ಚೆನ್ನೈ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ (Karthigai Deepam) ಇಂದು ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ. ಸಂಜೆ ಸರಿಯಾಗಿ 5 ಗಂಟೆಗೆ ದೀಪತೂಣ್ ಕಂಬದ ಮೇಲೆ ದೀಪ ಹಚ್ಚಲಾಯಿತು. ದೀಪ ಬೆಳಗಿಸುವ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರ ನೇತೃತ್ವದಲ್ಲಿ ಅರ್ಚಕರು ಬೆಟ್ಟದ ಮೇಲಕ್ಕೆ ತೆರಳಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಕಳೆದ ನವೆಂಬರ್ 20ರಂದು ದೀಪತೂಣ್ ಕಂಬದ ಮೇಲೆ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ ನವೆಂಬರ್ 24ರಂದು ನಡೆದ ವಾರ್ಷಿಕ ಕಾರ್ತಿಕ ದೀಪೋತ್ಸವದಂದು ಅಲ್ಲಿ ದೀಪ ಬೆಳಗದೆ, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಬಳಿ ದೀಪ ಬೆಳಗಲಾಗಿತ್ತು.ಇದಾದ ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರು ರಿಸೀವರ್‌ಗಳನ್ನು ನೇಮಿಸಿತ್ತು.
ವಿಡಿಯೋ ನೋಡಿ
Historic day for India Ceremonial Karthigai Deepam is lit at the Deepathoon stone pillar at Thiruparankundram Hill. https://t.co/12OOWRtxSI
— News Algebra (@NewsAlgebraIND) November 28, 2026
ಇಂದು ದೀಪ ಬೆಳಗಿಸಲು 30 ಕೆಜಿ ತುಪ್ಪ, 50 ಮೀಟರ್ ಹತ್ತಿಯ ಬತ್ತಿ ಮತ್ತು 5 ಕೆಜಿ ಕರ್ಪೂರವನ್ನು ಬಳಸಲಾಯಿತು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಬೆಟ್ಟದ ತುದಿಗೆ ಬಿಗಿ ಭದ್ರತೆ ಒದಗಿಸಿದ್ದರು ಮತ್ತು ಕೇವಲ 50 ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸಲಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿ 'ವೆಟ್ರಿವೇಲ್ ಮುರುಗನುಕ್ಕು ಅರೋಹರ' ಎಂಬ ಘೋಷಣೆಗಳೊಂದಿಗೆ ದೀಪವನ್ನು ಕಣ್ತುಂಬಿಕೊಂಡರು.
ಏನಿದು ವಿವಾದ?
ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟವು ಮುರುಗನ್ ಸ್ವಾಮಿಯ ಆರು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಬೆಟ್ಟದ ಬುಡದಲ್ಲಿ ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವಿದ್ದು, ಬೆಟ್ಟದ ತುದಿಯ ಸಮೀಪ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾ ಇದೆ. ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿ 'ದೀಪತೂನ್' ಎಂಬ ಪುರಾತನ ಕಲ್ಲಿನ ಕಂಬವಿದೆ. ಹಿಂದೂ ಸಂಘಟನೆಗಳು ಮತ್ತು ಭಕ್ತರು ಇದನ್ನು ಪವಿತ್ರ ದೀಪಸ್ತಂಭವೆಂದು ಪರಿಗಣಿಸಿ, ಕಾರ್ತಿಕ ಮಾಸದಲ್ಲಿ ಇಲ್ಲಿ ದೀಪ ಬೆಳಗಲು ದಶಕಗಳಿಂದ ಒತ್ತಾಯಿಸುತ್ತಿದ್ದರು.