ನವದೆಹಲಿ: ದೇಶಾದ್ಯಂತ ಭೀಕರ ದಾಳಿ ನಡೆಸಲು ಉಗ್ರರು ನಡೆಸಿದ್ದ(Terrorism) ಸಂಚು ಇದೀಗ ಬಯಲಾಗಿದ್ದು, ಜಮ್ಮು ಮತ್ತು ಕಾಶ್ಮೀರ(Jammu and Kashmir) ಪೊಲೀಸರ ತಂಡವು ಹರಿಯಾಣದ ಫರಿದಾಬಾದ್‌ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 300 ಕೆಜಿ ಆರ್‌ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೇ ಉಗ್ರರ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಅರೆಸ್ಟ್ ಆಗಿರುವ ಕಾಶ್ಮೀರಿ ಮೂಲದ ವೈದ್ಯನನ್ನು ಅರೆಸ್ಟ್ ಮಾಡಿರುವ ಬೆನ್ನಲ್ಲೇ ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಸಹರಾನ್‌ಪುರದಿಂದ ಕಾಶ್ಮೀರಿ ವೈದ್ಯ ಡಾ. ಅದೀಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ಲಾಕರ್‌ನಿಂದ ಒಂದು ಎಕೆ-47 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಬಂಧಿತ ವೈದ್ಯನನ್ನು ತೀವ್ರ ತನಿಖೆಗೊಳಪಡಿಸಲಾಗಿದೆ.
ಜೆಇಎಂ ಸಂಪರ್ಕ ಮತ್ತು ಪ್ರಮುಖ ಬಂಧನಗಳು
ಅಕ್ಟೋಬರ್ 27 ರಂದು ಶ್ರೀನಗರದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡ ನಂತರ ತನಿಖೆ ಪ್ರಾರಂಭವಾಯಿತು. ನಂತರ ಸಿಸಿಟಿವಿ ದೃಶ್ಯಾವಳಿಗಳು ಡಾ. ಅದೀಲ್ ಸಾರ್ವಜನಿಕ ಪ್ರದೇಶಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿರುವುದು ಬಯಲು ಮಾಡಿತ್ತು. ನವೆಂಬರ್ 6 ರಂದು, ಶ್ರೀನಗರ ಪೊಲೀಸರು ಉತ್ತರ ಪ್ರದೇಶದ ಸಹರಾನ್‌ಪುರದ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತಜ್ಞರಾಗಿ ಕೆಲಸ ಮಾಡುತ್ತಿದ್ದ ಆತನನ್ನು ಪೊಲೀಸರು ಬಂಧಿಸಿದರು. ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿ ಡಾ. ಅದೀಲ್, ಅಕ್ಟೋಬರ್ 2024 ರವರೆಗೆ ಜಿಎಂಸಿ ಅನಂತ್‌ನಾಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಆ ವೇಳೆ ಉಗ್ರರ ಜೊತೆ ತೀವ್ರ ನಂಟು ಹೊಂದಿದ್ದ ಈತನ ಬಳಿ ಎಕೆ 47 ಇತ್ತು.
ಈ ಸುದ್ದಿಯನ್ನೂ ಓದಿ: Landslide: ಜಮ್ಮು-ಕಾಶ್ಮೀರದಲ್ಲಿ ಭಾರೀ ಭೂ ಕುಸಿತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ
350 Kg ಸ್ಫೋಟಕ
ಡಾ. ಅದೀಲ್ ಅವರ ವಿಚಾರಣೆಯಿಂದ ಬಂದ ಸುಳಿವುಗಳ ಆಧಾರದ ಮೇಲೆ, ಹರಿಯಾಣದ ಫರಿದಾಬಾದ್‌ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಡಾ. ಮುಫಾಜಿಲ್ ಶಕೀಲ್ ಜೊತೆಗಿನ ಸಂಪರ್ಕವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆವರಣದಲ್ಲಿ ನಡೆದ ಪೊಲೀಸ್ ರೇಡ್ ವೇಳೆ ಮತ್ತೊಂದು ಎಕೆ -47 ರೈಫಲ್ ಮತ್ತು ಸುಮಾರು 300 ಕಿಲೋಗ್ರಾಂಗಳಷ್ಟು ಸ್ಫೋಟಕಗಳು ಪತ್ತೆಯಾಗಿವೆ. ಡಾ. ಶಕೀಲ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಮತ್ತು ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳು ದೊಡ್ಡ ಪ್ರಮಾಣದ ವಿಧ್ವಂಸಕ ಚಟುವಟಿಕೆಗಳಿಗೆ ಉದ್ದೇಶಿಸಿರಬಹುದು ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ಪೊಲೀಸರ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಲ್ಲಾ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ವಶಪಡಿಸಿಕೊಳ್ಳಲಾದ ವಸ್ತುಗಳ ವಿಧಿವಿಜ್ಞಾನ ಪರೀಕ್ಷೆ ಪೂರ್ಣಗೊಂಡ ನಂತರ ವಿವರವಾದ ಹೇಳಿಕೆ ನೀಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ಸ್ಫೋಟಕಗಳ ಪ್ರಮಾಣ ಮತ್ತು ಸಂಚಿನ ಸಂಭಾವ್ಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ತನಿಖೆಗೆ ಸಹಾಯ ಮಾಡಲು ರಾಷ್ಟ್ರೀಯ ಭದ್ರತಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಫೋನ್ ಟ್ರ್ಯಾಕಿಂಗ್ ಮತ್ತು ಬಹು ರಾಜ್ಯಗಳ ನಡುವಿನ ಗುಪ್ತಚರ ಸಮನ್ವಯ ಸೇರಿದಂತೆ ತಾಂತ್ರಿಕ ಕಣ್ಗಾವಲು ಕಾರಣ ತ್ವರಿತ ಕ್ರಮ ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಬಂಧನಗಳ ನಿರೀಕ್ಷೆಯಿದೆ.