ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ನಮಗೆ ಪಿಒಕೆ ಕೊಡಿ”: ಪ್ರಧಾನಿ ಮೋದಿ ಸರ್ಕಾರದ 12 ವರ್ಷಗಳ ಆಚರಣೆಗೆ ಜಮ್ಮು-ಕಾಶ್ಮೀರ ಗಡಿ ಗ್ರಾಮಸ್ಥರಿಂದ ವಿಶೇಷ ಪ್ರಾರ್ಥನೆ

"Give Us PoK": ಜಮ್ಮು-ಕಾಶ್ಮೀರ ಬದಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 12 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಗಡಿಭಾಗದ ಗ್ರಾಮಸ್ಥರು ಮುಕ್ತ ಸ್ಥಳದಲ್ಲಿ ಸೇರಿ ಹವನವನ್ನು ನೆರವೇರಿಸಿದರು. ಪಾಕ್ ಆಕ್ರಮಿತ ಕಾಶ್ಮೀರವನ್ನು ಬಯಸುವುದಾಗಿ ಅವರು ಹೇಳಿದ್ದಾರೆ.

ಹವನ ನೆರವೇರಿಸಿದ ಗ್ರಾಮಸ್ಥರು

ಶ್ರೀನಗರ, ಜೂ.13: ಜಮ್ಮು-ಕಾಶ್ಮೀರ (Jammu and Kashmir) ಎಂದರೆ ನೆನಪಾಗುವುದೇ ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕಿಂತ ಭಯೋತ್ಪಾದಕರ ಕರಿನೆರಳಿನ ಭೀತಿ ಮೂಡುವುದೇ ಹೆಚ್ಚು. ಆದರೀಗ ಕಾಶ್ಮೀರ ಬದಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್‌ ಪುರಾ ವಲಯದಲ್ಲಿ ಭಾರತ–ಪಾಕಿಸ್ತಾನ (India-Pakistan) ಗಡಿಯ ಬೇಲಿಯಿಂದ ಕೆಲವೇ ಮೀಟರ್‌ಗಳ ದೂರದಲ್ಲಿರುವ ಗ್ರಾಮಗಳು ಹಲವು ದಶಕಗಳ ಕಾಲ ಪಾಕಿಸ್ತಾನದ ಗುಂಡಿನ ದಾಳಿ, ಶೆಲ್ ದಾಳಿ ಮತ್ತು ಗಡಿ ಉದ್ವಿಗ್ನತೆಯ ಭೀತಿಯಲ್ಲೇ ಬದುಕುತ್ತಿದ್ದವು. ಆದರೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಗಡಿಭಾಗದಲ್ಲಿ ಶಾಂತಿ ನೆಲೆಸಿದ್ದು, ಜನರು ನಿರ್ಭೀತಿಯಿಂದ ಜೀವನ ನಡೆಸುತ್ತಿದ್ದಾರೆ.

ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು 12 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಗಡಿಭಾಗದ ಗ್ರಾಮಸ್ಥರು ಮುಕ್ತ ಸ್ಥಳದಲ್ಲಿ ಸೇರಿ ಹವನವನ್ನು ನೆರವೇರಿಸಿದರು. ಈ ಹಿಂದೆ ಶೆಲ್‌ಗಳ ಸ್ಫೋಟದ ಸದ್ದುಗಳಿಂದ ಮೊಳಗುತ್ತಿದ್ದ ಆ ಪ್ರದೇಶದಲ್ಲಿ ಪವಿತ್ರ ಅಗ್ನಿಯ ಹೊಗೆ ಆವರಿಸಿದೆ. ಜನರು ನಿರಾಳವಾಗಿ ಧಾರ್ಮಿಕ ಕಾರ್ಯ ನೆರವೇರಿಸುತ್ತಿದ್ದಾರೆ.

ಇಂದು ನಾವು ಬಯಲಿನಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಅವರ ಬಲವಾದ ನೀತಿಗಳೇ ಕಾರಣ ಎಂದು ಅರ್ನಿಯಾ ಗ್ರಾಮ ಪಂಚಾಯಿತಿ ಮುಖ್ಯಸ್ಥ ಬಲ್ಬೀರ್ ಕೌರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ 24 ವರ್ಷಗಳ ಕಾಲ ದೇಶವನ್ನು ಮುನ್ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕ ಅಡಗುತಾಣದಿಂದ ನೇರಳೆ ಕ್ರಾಂತಿಯವರೆಗೆ: ಜಮ್ಮು-ಕಾಶ್ಮೀರದ ಈ ಪಟ್ಟಣದ ಭವಿಷ್ಯವನ್ನೇ ಬದಲಾಯಿಸಿದ ಲ್ಯಾವೆಂಡರ್ ಹೂವು

ವಿಶೇಷ ಪ್ರಾರ್ಥನೆಗಾಗಿ ನೆರೆದಿದ್ದ ಬಲ್ಬೀರ್ ಮತ್ತು ಇತರ ಅನೇಕ ಗ್ರಾಮಸ್ಥರು, ಪ್ರಧಾನಿ ಮೋದಿಯವರು ತಮ್ಮ ಮುಂದಿನ ಅವಧಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತಮಗೆ ನೀಡಬೇಕೆಂದು ಬಯಸುತ್ತಿದ್ದಾರೆ. ಈ ಹಳ್ಳಿಯ ಹೆಚ್ಚಿನ ಕುಟುಂಬಗಳು ದೇಶ ವಿಭಜನೆಯ ಸಮಯದಲ್ಲಿ ಗಡಿಯಾಚೆಯಿಂದ ಬಂದವರು. ತಮ್ಮ ಪೂರ್ವಜರ ಆಸ್ತಿಗಳನ್ನು ಬಿಟ್ಟು ವಲಸೆ ಬಂದವರು.

ಸ್ಥಳೀಯರ ದೃಷ್ಟಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 12 ವರ್ಷಗಳ ಆಡಳಿತ ಎಂದರೆ ಪಾಕಿಸ್ತಾನದ ವಿರುದ್ಧದ ದೃಢ ಮತ್ತು ಕಠಿಣ ನೀತಿಯ 12 ವರ್ಷಗಳ ಅವಧಿಯಾಗಿದೆ. ಉಗ್ರರ ದಾಳಿಗಳಿಗೆ ಪ್ರತಿಕ್ರಿಯಿಸುವ ಭಾರತದ ಸೇನಾ ಕಾರ್ಯತಂತ್ರದಲ್ಲಿ ಮಹತ್ವದ ಬದಲಾವಣೆ ಉರಿ ದಾಳಿ ಬಳಿಕ ಆರಂಭವಾಯಿತು. ಸರ್ಜಿಕಲ್ ಸ್ಟ್ರೈಕ್‌ಗಳೊಂದಿಗೆ, ಭಾರತ ಸ್ಪಷ್ಟ ಸಂದೇಶವನ್ನು ಕಳುಹಿಸಿತು. ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸಿದರೆ, ಭಾರತವು ತಕ್ಕ ಪ್ರತ್ಯುತ್ತರ ನೀಡುತ್ತದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕೈಗೊಂಡಿತ್ತು. ಇದು ಶತ್ರು ರಾಷ್ಟ್ರದ ಭೀತಿಗೆ ಕಾರಣವಾಗಿತ್ತು.

ಗಡಿಯಾಚೆಯಿಂದ ಯಾವಾಗ ಗುಂಡಿನ ದಾಳಿ ಆರಂಭವಾಗಬಹುದು ಎಂಬ ಆತಂಕದಿಂದ ಸ್ಥಳೀಯರು ತಮ್ಮ ದೈನಂದಿನ ಜೀವನವನ್ನು ನಡೆಸಬೇಕಾಗಿತ್ತು. ಇದೀಗ ಆ ಭಯವಿಲ್ಲ. ಗ್ರಾಮಸ್ಥರು ತಮ್ಮ ಕೃಷಿ ಚಟುವಟಿಕೆಗಳು, ವ್ಯಾಪಾರ ಮತ್ತು ಇತರ ದೈನಂದಿನ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನು ಮುಂದೆ ಪಾಕಿಸ್ತಾನಿ ಸೈನಿಕರು ಹಾರಿಸುವ ಶೆಲ್‌ಗಳಿಂದಾಗಿ ನಾವು ನಮ್ಮ ಮನೆಗಳನ್ನು ತ್ಯಜಿಸಬೇಕಾಗಿಲ್ಲ ಎಂದು ಗಡಿ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.