ಲಖನೌ, ಜ. 10: ರಾಮ ಮಂದಿರ (Ayodhya Ram Mandir) ಸಂಕೀರ್ಣದೊಳಗೆ ನಮಾಜ್ ಮಾಡಲು ಯತ್ನಿಸಿದ ಮತ್ತು ತಡೆದಾಗ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕಾಶ್ಮೀರದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆ ವ್ಯಕ್ತಿಯನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ.
55 ವರ್ಷದ ವ್ಯಕ್ತಿಯು ಶುಕ್ರವಾರ (ಜನವರಿ 9) ಹೆಚ್ಚಿನ ಭದ್ರತೆಯಿರುವ ದೇವಾಲಯದ ಆವರಣಕ್ಕೆ ಪ್ರವೇಶಿಸಿದ್ದಾನೆ. ನಂತರ ಸೀತಾ ರಸೋಯಿ ಪ್ರದೇಶದ ಬಳಿ ಕುಳಿತು, ಅಲ್ಲಿ ನಮಾಜ್ ಮಾಡಲು ಸಿದ್ಧತೆ ನಡೆಸುತ್ತಿದ್ದನೆಂದು ಹೇಳಲಾಗಿದೆ.
ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ 2 ವರ್ಷ; ಇದು ನಂಬಿಕೆ, ಪರಂಪರೆಯ ಹಬ್ಬ ಎಂದ ಪ್ರಧಾನಿ ಮೋದಿ
ಆತನ ಕೃತ್ಯವನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯ ಪ್ರವೇಶಿಸಿದರು. ದೇವಾಲಯದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ನಂತರ ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದರು. ಕೆಲವು ಮೂಲಗಳು ಹೇಳುವಂತೆ, ಆ ವ್ಯಕ್ತಿಯನ್ನು ತಡೆದಾಗ ಘೋಷಣೆಗಳನ್ನು ಕೂಗಿದ್ದಾನೆ ಎನ್ನಲಾಗಿದೆ. ಆದರೆ ಈ ಹೇಳಿಕೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ಪೊಲೀಸರು ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಆತನ ಉದ್ದೇಶವನ್ನು ತಿಳಿದುಕೊಳ್ಳಲು ವಿಚಾರಣೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಆತ ಅಯೋಧ್ಯೆಗೆ ಏಕೆ ಬಂದಿದ್ದ, ಈ ಘಟನೆಯಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಸೇರಿದಂತೆ ಆತನ ಪ್ರಯಾಣ ವಿವರಗಳನ್ನು ಸಹ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ತಪಾಸಣೆಯ ಸಮಯದಲ್ಲಿ, ಪೊಲೀಸರು ಆತನ ಬಳಿ ಗೋಡಂಬಿ ಮತ್ತು ಒಣದ್ರಾಕ್ಷಿಗಳಂತಹ ಆಹಾರ ಪದಾರ್ಥಗಳನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ. ಮೂಲಗಳು ತಿಳಿಸುವಂತೆ, ಆ ವ್ಯಕ್ತಿ ತಾನು ಅಜ್ಮೀರ್‌ಗೆ ಪ್ರಯಾಣಿಸುತ್ತಿರುವುದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ಸಂಸ್ಥೆಗಳು ರಾಮ ಮಂದಿರ ಸಂಕೀರ್ಣದಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿವೆ. ಜಿಲ್ಲಾಡಳಿತ ಮತ್ತು ರಾಮ ಮಂದಿರ ಟ್ರಸ್ಟ್ ಪ್ರತಿಕ್ರಿಯಿಸಲು ನಿರಾಕರಿಸಿವೆ.
ಮುಂದಿನ ವಾರ ಅಯೋಧ್ಯೆಯಲ್ಲಿ ಮಕರ ಸಂಕ್ರಾಂತಿ ಆಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಾರಿ ಜನಸಂದಣಿ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಾದ್ಯಂತ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಜನವರಿ 22ರಂದು ರಾಮ ಮಂದಿರದ ಎರಡನೇ ವಾರ್ಷಿಕೋತ್ಸವಕ್ಕೂ ಮುನ್ನ ಈ ಘಟನೆ ನಡೆದಿದೆ.
ಅಯೋಧ್ಯೆ ರಾಮ ಮಂದಿರದ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರ ನಿಷೇಧ
ಅಯೋಧ್ಯೆ ಸ್ಥಳೀಯ ಆಡಳಿತವು ರಾಮ ಮಂದಿರದ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರಗಳ ವಿತರಣೆಯನ್ನು ನಿಷೇಧಿಸಿದೆ. ರಾಮ ಮಂದಿರದ ಸುತ್ತಮುತ್ತ ಮಾಂಸಾಹಾರಗಳ ಮಾರಾಟದ ಮೇಲೆ ಈಗಾಗಲೇ ನಿಷೇಧವಿದೆ ಎಂದು ಸಹಾಯಕ ಆಹಾರ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಹೇಳಿದ್ದಾರೆ.