ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಧಾನ ಕಚೇರಿಯ ಬಳಿ ಚೀನಾದಲ್ಲಿ ನಿರ್ಮಿತ ಅಸಾಲ್ಟ್ ರೈಫಲ್ ಸ್ಕೋಪ್ (Chinese-Made Rifle Scope) ಪತ್ತೆಯಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಜಮ್ಮು ಪ್ರದೇಶದ ಅಸ್ರಾಬಾದ್‌ನಲ್ಲಿ ಆರು ವರ್ಷದ ಬಾಲಕನೊಬ್ಬ ಸ್ಕೋಪ್‌ನೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದ್ದು, ನಂತರ ಅಧಿಕಾರಿಗಳು ಅವನ ಪೋಷಕರನ್ನು ಅದರ ಬಗ್ಗೆ ವಿಚಾರಿಸಿದ್ದಾರೆ. ಇಂದು ಬೆಳಿಗ್ಗೆ ಹುಡುಗನಿಗೆ ಹತ್ತಿರದ ಕಸದ ತೊಟ್ಟಿಯಲ್ಲಿ ಅದು ಸಿಕ್ಕಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಸ್ನೈಪರ್ ರೈಫಲ್‌ಗೆ ಜೋಡಿಸಬಹುದಾದ ಚೀನಾ ನಿರ್ಮಿತ ಸ್ಕೋಪ್ ಪತ್ತೆಯಾಗಿದ್ದು, ಜಮ್ಮು ಪ್ರದೇಶದ ಸಿಧ್ರಾದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳ ಜೋಡಣೆ ಕಂಡುಬಂದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) ತಂಡಗಳು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿವೆ.
ಉಗ್ರರ ಪತ್ತೆಗೆ ಕಾರ್ಯಾಚರಣೆ
ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯೊಳಗೆ ಉಗ್ರರು ನುಸುಳಿದ್ದಾರೆ. ಇಲ್ಲಿನ ಹಳ್ಳಿಯೊಂದರ ಮನೆಯಿಂದ ಆಹಾರ ತೆಗೆದುಕೊಂಡು ಹತ್ತಿರದ ಅರಣ್ಯ ಪ್ರದೇಶದೊಳಗೆ ನುಗ್ಗಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾರಂಭಿಸಿವೆ. ಡಿಸೆಂಬರ್ 15ರಂದು ಈ ಹಳ್ಳಿಯಿಂದ 5 ಕಿ.ಮೀ ದೂರದ ಮಜಲ್ಟಾ ಪ್ರದೇಶದ ಚೋರ್ ವೋಟು ಮತ್ತು ಅದರ ಪಕ್ಕದ ಅರಣ್ಯ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು.
ಜಮ್ಮು-ಕಾಶ್ಮೀರದ ಉಧಂಪುರ್‌ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ; ಪೊಲೀಸ್ ಹುತಾತ್ಮ
ಚೋರ್ ಮೋಟು ಗ್ರಾಮದಲ್ಲಿರುವ ಮಂಗ್ತು ರಾಮ್ ಅವರ ಮನೆಗೆ ಶನಿವಾರ ಸಂಜೆ 6.30ರ ಸುಮಾರಿಗೆ ಭೇಟಿ ನೀಡಿದ ಇಬ್ಬರು ಉಗ್ರರು ಆಹಾರ ಸೇವಿಸಿ, ಕೊಂಡೊಯ್ದಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಸಜ್ಜುಗೊಳಿಸಲಾಯಿತು. ಆದರೆ, ಭಯೋತ್ಪಾದಕರು ಪತ್ತೆಯಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮೊದಲು ಡಿಸೆಂಬರ್ 15ರಂದು ಮಜಲ್ಟಾ ಪ್ರದೇಶದ ಸೋನ್ ಗ್ರಾಮದಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಉಗ್ರರು ಈ ಪ್ರದೇಶದಲ್ಲಿ ಸುಳಿದಾಡುತ್ತಿದ್ದಾರೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು.