ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ʼ2 ದಿನ ಕಾಯಿರಿ’': ಬಿಜೆಪಿ ತೊರೆಯುವ ವದಂತಿಯ ನಡುವೆ ಹೊಸ ಸಾಹಸದ ಸುಳಿವು ನೀಡಿದ ಅಣ್ಣಾಮಲೈ

K Annamalai: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಕುರಿತು ಊಹಾಪೋಹಗಳು ತೀವ್ರಗೊಂಡಿವೆ. ಹೊಸ ಪಕ್ಷ ಅಥವಾ ಜನ ಚಳುವಳಿ ಆರಂಭಿಸುವ ಕುರಿತಾದ ವರದಿಗಳನ್ನು ಅವರು ನೇರವಾಗಿ ತಳ್ಳಿ ಹಾಕದೆ, "ಇನ್ನೆರಡು ದಿನ ಕಾಯಿರಿ" ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ದಿಲ್ಲಿ ಪ್ರವಾಸದ ನಡುವೆಯೇ ಬಿಜೆಪಿ ತೊರೆಯುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿದ್ದು, ಅವರ ಬೆಂಬಲಿಗರ ಬೃಹತ್ ಪೋಸ್ಟರ್‌ಗಳು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.

ಅಣ್ಣಾಮಲೈ (ಸಂಗ್ರಹ ಚಿತ್ರ)

ಚೆನ್ನೈ, ಜೂ. 1: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರ ಮುಂದಿನ ರಾಜಕೀಯ ನಡೆ ಕುರಿತಾದ ಊಹಾಪೋಹಗಳು ತೀವ್ರಗೊಂಡಿವೆ. ಅವರು ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ, ತಾವು ಹೊಸ ರಾಜಕೀಯ ಸಾಹಸಕ್ಕೆ ಕೈಹಾಕಲಿದ್ದಾರೆ ಎಂಬ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸದೆ ಕುತೂಹಲ ಮೂಡಿಸಿದ್ದಾರೆ. ಹೊಸ ಪಕ್ಷ ಸ್ಥಾಪನೆಯ ವದಂತಿಗಳ ಕುರಿತು ಚೆನ್ನೈನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿದ ಅಣ್ಣಾಮಲೈ, "ದಯವಿಟ್ಟು ಕಾಯಿರಿ. ನಾವು ಎರಡು ದಿನಗಳಲ್ಲಿ ಕುಳಿತು ಮಾತನಾಡೋಣ" ಎಂದು ಮಾರ್ಮಿಕವಾಗಿ ಹೇಳಿದರು. ಅವರ ಈ ಹೇಳಿಕೆಯು ಮಾಜಿ ಐಪಿಎಸ್ ಅಧಿಕಾರಿಯ ರಾಜಕೀಯ ಭವಿಷ್ಯದ ಕುರಿತು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಮೂಲಗಳ ಪ್ರಕಾರ, ಅಣ್ಣಾಮಲೈ ಮಂಗಳವಾರವೇ ಬಿಜೆಪಿಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಕ್ಷದಿಂದ ಹೊರ ನಡೆಯುವ ಪ್ರಕ್ರಿಯೆಯು ಯಾವುದೇ ಸಾರ್ವಜನಿಕ ಭಿನ್ನಾಭಿಪ್ರಾಯಗಳಿಲ್ಲದೆ ಸೌಹಾರ್ದಯುತವಾಗಿರಬೇಕು ಎಂದು ಅವರು ಬಯಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದರು.

ಬಿಜೆಪಿ ನಿರ್ಗಮನದ ವದಂತಿ, ಹೊಸ ಚಳುವಳಿ

ಮೂಲಗಳ ಪ್ರಕಾರ, ಅಣ್ಣಾಮಲೈ ಸದ್ಯದಲ್ಲೇ ಹೊಸದೊಂದು 'ಜನ ಚಳುವಳಿ'ಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಆದರೆ ಇದು ಮುಂದೆ ರಾಜಕೀಯ ಪಕ್ಷವಾಗಿ ಬದಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೇ ವೇಳೆ ಅವರ ಜನ್ಮದಿನದ ಅಂಗವಾಗಿ ಕೊಯಮತ್ತೂರಿನಾದ್ಯಂತ ಅವರ ಬೆಂಬಲಿಗರು ಬೃಹತ್ ಪೋಸ್ಟರ್‌ಗಳನ್ನು ಅಳವಡಿಸಿರುವುದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ. "ನಮ್ಮ ನಾಯಕನೇ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ" ಎಂಬಂತಹ ಘೋಷಣೆಗಳಿರುವ ಈ ಪೋಸ್ಟರ್‌ಗಳನ್ನು ಅಣ್ಣಾಮಲೈ ಅವರ ಸಾಂಘಿಕ ಶಕ್ತಿ ಪ್ರದರ್ಶನ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯೊಂದಿಗೆ ವೈಮಸ್ಸು? ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರ ಅಣ್ಣಾಮಲೈ?

2020ರಲ್ಲಿ ಬಿಜೆಪಿ ಸೇರಿದ ಅಣ್ಣಾಮಲೈ, ತಮಿಳುನಾಡಿನಲ್ಲಿ ಪಕ್ಷದ ಪ್ರಮುಖ ನಾಯಕರಾಗಿ ಅತ್ಯಂತ ವೇಗವಾಗಿ ಬೆಳೆದರು. 2021ರಿಂದ 2025ರವರೆಗೆ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ರಾಜ್ಯಾದ್ಯಂತ ನಡೆಸಿದ ಪಾದಯಾತ್ರೆಗಳ ಮೂಲಕ ಗಮನ ಸೆಳೆದರು. ಆದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಕೊಯಮತ್ತೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡದ ಕಾರಣ ಮತ್ತು ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ಅವರು ಬಹಿರಂಗವಾಗಿ ಟೀಕಿಸಿದ್ದರಿಂದ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ.

ಆದಾಗ್ಯೂ, ಈ ಎಲ್ಲ ಭಿನ್ನಾಭಿಪ್ರಾಯಗಳ ಊಹಾಪೋಹಗಳನ್ನು ತಳ್ಳಿಹಾಕಿರುವ ಬಿಜೆಪಿ ಹಿರಿಯ ನಾಯಕರು, ಅಣ್ಣಾಮಲೈ ಪಕ್ಷದ ಸದ್ಧಾಂತಿಕ ಚೌಕಟ್ಟಿಗೆ ಬದ್ಧರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರ ದಿಲ್ಲಿ ಪ್ರವಾಸ ಮತ್ತು ಎರಡು ದಿನಗಳ ಗಡುವು ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವುದಂತೂ ನಿಜ.