ನವದೆಹಲಿ: ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿದ್ದ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಸುದೀರ್ಘ ಕಾನೂನು ಸಂಘರ್ಷದ ಬಳಿಕ ಅಂತಿಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ನ್ಯಾಯಮೂರ್ತಿ ವರ್ಮಾ ಈ ಹಠಾತ್ ನಿರ್ಧಾರಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.
ಈ ಪತ್ರವನ್ನು ಸಲ್ಲಿಸಲು ನನ್ನನ್ನು ನಿರ್ಬಂಧಿಸಿದ ಕಾರಣಗಳಿಂದ ನಿಮ್ಮ ಗೌರವಾನ್ವಿತ ಕಚೇರಿಯ ಮೇಲೆ ಹೊರೆ ಹಾಕಲು ನಾನು ಪ್ರಸ್ತಾಪಿಸುವುದಿಲ್ಲವಾದರೂ, ಅಲಹಾಬಾದ್‌ನ ಗೌರವಾನ್ವಿತ ಹೈಕೋರ್ಟ್‌ನ ನ್ಯಾಯಾಧೀಶ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಲು ತೀವ್ರ ದುಃಖವಾಗುತ್ತಿದೆ" ಎಂದು ಏಪ್ರಿಲ್ 9 ರಂದು ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ. ಅವರು ರಾಜೀನಾಮೆ ನೀಡುವುದರೊಂದಿಗೆ, ಅವರನ್ನು ಹೈಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ತೆಗೆದುಹಾಕುವ ಮಹಾಭಿಯೋಗ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಲೋಕಸಭಾ ಸಚಿವಾಲಯದ ಮೂಲಗಳು ತಿಳಿಸಿವೆ.
ಮಾರ್ಚ್ 14, 2025ರಂದು ದೆಹಲಿಯಲ್ಲಿದ್ದ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದ ಸ್ಟೋರ್ ರೂಂನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅಲ್ಲಿ ಕಂಡ ದೃಶ್ಯ ದಂಗು ಬಡಿಸಿತ್ತು. ಅಲ್ಲಿ ಅಪಾರ ಪ್ರಮಾಣದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳಿದ್ದವು. ಕಂತೆ ನೋಟಿನ ವಿಡಿಯೋ ಭಾರೀ ವೈರಲ್ ಆಗಿದ್ದವು. ಆ ಸಮಯದಲ್ಲಿ ನ್ಯಾಯಮೂರ್ತಿ ವರ್ಮಾ ಮತ್ತು ಅವರ ಪತ್ನಿ ಭೋಪಾಲ್‌ನಲ್ಲಿದ್ದರು. ತಾವು ಅಥವಾ ತಮ್ಮ ಕುಟುಂಬ ಸದಸ್ಯರು ಸ್ಟೋರ್ ರೂಂನಲ್ಲಿ ಎಂದಿಗೂ ಹಣವನ್ನು ಇಟ್ಟುಕೊಂಡಿಲ್ಲ ಎಂದು ಅವರು ಹೇಳಿಕೊಂಡಿದ್ದರು.
ಮಾರ್ಚ್ 22, 2025 ರಂದು, ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಆಂತರಿಕ ತನಿಖೆ ನಡೆಸಲು ಮೂವರು ನ್ಯಾಯಾಧೀಶರ ಸಮಿತಿಯನ್ನು ರಚಿಸಿತ್ತು. ಮೇ 4 ರಂದು, ಮೂವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ತನ್ನ ವರದಿಯನ್ನು ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಸಲ್ಲಿಸಿತು.
ಈ ವಿವಾದದ ಬಳಿಕ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಏಪ್ರಿಲ್ 5, 2025 ರಂದು ಅಲ್ಲಿ ಪ್ರಮಾಣವಚನ ಸ್ವೀಕರಿಸಿದರಾದರೂ, ವರ್ಗಾವಣೆಯ ಬಗ್ಗೆಯೂ ಕಾನೂನು ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಕಳೆದ ಜುಲೈನಲ್ಲಿ, ನ್ಯಾಯಮೂರ್ತಿ ವರ್ಮಾ ಅವರನ್ನು ನ್ಯಾಯಾಧೀಶ ಸ್ಥಾನದಿಂದ ತೆಗೆದುಹಾಕಲು ಮಹಾಭಿಯೋಗ ಪ್ರಕ್ರಿಯೆ ಪ್ರಾರಂಭವಾಯಿತು. ಆಗಸ್ಟ್‌ನಲ್ಲಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.