ತಿರುವನಂತಪುರಂ, ಆ. 31: ಮಹಿಳೆಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಮನೆಗೇ ಸೀಮಿತರಾಗಿರಬೇಕು ಎಂದು ಕೇರಳಂನ ಹಿರಿಯ ಧಾರ್ಮಿಕ ಮುಖಂಡ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ (AP Aboobacker Musliyar) ನೀಡಿರುವ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. 95 ವರ್ಷದ ಮುಸ್ಲಿಯಾರ್ ಭಾನುವಾರ (ಆಗಸ್ಟ್ 30) ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನದಲ್ಲಿ ಮಾತನಾಡುತ್ತಾ, ''ಮಹಿಳೆಯರನ್ನು ಈ ರೀತಿಯಾಗಿ ಸಾರ್ವಜನಿಕ ವೇದಿಕೆಗಳಿಗೆ ಕರೆತರುವುದು ದೊಡ್ಡ ವಿನಾಶಕ್ಕೆ ಕಾರಣವಾಗಬಹುದು'' ಎಂದು ಹೇಳಿದ್ದಾರೆ. ಮಹಿಳೆಯರಿಗಾಗಿ ಇಸ್ಲಾಂನಲ್ಲಿ ‘ಪರ್ದಾ’ ಪದ್ಧತಿಯನ್ನು ನಿಗದಿಪಡಿಸಿರುವುದಕ್ಕೂ ಇದೇ ಕಾರಣ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
''ಮಹಿಳೆಯರು ತಮ್ಮ ಮನೆಗಳಲ್ಲೇ ಇರಬೇಕು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದು ಪವಿತ್ರ ಕುರಾನ್ ಹೇಳುತ್ತದೆʼʼ ಎಂಬುದಾಗಿ ಮುಸ್ಲಿಯಾರ್ ಹೇಳಿದ್ದಾರೆ. ಇಂತಹ ಬೋಧನೆಗಳನ್ನು ಸಮಸ್ತ ಕೇರಳ ಜಮೀಯತುಲ್ ಉಲಮಾದ ನಾಯಕರು ಸುಮಾರು 100 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದು, ಇದರಿಂದ ಮಹಿಳೆಯರ ಗೌರವ ಮತ್ತು ಘನತೆ ಕಾಪಾಡಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಸ್ತ್ರೀ ವಿರೋಧಿ ಹೇಳಿಕೆ:
ತಮ್ಮ ಅಭಿಪ್ರಾಯಕ್ಕೆ ಟೀಕೆ ವ್ಯಕ್ತವಾದರೂ, ಧಾರ್ಮಿಕ ವಿದ್ವಾಂಸರು ಈ ವಿಚಾರದಲ್ಲಿ ಮಾತನಾಡುವ ಜವಾಬ್ದಾರಿ ಹೊಂದಿದ್ದಾರೆ. ಯಾರೂ ತಮ್ಮನ್ನು ಮಾತನಾಡದಂತೆ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಿಪಿಐ(ಎಂ) ನಾಯಕರಿಂದ ಟೀಕೆ
ಮುಸ್ಲಿಯಾರ್ ಅವರ ಹೇಳಿಕೆಯನ್ನು ಸಿಪಿಐ(ಎಂ) ನಾಯಕಿ, ಮಾಜಿ ಸಚಿವೆ ಪಿ.ಕೆ. ಶ್ರೀಮತಿ ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂಬ ಅಭಿಪ್ರಾಯವನ್ನು ತಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ಹೇಳಿಕೆಗಳು ಮಹಿಳೆಯರನ್ನು ಅವಮಾನಿಸುವ ಮತ್ತು ಕೀಳಾಗಿ ನೋಡುವಂತದ್ದು ಎಂದು ಹೇಳಿ, ಕೂಡಲೇ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಸಿಪಿಐ(ಎಂ) ನಾಯಕಿ ಕೆ.ಕೆ. ಶೈಲಜಾ ಕೂಡ ಪ್ರತಿಕ್ರಿಯಿಸಿ, ಮಹಿಳೆಯರು ಮನೆಗಳಲ್ಲೇ ಇರಬೇಕು ಎನ್ನುವುದು ಊಳಿಗಮಾನ್ಯ ಪದ್ಧತಿಯಂತಹ ಮನೋಭಾವ ಎಂದು ಟೀಕಿಸಿದ್ದಾರೆ.
ಬಿಜೆಪಿಯಿಂದಲೂ ವಿರೋಧ
ಕೇರಳಂ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಹೇಳಿಕೆಯನ್ನು ಖಂಡಿಸಿದ್ದಾರೆ. ಮಹಿಳೆಯರಿಗೆ ಕಲಿಯಲು, ನಾಯಕತ್ವ ವಹಿಸಲು, ಕನಸು ಕಾಣಲು ಮತ್ತು ಸಂಪೂರ್ಣ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬದುಕಲು ಸಂವಿಧಾನಾತ್ಮಕ ಹಕ್ಕಿದೆ ಎಂದು ಅವರು ಹೇಳಿದ್ದಾರೆ. ಮಹಿಳೆಯರನ್ನು ಮಧ್ಯಯುಗದ ಪ್ರತ್ಯೇಕತೆಯತ್ತ ತಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ಹಾಗೂ ಎನ್‌ಡಿಎ ವಿರೋಧಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೆಯೂ ವಿವಾದ ಭುಗಿಲೆದ್ದಿತ್ತು
ಮಹಿಳೆಯರ ಕುರಿತು ಮುಸ್ಲಿಯಾರ್ ಹೇಳಿಕೆಗಳು ಈ ಹಿಂದೆ ಕೂಡ ವಿವಾದಕ್ಕೆ ಕಾರಣವಾಗಿದ್ದವು. 2015ರಲ್ಲಿ ಲಿಂಗ ಸಮಾನತೆ ಇಸ್ಲಾಂಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಬಾರದು ಎಂದು ಹೇಳಿಕೆ ನೀಡಿದ್ದರು. 2025ರಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ವ್ಯಾಯಾಮ ಮಾಡುವ ಫಿಟ್‌ನೆಸ್ ಕಾರ್ಯಕ್ರಮವನ್ನೂ ಅವರು ಇಸ್ಲಾಮಿಕ್ ನಿಯಮಗಳಿಗೆ ವಿರುದ್ಧ ಎಂದು ಆಕ್ಷೇಪಿಸಿದ್ದರು.
ಇದೇ ವೇಳೆ, ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳಂ ಮೂಲದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲೂ ಮುಸ್ಲಿಯಾರ್ ಪ್ರಮುಖವಾಗಿ ಮಧ್ಯಪ್ರ ವೇಶಿಸಿದ್ದರು. ಅವರ ಪ್ರಯತ್ನದ ಬಳಿಕ 2025ರ ಜುಲೈನಲ್ಲಿ ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆ ಮುಂದೂಡಲ್ಪಟ್ಟಿತ್ತು.