ಲಖನೌ, ಮೇ 31: ಬಿ.ಎಡ್ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಉದ್ಯೋಗಾಕಾಂಕ್ಷಿಗಳು ಚರಂಡಿಗೆ ಬಿದ್ದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ಪರೀಕ್ಷಾ ಕೇಂದ್ರದ ಹೊರಗೆ ಶಿಥಿಲಗೊಂಡ ಕಾಂಕ್ರೀಟ್ ಚಪ್ಪಡಿ ಕುಸಿದ ಪರಿಣಾಮ ಆಕಾಂಕ್ಷಿಗಳು ಒಳಚರಂಡಿಗೆ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎಚ್‌ಎನ್ ಮಿಶ್ರಾ ಪಿಜಿ ಕಾಲೇಜಿನ ಬಳಿ ಈ ಘಟನೆ ನಡೆದಿದ್ದು, ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಅಗತ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆಯಲು ಅಭ್ಯರ್ಥಿಗಳು ಹತ್ತಿರದ ಫೋಟೋ ಕಾಪಿ ಅಂಗಡಿಯಲ್ಲಿ ಜಮಾಯಿಸಿದ್ದರು. ಈ ವೇಳೆ ಭಾರ ಹೆಚ್ಚಾಗಿ ಕಾಂಕ್ರೀಟ್ ಚಪ್ಪಡಿ ಕುಸಿಯಿತು.
ಹಲವು ಅಭ್ಯರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಪರೀಕ್ಷೆಗೆ ಮುಂಚಿತವಾಗಿ ದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ಮಾರುಕಟ್ಟೆ ಪ್ರದೇಶಕ್ಕೆ ಒಮ್ಮೆಲೆ ಧಾವಿಸಿದರು. ಅಂಗಡಿಯ ಹೊರಗಿದ್ದ ಚರಂಡಿಯ ಮೇಲೆ ಹಳೆಯ ಕಾಂಕ್ರೀಟ್ ಚಪ್ಪಡಿ ಹಾಕಲಾಗಿತ್ತು. ಇದರ ಮೇಲೆ ಹಲವರು ಏಕಕಾಲದಲ್ಲಿ ನಿಂತಿದ್ದರಿಂದ ಭಾರವನ್ನು ಹೊರಲಾಗದೆ ಶಿಥಿಲಗೊಂಡ ಚಪ್ಪಡಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು. ಸುಮಾರು 20ರಿಂದ 25 ಅಭ್ಯರ್ಥಿಗಳು ಮತ್ತು ಸಹಾಯಕರು ಚರಂಡಿಗೆ ಬಿದ್ದರು ಎಂದು ಮೂಲಗಳು ತಿಳಿಸಿವೆ.
ವಿಡಿಯೊ ಇಲ್ಲಿದೆ:
ಈ ಘಟನೆಯಿಂದ ಭಯಭೀತರಾದ ಅಭ್ಯರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸುರಕ್ಷಿತ ಸ್ಥಳಕ್ಕೆ ದೌಡಾಯಿಸಿದರು. ನಿವಾಸಿಗಳು ಮತ್ತು ಇತರ ಆಕಾಂಕ್ಷಿಗಳು ಚರಂಡಿಯಲ್ಲಿ ಸಿಲುಕಿದ್ದವರನ್ನು ಹೊರ ಕರೆತರಲು ಸಹಾಯ ಮಾಡಿದರು. ಘಟನೆಯಲ್ಲಿ ನಾಲ್ವರು ಅಭ್ಯರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇತರ ಹಲವರ ಬಟ್ಟೆ, ಪುಸ್ತಕಗಳು, ಪ್ರವೇಶ ಪತ್ರಗಳು ಮತ್ತು ಇತರ ದಾಖಲೆಗಳು ಹಾನಿಗೊಳಗಾಗಿವೆ. ಗಾಯಗೊಂಡ ಒಬ್ಬ ಪೋಷಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚರಂಡಿ ನೀರಿನಲ್ಲಿ ಹಣ್ಣು ತೊಳೆದ ಮಾರಾಟಗಾರನ ವಿಡಿಯೊ ವೈರಲ್
ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಆ ಪ್ರದೇಶದಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು. ʼʼಶಿಥಿಲಗೊಂಡ ಸ್ಲ್ಯಾಬ್ ಮೇಲೆ ಒಂದೇ ಸಮಯದಲ್ಲಿ ಹಲವರು ಜನರು ನಿಂತಿದ್ದರಿಂದ ದುರ್ಘಟನೆ ಸಂಭವಿಸಿದೆʼʼ ಎಂದು ಎಸಿಪಿ ಕರ್ನಲ್ಗಂಜ್ ಚಿತ್ರಾಂಶು ಗೌತಮ್ ಹೇಳಿದ್ದಾರೆ.
ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ಅಭ್ಯರ್ಥಿಗಳು ನಗರ ನಿಗಮ್ ಮಾರುಕಟ್ಟೆ ಪ್ರದೇಶದ ಅಂಗಡಿಯೊಂದಕ್ಕೆ ತೆರಳಿದ್ದರು ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ. ʼʼಹೆಚ್ಚಿನ ಜನರು ನಿಂತಿದ್ದರಿಂದ ಹಳೆಯ ಡ್ರೈನ್ ಸ್ಲ್ಯಾಬ್ ಕುಸಿದಿದೆ. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲʼʼ ಎಂದು ಲಾಲ್ ವಿವರಿಸಿದ್ದಾರೆ. ಅಡಚಣೆಯ ಹೊರತಾಗಿಯೂ, ಎಲ್ಲ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದರು.
ಕೊನೆಯ ಕ್ಷಣದ ಎಡವಟ್ಟು
ಆಧಾರ್ ಕಾರ್ಡ್‌ಗಳ ನಕಲು ಪ್ರತಿಗಳು ಅಗತ್ಯವಿದೆ ಎಂದು ಅಭ್ಯರ್ಥಿಗಳಿಗೆ ಕೊನೆಯ ಕ್ಷಣದಲ್ಲಿ ತಿಳಿಸಲಾಗಿತ್ತು. ಇದರಿಂದಾಗಿ ಹತ್ತಿರದ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಯಿತು. ಮೊದಲೇ ಶಿಥಿಲಗೊಂಡಿದ್ದ ಸ್ಲ್ಯಾಬ್ ಜನರ ಭಾರವನ್ನು ತಡೆದುಕೊಳ್ಳಲಾಗದೆ ಕುಸಿದು ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಘಟನೆಯ ಹೊರತಾಗಿಯೂ ಉತ್ತರ ಪ್ರದೇಶ ಬಿ.ಎಡ್ ಜಂಟಿ ಪ್ರವೇಶ ಪರೀಕ್ಷೆಯನ್ನು ನಗರದ 19 ಕೇಂದ್ರಗಳಲ್ಲಿ ನಿಗದಿಯಂತೆ ಬಿಗಿ ಭದ್ರತಾ ವ್ಯವಸ್ಥೆಯಲ್ಲಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.