ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elephant: ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್‌ ವನ್‌

2017ರಲ್ಲಿ ದೇಶದ ಕಾಡುಗಳಲ್ಲಿ 27,312 ಆನೆಗಳಿದ್ದವು. 2025ರಲ್ಲಿ ಈ ಸಂಖ್ಯೆ 22,446ಕ್ಕೆ ಇಳಿದಿದೆ. ಆನೆಗಳ (Elephant) ಸಂಖ್ಯೆಯಲ್ಲಿ ಶೇ.18ರಷ್ಟು ಅಂದರೆ 5000ದಷ್ಟು ಇಳಿಕೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 6,013 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆನೆ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆ ಪಡೆದಿದೆ.

ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್‌ ವನ್‌

-

ಹರೀಶ್‌ ಕೇರ ಹರೀಶ್‌ ಕೇರ Oct 15, 2025 7:37 AM

ನವದೆಹಲಿ: ಭಾರತದಲ್ಲಿ (India) ಒಟ್ಟು 22,446 ಆನೆಗಳಿವೆ. 2017ಕ್ಕೆ ಹೋಲಿಸಿದರೆ ಆನೆಗಳ (Elephant) ಸಂಖ್ಯೆಯಲ್ಲಿ ಶೇ.18ರಷ್ಟು ಅಂದರೆ 5000ದಷ್ಟು ಇಳಿಕೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ನಡುವೆ, 6013 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ (Karnataka) ಈಗಲೂ ಮೊದಲ ಸ್ಥಾನದಲ್ಲಿದೆ ಎಂದು 2025ನೇ ಸಾಲಿನ ಅಖಿಲ ಭಾರತ ಸಿಂಕ್ರೊನಸ್ ಆನೆ ಅಂದಾಜು ವರದಿ (ಎಸ್‌ಎಐಇಇ) ತಿಳಿಸಿದೆ.

2017ರಲ್ಲಿ ದೇಶದ ಕಾಡುಗಳಲ್ಲಿ 27,312 ಆನೆಗಳಿದ್ದವು. 2025ರಲ್ಲಿ ಈ ಸಂಖ್ಯೆ 22,446ಕ್ಕೆ ಇಳಿದಿದೆ. 2021ರಲ್ಲಿ ನಡೆಸಲಾದ ಸಮೀಕ್ಷೆಯ ವರದಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಅದರನ್ವಯ, ಪಶ್ಚಿಮ ಘಟ್ಟಗಳು 11,934 ಆನೆಗಳೊಂದಿಗೆ ಅತಿದೊಡ್ಡ ನೆಲೆಯಾಗಿ ಉಳಿದಿವೆ. 6,559 ಆನೆಗಳೊಂದಿಗೆ ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹಪಾತ್ರದ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಶಿವಾಲಿಕ್‌ ಪರ್ವತ ಮತ್ತು ಗಂಗಾಬಯಲಿನಲ್ಲಿ 2,062 ಆನೆಗಳಿವೆ. ಮಧ್ಯಭಾರತ ಮತ್ತು ಪೂರ್ವ ಘಟ್ಟಗಳು ಸೇರಿ 1,891 ಆನೆಗಳಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Tiger Kill: ಸೇಡು ತೀರಿಸಿಕೊಳ್ಳಲು ಹುಲಿಯ ಕೊಂದು ಮೂರು ತುಂಡು ಮಾಡಿದ ನಾಲ್ಕು ಪಾಪಿಗಳ ಸೆರೆ

6,013 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆನೆ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆ ಪಡೆದಿದೆ. ಅಸ್ಸಾಂ (4,159), ತಮಿಳುನಾಡು (3,136), ಕೇರಳ (2,785), ಉತ್ತರಾಖಂಡ (1,792) ಹಾಗೂ ಒಡಿಶಾ (912) ನಂತರದ ಸ್ಥಾನದಲ್ಲಿವೆ. ಛತ್ತೀಸಗಢ ಮತ್ತು ಜಾರ್ಖಂಡ ಎರಡೂ ರಾಜ್ಯಗಳು ಸೇರಿ 650 ಆನೆಗಳಿವೆ. ಮಧ್ಯಪ್ರದೇಶ (97) ಮತ್ತು ಮಹಾರಾಷ್ಟ್ರ (63) ಅತಿ ಕಡಿಮೆ ಆನೆಗಳನ್ನು ಹೊಂದಿವೆ ಎಂದು ವರದಿ ತಿಳಿಸಿದೆ.