ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳ ಚುನಾವಣೆ: ಫಲಿತಾಂಶ ನಿರ್ಧರಿಸಲಿವೆ ಈ 5 ಪ್ರಮುಖ ಕ್ಷೇತ್ರಗಳು

ಕೇರಳ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳು ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ನೇಮಮ್, ತ್ರಿಶೂರ್, ಪಾಲಕ್ಕಾಡ್, ಮಂಜೇಶ್ವರಂ ಮತ್ತು ವಟ್ಟಿಯೂರ್ಕಾವು ಕ್ಷೇತ್ರಗಳಲ್ಲಿ ಎಲ್‌ಡಿಎಫ್, ಯುಡಿಎಫ್ ಮತ್ತು ಎನ್‌ಡಿಎ ನಡುವೆ ತೀವ್ರ ಪೈಪೋಟಿ ಇದೆ. ತ್ರಿಕೋನ ಸ್ಪರ್ಧೆಗಳು ಮತ್ತು ಮತದಾರರ ಬದಲಾವಣೆಯ ಮನೋಭಾವದಿಂದ ಈ ಕ್ಷೇತ್ರಗಳು ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಹೊಂದಿವೆ.

ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಮಾ. 28: ಕೇರಳ ವಿಧಾಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್‌ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾವು ಜೋರಾಗಿದೆ. ರಾಜ್ಯದ ಒಟ್ಟು 140 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳು ಕುತೂಹಲ ಕೆರಳಿಸಿವೆ. ಆಡಳಿತಾರೂಢ ಎಲ್‌ಡಿಎಫ್ (Left Democratic Front), ಕಾಂಗ್ರೆಸ್ ನೇತೃತ್ವದ ಯುಡಿಎಫ್ (United Democratic Front) ಮತ್ತು ಪ್ರಬಲ ಪೈಪೋಟಿ ನೀಡುತ್ತಿರುವ ಎನ್‌ಡಿಎ (National Democratic Alliance) ಮೈತ್ರಿಕೂಟಗಳ ನಡುವಿನ ಹಣಾಹಣಿ ಈ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿದೆ.

ನೇಮಮ್

ಅತಿದೊಡ್ಡ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ ರಾಜಧಾನಿ ತಿರುವನಂತಪುರಂನ ನೇಮಮ್ (Nemom) ಕೇತ್ರ. ಕೇರಳದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಇದೂ ಒಂದು. 2016ರಲ್ಲಿ ಬಿಜೆಪಿ ಇಲ್ಲಿ ಮೊದಲ ಬಾರಿಗೆ ಜಯಗಳಿಸಿತ್ತು. ಆದರೆ 2021ರಲ್ಲಿ ಸೋಲನುಭವಿಸಿತ್ತು. ಕಳೆದ ಬಾರಿ ಇಲ್ಲಿನ ಗೆಲುವಿನ ಅಂತರ ಕೇವಲ 4,000 ಮತಗಳಿಗಿಂತ ಕಡಿಮೆ ಇತ್ತು. ಈ ಬಾರಿ ವಿ. ಶಿವನ್‌ಕುಟ್ಟಿ (LDF), ರಾಜೀವ್ ಚಂದ್ರಶೇಖರ್ (NDA) ಮತ್ತು ಕೆ.ಎಸ್. ಶಬರಿನಾಥನ್ (UDF) ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ತ್ರಿಶೂರ್

ಪ್ರತಿ ಮತವೂ ಇಲ್ಲಿ ನಿರ್ಣಾಯಕ. ತ್ರಿಶೂರ್ ಅತ್ಯಂತ ಕಡಿಮೆ ಮತಗಳ ಅಂತರದ ಗೆಲುವಿಗೆ ಹೆಸರುವಾಸಿ. 2021ರಲ್ಲಿ ಇಲ್ಲಿನ ವಿಜೇತ ಅಭ್ಯರ್ಥಿ ಕೇವಲ 946 ಮತಗಳಿಂದ ಗೆದ್ದಿದ್ದರು. ಈ ಬಾರಿ ಅಲಂಕೋಡ್ ಲೀಲಕೃಷ್ಣನ್ (LDF), ರಾಜನ್ ಪಲ್ಲನ್ (UDF) ಮತ್ತು ಪದ್ಮಜಾ ವೇಣುಗೋಪಾಲ್ (NDA) ಕಣದಲ್ಲಿದ್ದಾರೆ. ಮತದಾರರ ಒಲವು ಇಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದು ವಿಶೇಷ.

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ; ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಪಾಲಕ್ಕಾಡ್

ಅನಿಶ್ಚಿತತೆಯ ಕಣವಾಗಿರುವ ಇಲ್ಲಿ ಕೃಷಿಕರು, ನಗರವಾಸಿಗಳು ಮತ್ತು ಅಲ್ಪಸಂಖ್ಯಾತ ಮತದಾರರು ಫಲಿತಾಂಶವನ್ನು ನಿರ್ಧರಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಇಲ್ಲಿನ ಗೆಲುವಿನ ಅಂತರ ತೀರಾ ಕಡಿಮೆ ಇತ್ತು. ಎನ್.ಎಂ.ಆರ್. ರಜಾಕ್ (LDF ಬೆಂಬಲಿತ), ರಮೇಶ್ ಪಿಶಾರಡಿ (UDF) ಮತ್ತು ಶೋಭಾ ಸುರೇಂದ್ರನ್ (NDA) ಇಲ್ಲಿನ ಪ್ರಮುಖ ಅಭ್ಯರ್ಥಿಗಳು.

ಮಂಜೇಶ್ವರ

ಕರ್ನಾಟಕಕ್ಕೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರವೂ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಅಲ್ಪ ಮತಗಳ ಅಂತರದ ಗೆಲುವಿನ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು ಯಾವಾಗಲೂ ಕುತೂಹಲ ಕೆರಳಿಸುತ್ತ ಬಂದಿದೆ. 2016ರಲ್ಲಿ ಇಲ್ಲಿನ ಗೆಲುವಿನ ಅಂತರ ಕೇವಲ 89 ಮತಗಳಾಗಿದ್ದರೆ, 2021ರಲ್ಲಿ ಅದು 855 ಆಗಿತ್ತು. ಈ ಬಾರಿ ಎ.ಕೆ.ಎಂ. ಅಶ್ರಫ್ (UDF), ಕೆ. ಸುರೇಂದ್ರನ್ (NDA) ಮತ್ತು ಕೆ.ಆರ್. ಜಯಾನಂದ (LDF) ನಡುವೆ ನೇರ ಹಣಾಹಣಿ ಇದೆ.

ವಟ್ಟಿಯೂರ್ಕಾವು

ಇಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ಏರಿರುವುದು ಇತರ ಎರಡು ಮೈತ್ರಿಕೂಟಗಳಿಗೆ ನಡುಕ ಹುಟ್ಟಿಸಿದೆ. ವಿ.ಕೆ. ಪ್ರಶಾಂತ್ (LDF), ಕೆ. ಮುರಳೀಧರನ್ (UDF) ಮತ್ತು ಆರ್. ಶ್ರೀಲೇಖಾ (NDA) ಇಲ್ಲಿನ ಅಭ್ಯರ್ಥಿಗಳಾಗಿದ್ದು, ಯಾರೇ ಗೆದ್ದರೂ ಅದು ರಾಜ್ಯ ರಾಜಕಾರಣದ ದಿಕ್ಸೂಚಿಯಾಗಲಿದೆ. ಇವುಗಳಲ್ಲದೆ ಕಜಕ್ಕೂಟಂ, ಪೇರಾವೂರ್ ಮತ್ತು ಯುಡಿಎಫ್ ಭದ್ರಕೋಟೆಯಾದ ಎರ್ನಾಕುಲಂ ಕೂಡ ಚುನಾವಣಾ ಚಿತ್ರಣವನ್ನು ಬದಲಿಸುವ ಶಕ್ತಿ ಹೊಂದಿವೆ.