Ramdas Soren: ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೆನ್ ನಿಧನ
ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೇನ್ (62) ಶುಕ್ರವಾರ ತಡರಾತ್ರಿ ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆ. 2 ರಂದು ತಮ್ಮ ನಿವಾಸದ ಸ್ನಾನಗೃಹದಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದ ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೆನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು.


ರಾಂಚಿ: ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೇನ್ (Ramdas Soren) (62) ಶುಕ್ರವಾರ ತಡರಾತ್ರಿ ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆ. 2 ರಂದು ತಮ್ಮ ನಿವಾಸದ ಸ್ನಾನಗೃಹದಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದ ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೆನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು. ಅವರು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಘಟ್‌ಶಿಲಾದಿಂದ ಮೂರು ಅವಧಿಗೆ ಶಾಸಕರಾಗಿದ್ದರು. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರಿಗೆ ಪ್ರಜ್ಞೆ ಬಂದಿರಲಿಲ್ಲ. ಇಂದು ಅವರು ನಿಧನರಾಗಿದ್ದಾರೆ. ಅವರ ಸಾವಿಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಹೇಮಂತ್ ಸೊರೆನ್ , ನೀವು ನಮ್ಮನ್ನು ಅಗಲಿ ಈ ರೀತಿ ಹೋಗಬಾರದಿತ್ತು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಜನವರಿ 1, 1963 ರಂದು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಘೋರಬಂದಾ ಗ್ರಾಮದಲ್ಲಿ ಜನಿಸಿದ ಸೊರೇನ್, ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದವರು.
ಘೋರಬಂದಾ ಪಂಚಾಯತ್‌ನ ಗ್ರಾಮ ಪ್ರಧಾನ್ ಆಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಅವರು, ಅಂತಿಮವಾಗಿ ಹೇಮಂತ್ ಸೊರೇನ್ ನೇತೃತ್ವದ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರಾದರು. ಸೊರೆನ್ 2009 ರ ಘಟ್ಶಿಲಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಜಾರ್ಖಂಡ್ ವಿಧಾನಸಭೆಗೆ ಸದಸ್ಯರಾದರು. 2014 ರಲ್ಲಿ ಅವರು ಬಿಜೆಪಿಯ ಲಕ್ಷ್ಮಣ್ ತುಡು ವಿರುದ್ಧ ಸೋತರೂ, 2019 ರಲ್ಲಿ ಮತ್ತೆ ಆ ಸ್ಥಾನವನ್ನು ಗೆದ್ದರು.
ಈ ಸುದ್ದಿಯನ್ನೂ ಓದಿ: Shibu Soren: ಜಾರ್ಖಂಡ್ ಮಾಜಿ ಸಿಎಂ, JMM ಸಂಸ್ಥಾಪಕ ಶಿಬು ಸೊರೇನ್ ಇನ್ನಿಲ್ಲ
2024 ರಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ಪುತ್ರ ಬಿಜೆಪಿಯ ಬಾಬುಲಾಲ್ ಸೊರೆನ್ ಅವರನ್ನು ಸೋಲಿಸುವ ಮೂಲಕ ಸೊರೆನ್ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಹೇಮಂತ್ ಸೊರೆನ್ ಸರ್ಕಾರದಲ್ಲಿ ಇವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿಯನ್ನು ರಾಮದಾಸ್ ಸೊರೆನ್ ಅಗಲಿದ್ದಾರೆ.