ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೆಪಿಎಸ್‌ಸಿ ಪರೀಕ್ಷೆ ರದ್ದುಪಡಿಸಲು ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಹೋರಾಟ ತೀವ್ರ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಎಂಟ್ರಿಗೆ ವಿರೋಧ; ಆಗಸ್ಟ್ 10ರಂದು ಬೃಹತ್ ಪ್ರತಿಭಟನೆ

Jharkhand Protest: ಜಾರ್ಖಂಡ್‌ನಲ್ಲಿ ಜೆಪಿಎಸ್‌ಸಿ ಹಾಗೂ ಜೆಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರು ರಾಜಕೀಯ ಹಸ್ತಕ್ಷೇಪವನ್ನು ತಿರಸ್ಕರಿಸಿದ್ದು, ಆಗಸ್ಟ್ 10ರಂದು ವಿಧಾನಸಭೆ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜೆಪಿಎಸ್‌ಸಿ ಪರೀಕ್ಷೆ ರದ್ದುಪಡಿಸುವಂತೆ ರಾಂಚಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ರಾಂಚಿ, ಆ. 5: ಜಾರ್ಖಂಡ್ ಲೋಕಸೇವಾ ಆಯೋಗದ (JPSC) 14ನೇ ಸಂಯುಕ್ತ ನಾಗರಿಕ ಸೇವಾ ಪರೀಕ್ಷೆ ಹಾಗೂ ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ (JSSC-CGL) ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಜುಲೈ 25ರಿಂದ ಆರಂಭವಾದ ಈ ಹೋರಾಟ 24ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, 11ನೇ ದಿನಕ್ಕೂ ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ರಾಜಕೀಯ ಪ್ರಭಾವದಿಂದ ಮುಕ್ತವಾಗಿಡುವ ನಿರ್ಧಾರ ಕೈಗೊಂಡಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಹಸ್ತಕ್ಷೇಪವನ್ನು ತಿರಸ್ಕರಿಸಿದ್ದಾರೆ. ಇದೇ ವೇಳೆ ಕಾಕ್ರೋಚ್‌ ಜನತಾ ಪಕ್ಷ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿ ಕೆಲ ರಾಜಕೀಯ ವ್ಯಕ್ತಿಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಪ್ರಕಾರ, ಅಭಿಜಿತ್ ದೀಪ್ಕೆ ತಮ್ಮೊಂದಿಗೆ ನಡೆಸಿದ 10 ನಿಮಿಷಗಳ ಸಂಭಾಷಣೆಯನ್ನು ಕೇವಲ ಒಂದು ನಿಮಿಷದ ವಿಡಿಯೊ ಮಾಡಿ, ಕಾಂಗ್ರೆಸ್ ವಿರುದ್ಧದ ಆರೋಪಗಳು ಹಾಗೂ ಪ್ರತಿಭಟನಾಕಾರರ ಹೇಳಿಕೆಗಳನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಹೋರಾಟದ ನೈಜ ಉದ್ದೇಶವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ನಾಯಕರು, ತಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧವಲ್ಲ, ಭ್ರಷ್ಟ ಮತ್ತು ದೋಷಪೂರಿತ ನೇಮಕಾತಿ ವ್ಯವಸ್ಥೆಯ ವಿರುದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನಾ ವೇದಿಕೆಯನ್ನು ಯಾವುದೇ ರಾಜಕೀಯ ಪಕ್ಷ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದ್ದಾರೆ.

ಜಾರ್ಖಂಡ್ ಪ್ರತಿಭಟನೆಗೆ ಸಿಜೆಪಿಯ ಅಭಿಜಿತ್ ದೀಪ್ಕೆ ಬೆಂಬಲ: ಮುಂದುವರಿದ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ

ಇದರ ನಡುವೆ, ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸಂಸ್ಥಾಪಕ ಶಿಬು ಸೊರೇನ್ ಅವರ ಪುಣ್ಯತಿಥಿಯ ಅಂಗವಾಗಿ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಮೆರವಣಿಗೆ ನಡೆಸಿದರು. ಜತೆಗೆ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಇನ್ನೂ ಐವರು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ.

ಪ್ರತಿಭಟನಾಕಾರರು 14ನೇ JPSC ಪ್ರಾಥಮಿಕ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕು ಹಾಗೂ TDPL ಸಂಸ್ಥೆ ಮೂಲಕ ನಡೆದ ಪರೀಕ್ಷೆಗಳ ಪರಿಶೀಲನೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದಲ್ಲದೆ, ಆಗಸ್ಟ್ 10ರಂದು ರಾಂಚಿಯ ವಿಧಾನಸಭೆ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಘೋಷಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಂಚಿ ನಗರವನ್ನು ಬಂದ್ ಮಾಡುವ ಮಟ್ಟದ ಪ್ರತಿಭಟನೆ ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಆಡಳಿತ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಹೋರಾಟ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.