದಿ ಜೋಡಣೆ: ದೀರ್ಘಾವಧಿಯ ಜಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನದಿ ಜೋಡಣೆ, ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ದಕ್ಷ ನೀರಾವರಿಯನ್ನು ಸಂಯೋಜಿತ ರೀತಿಯಲ್ಲಿ ಕೈಗೊಳ್ಳಬಹುದಾದ ಅವಕಾಶಗಳನ್ನು ಗುರುತಿಸಲು ರಾಜ್ಯಗಳಿಗೆ ಉತ್ತೇಜನ ನೀಡಲಾಯಿತು.
ರೂಫ್‌ಟಾಪ್ ಸೋಲಾರ್ ಮಿಷನ್: ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಶುದ್ಧ ಇಂಧನವನ್ನು ಉತ್ತೇಜಿಸಲು ನಗರ ಪ್ರದೇಶಗಳು, ವಸತಿ ಸಮುಚ್ಚಯಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಕೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲು ಪ್ರಧಾನಿ ಸೂಚಿಸಿದರು.
ಕೇನ್-ಬೆಟ್ವಾ ಮಾದರಿ: ಅಂತಾರಾಜ್ಯ ಜಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಈ ಯೋಜನೆ ಮಾದರಿಯಾಗಬೇಕು ಎಂದರು.
ವಧವನ್ ಬಂದರು ಮತ್ತು ಸ್ವಚ್ಛ ಭಾರತ 2.0: ರಸ್ತೆ ಮತ್ತು ಬಂದರು ಸಂಪರ್ಕ ಯೋಜನೆಗಳನ್ನು ಪರಿಶೀಲಿಸುವಾಗ, ಮಹಾರಾಷ್ಟ್ರದ ವಧವನ್ ಬಂದರನ್ನು ಕೇವಲ ಒಂದು ಬಂದರನ್ನಾಗಿ ನೋಡದೆ, ಅದನ್ನು ಭವಿಷ್ಯದ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಿ ಹೇಳಲಾಯಿತು. ಇದು ಕರಾವಳಿ ಸಾಗಣೆ, ಒಳನಾಡು ಜಲಮಾರ್ಗಗಳು, ಹೈ-ಸ್ಪೀಡ್ ರೈಲು ಮತ್ತು ಹೆದ್ದಾರಿಗಳೊಂದಿಗೆ ಸಂಪರ್ಕ ಹೊಂದಿದ ರಾಷ್ಟ್ರೀಯ ಹೆಬ್ಬಾಗಿಲಾಗಲಿದೆ.
ಸ್ವಚ್ಛ ಭಾರತ ಮಿಷನ್-ಅರ್ಬನ್ 2.0: ಕೇವಲ ಮೂಲ ಸೌಕರ್ಯ ಸೃಷ್ಟಿಗೆ ಸೀಮಿತವಾಗದೆ, ನಿಯಮಿತ ಮೇಲ್ವಿಚಾರಣೆ ಮತ್ತು ನಾಗರಿಕರ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಬೇಕು. ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಗೋಬರ್ಧನ್ ಘಟಕಗಳ ಸ್ಥಾಪನೆಯನ್ನು ವೇಗಗೊಳಿಸಲು ಪ್ರಧಾನಿ ರಾಜ್ಯಗಳಿಗೆ ಸೂಚಿಸಿದರು.
ಅಲ್ಲದೆ, ಕಾಲುವೆಗಳ ಜಾಲವನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳಲು, ಕಾಲುವೆಗಳ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವ ಮೂಲಕ ಜಮೀನಿನ ಸದ್ಬಳಕೆ ಮತ್ತು ನೀರಿನ ಆವಿಯಾಗುವಿಕೆಯನ್ನು ತಡೆಯಬಹುದು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.