ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ?; ರಾಷ್ಟ್ರಪತಿ ದ್ರೌಪದಿ ಮುರ್ಮು ಜತೆ ನರೇಂದ್ರ ಮೋದಿ, ಅಮಿತ್‌ ಶಾ ಸಮಾಲೋಚನೆ

Statehood for Jammu and Kashmir: ಜಮ್ಮು ಮತ್ತು ಕಾಶ್ಮೀರ ಜನರ ಬಹು ದಿನಗಳ ಬೇಡಿಕೆಯಾದ ರಾಜ್ಯ ಸ್ಥಾನಮಾನ ಶೀಘ್ರದಲ್ಲೇ ಸಿಗಲಿದೆ ಎನ್ನುವ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸರಣಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಈ ಸುದ್ದಿ ಮುನ್ನೆಲೆಗೆ ಬಂದಿದೆ.

ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ?

Ramesh B Ramesh B Aug 4, 2025 8:04 PM

ದೆಹಲಿ: ಜಮ್ಮು ಮತ್ತು ಕಾಶ್ಮೀರ ಜನರ ಬಹು ದಿನಗಳ ಬೇಡಿಕೆಯಾದ ರಾಜ್ಯ ಸ್ಥಾನಮಾನ (Statehood for Jammu and Kashmir) ಶೀಘ್ರದಲ್ಲೇ ಸಿಗಲಿದೆಯೇ? ಸದ್ಯ ಇಂತಹದ್ದೊಂದು ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಸರಣಿ ಸಭೆ ನಡೆಸಿದ್ದು, ಶೀಘ್ರದಲ್ಲಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ.

ಅಲ್ಲದೆ ಅಮಿತ್‌ ಶಾ ಜಮ್ಮು ಕಾಶ್ಮೀರದ ಕೆಲವು ನಾಯಕರು ಮತ್ತು ಅಲ್ಲಿನ ಬಿಜೆಪಿ ಅಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಜತೆಗೆ ಪ್ರಧಾನಿ ಮೋದಿ ಆಗಸ್ಟ್‌ 5ರಂದು ಎನ್‌ಡಿಎ ಸಂಸದರ ಸಭೆಯನ್ನೂ ಕರೆದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಆಗಸ್ಟ್ 5ರಂದು 370ನೇ ವಿಧಿ ರದ್ದತಿಯ ವಾರ್ಷಿಕೋತ್ಸವ ನಡೆಯಲಿದ್ದು, ಇದೇ ವೇಳೆ ಮಹತ್ವದ ಸಭೆ ನಡೆದಿರುವುದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಜಮ್ಮು ಕಾಶ್ಮೀರಕ್ಕೆ ಭಾರತೀಯ ಸಂವಿಧಾನ 370ನೇ ವಿಧಿಯ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್‌ 5ರಂದು ರದ್ದುಗೊಳಿಸಿತ್ತು. ಅಲ್ಲದೆ ರಾಜ್ಯ ಸ್ಥಾನಮಾನವನ್ನು ರದ್ದು ಮಾಡಿ 2 ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಿಸಿತ್ತು.



ಈ ಸುದ್ದಿಯನ್ನೂ ಓದಿ: Omar Abdullah: ರಾಜ್ಯ ಸ್ಥಾನಮಾನಕ್ಕಾಗಿ ಆಗ್ರಹಿಸುವುದಿಲ್ಲ; ಪೆಹಲ್ಗಾಮ್‌ ದಾಳಿ ಬಳಿಕ ಯುಟರ್ನ್‌ ಹೊಡೆದ್ರಾ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ?

ಸರಣಿ ಸಭೆ

ಆಗಸ್ಟ್‌ 3ರಂದು ಮೋದಿ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ವಿಶೇಷ ಎಂದರೆ ಈ ಸಭೆಯ ವಿವರ ಇನ್ನೂ ಹೊರಬಿದ್ದಿಲ್ಲ. ಇದರ ಬೆನ್ನಲ್ಲೇ ಅಮಿತ್‌ ಶಾ ಕೂಡ ರಾಷ್ಟ್ರಪತಿ ಅವರನ್ನು ಭೇಟಿಯಾಗಿದ್ದರು. ಅಲ್ಲದೆ ಅವರು ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ಸಾತ್‌ ಶರ್ಮಾ ಮತ್ತು ಲಡಾಖ್‌ನ ಲೆಫ್ಟಿನೆಂಟ್‌ ಗವರ್ನರ್‌ ಕವೀಂದರ್‌ ಗುಪ್ತಾ ಜತೆಗೂ ಸಮಾಲೋಚನೆ ನಡೆಸಿದ್ದರು. ಕೆಲವು ದಿನಗಳ ಹಿಂದೆ ಆಲ್ ಜೆ & ಕೆ ಶಿಯಾ ಅಸೋಸಿಯೇಷನ್‌ನ ಅಧ್ಯಕ್ಷ ಇಮ್ರಾನ್ ರಜಾ ಅನ್ಸಾರಿ, ಕೇಂದ್ರಾಡಳಿತ ಪ್ರದೇಶದ ಸ್ಥಿತಿಯ ಬಗ್ಗೆ ಚರ್ಚಿಸಲು ಶಾ ಅವರನ್ನು ಭೇಟಿಯಾಗಿದ್ದರು.

ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

ಹೀಗೆ ಮಹತ್ವದ ಸಭೆ ನಡೆದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ಸಿಗಲಿದೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆಗಸ್ಟ್ 5ರಂದು ರಾಜ್ಯ ಸ್ಥಾನಮಾನ ಘೋಷಿಸಬಹುದು ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ ಎಂದು ನಿವೃತ್ತ ಸೇನಾ ಅಧಿಕಾರಿ ಮತ್ತು ಲೇಖಕ ಕನ್ವಾಲ್ ಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಹಲವು ಸಂದರ್ಭಗಳಲ್ಲಿ ಯಾವುದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. 2023ರಲ್ಲಿ ಸುಪ್ರೀಂ ಕೋರ್ಟ್ ಕೂಡ ಸಾಧ್ಯವಾದಷ್ಟು ಬೇಗ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆ ಸೂಚಿಸಿತ್ತು.