ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಂತರ್ ಮಂತರ್ ಪ್ರತಿಭಟನೆ ಕೇವಲ ಟ್ರೈಲರ್‌: ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಕೇಂದ್ರ ಸರ್ಕಾರಕ್ಕೆ ಕೊಟ್ಟ ಎಚ್ಚರಿಕೆ ಏನು?

Jantar Mantar Was Just a Trailer: ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಮೊದಲ ಬೀದಿ ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸ್ಥಾಪಕ ಅಭಿಜಿತ್ ದೀಪ್ಕೆ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ಈ ಚಳುವಳಿ ಕೇವಲ ಟ್ರೇಲರ್ ಅಷ್ಟೇ ಎಂದು ಹೇಳಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆಯ ದೃಶ್ಯ

ನವದೆಹಲಿ, ಜೂ. 7: ದೆಹಲಿಯ ಜಂತರ್‌ ಮಂತರ್‌ನಲ್ಲಿ (Jantar Mantar) ಕಾಕ್ರೋಚ್ ಜನತಾ ಪಾರ್ಟಿಯ (Cockroach Janata Party) ಮೊದಲ ಬೀದಿ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸ್ಥಾಪಕ ಅಭಿಜಿತ್ ದೀಪ್ಕೆ (Abhijit Dipke) ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು. ಜತೆಗೆ ಈ ಚಳುವಳಿ ಕೇವಲ ಟ್ರೈಲರ್‌ ಅಷ್ಟೇ ಎಂದು ಎಚ್ಚರಿಸಿದರು. “ನಿನ್ನೆ ನಾವು ಸಾವಿರಾರು ಜನರು ಇತಿಹಾಸ ನಿರ್ಮಿಸಿದ್ದೇವೆ. ಜಂತರ್ ಮಂತರ್‌ನಲ್ಲಿ ನಡೆದ ನಮ್ಮ ಶಾಂತಿಯುತ ಪ್ರತಿಭಟನೆ, ನಾವು ಒಗ್ಗಟ್ಟಾದಾಗ ‘ಕಾಕ್ರೋಚ್’ ಏನು ಮಾಡಬಲ್ಲವು ಎಂಬುದರ ಒಂದು ಟ್ರೈಲರ್‌ ಅನ್ನು ಸರ್ಕಾರಕ್ಕೆ ತೋರಿಸಿತು” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶನಿವಾರ (ಜೂನ್‌ 6) ನಡೆದ ಅಭಿಯಾನಕ್ಕೆ ಸೇರಿದ ಹೆಚ್ಚಿನ ಜನರು ಇದಕ್ಕೂ ಮೊದಲು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕೋಪ ಮತ್ತು ಹತಾಶೆಯನ್ನು ವ್ಯಕ್ತಪಡಿಸಲು ಅವರು ಸೇರಿದ್ದರು ಎಂದು ದೀಪ್ಕೆ ಹೇಳಿದ್ದಾರೆ. ʼʼನಾವು ನಮ್ಮ ಧ್ವನಿಯನ್ನು ಎತ್ತದಿದ್ದರೆ ಬದಲಾವಣೆ ಸಾಧ್ಯವಾಗುವುದಿಲ್ಲ. ಒಗ್ಗಟ್ಟಿನಿಂದ ಹಾಗೂ ಶಾಂತಿಯುತವಾಗಿ ನಡೆಯುವ ಚಳವಳಿಯನ್ನು ಸರ್ಕಾರ ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಜಿರಳೆಗಳು, ಅವರ ಬಗ್ಗೆ ಎಂದಿಗೂ ಭಯಪಡುವ ಅಗತ್ಯವಿಲ್ಲʼʼ ಎಂದು ಅವರು ತಿಳಿಸಿದ್ದಾರೆ.

ಅಭಿಜಿತ್ ದೀಪ್ಕೆ ಅವರ ಎಕ್ಸ್‌ ಪೋಸ್ಟ್‌:



ನೀಟ್ ಕರ್ಮಕಾಂಡ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಂಜೆ 5 ಗಂಟೆಯೊಳಗೆ ರಾಜೀನಾಮೆ ನೀಡಬೇಕು ಎಂದು ದೀಪ್ಕೆ ತಮ್ಮ ಭಾಷಣದಲ್ಲಿ ಆಗ್ರಹಿಸಿದ್ದರು. ನಂತರ ಸರ್ಕಾರವು ಕ್ರಮ ಕೈಗೊಳ್ಳಲು 7 ದಿನಗಳವರೆಗೆ ಗಡುವು ನೀಡುವುದಾಗಿ ಘೋಷಿಸಿದರು.

ಭಾರಿ ಭದ್ರತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ 5 ಬೇಡಿಕೆಗಳೇನು?

ʼʼಧರ್ಮೇಂದ್ರ ಪ್ರಧಾನ್ ಇಡೀ ಪೀಳಿಗೆಗೆ ಅನ್ಯಾಯ ಮಾಡಿದ್ದಾರೆ. ಮುಂದಿನ 7 ದಿನಗಳಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸದಿದ್ದರೆ ಅಥವಾ ಅವರು ಕೆಳಗಿಳಿಯದಿದ್ದರೆ, ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸಬೇಕಾಗುತ್ತದೆʼʼ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ನೀಟ್ ಪರೀಕ್ಷಾ ಅಕ್ರಮ ಮತ್ತು ನೇಮಕಾತಿ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು, ಪೋಷಕರು, ಉದ್ಯೋಗಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿನ ವ್ಯವಸ್ಥಿತ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ಮಹಾರಾಷ್ಟ್ರದ ನಾಗ್ಪುರದಿಂದ ಬಂದಿದ್ದೇನೆ ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಭಾರಿ ಭದ್ರತಾ ನಿಯೋಜನೆ ಮಾಡಲಾಗಿತ್ತು. ಜಂತರ್ ಮಂತರ್ ಮತ್ತು ನಗರದಾದ್ಯಂತದ ಇತರ ಆಯಕಟ್ಟಿನ ಸ್ಥಳಗಳಲ್ಲಿ 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಅಂತಾರಾಜ್ಯ ಬಸ್ ಟರ್ಮಿನಲ್‌ಗಳು ಮತ್ತು ಗಡಿ ಪ್ರವೇಶ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ದೆಹಲಿ ಪೊಲೀಸರಿಗೆ ಸಹಾಯ ಮಾಡಲು ಸುಮಾರು 40 ಕಂಪನಿಗಳ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು.