ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala High Court: ದುಲ್ಖರ್‌ ಸಲ್ಮಾನ್‌ಗೆ ಕೇರಳ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌; ಸೀಝ್‌ ಆಗಿದ್ದ ಕಾರು ಮರಳಿಸಲು ಸೂಚನೆ

Dulquer Salmaan: ಮಲಯಾಳಂ ಸೂಪರ್‌ ಸ್ಟಾರ್‌, ನಿರ್ಮಾಪಕ ದುಲ್ಖರ್‌ ಸಲ್ಮಾನ್‌ ಅವರಿಗೆ ಕೇರಳ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಆಪರೇಷನ್‌ ನಮ್‌ಖೋರ್‌ ಹೆಸರಿನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಲ್ಯಾಂಡ್‌ ರೋವರ್‌ ಕಾರನ್ನು ಮರಳಿಸಲು ಸೂಚಿಸಿದೆ.

ತಿರುವನಂತಪುರಂ: ಮಲಯಾಳಂ ಸೂಪರ್‌ ಸ್ಟಾರ್‌, ಬಹುಭಾಷಾ ಕಲಾವಿದ, ನಿರ್ಮಾಪಕ ದುಲ್ಖರ್‌ ಸಲ್ಮಾನ್‌ (Dulquer Salmaan) ಅವರಿಗೆ ಕೇರಳ ಹೈಕೋರ್ಟ್‌ನಿಂದ (Kerala High Court) ಬಿಗ್‌ ರಿಲೀಫ್‌ ಸಿಕ್ಕಿದೆ. ಆಪರೇಷನ್‌ ನಮ್‌ಖೋರ್‌ (Operation Numkhor) ಹೆಸರಿನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಲ್ಯಾಂಡ್‌ ರೋವರ್‌ ಕಾರನ್ನು ಇದೀಗ ಅವರಿಗೆ ಮರಳಿಸಲು ಸೂಚನೆ ನೀಡಿದೆ. ಕೋರ್ಟ್‌ ಸೂಚನೆ ಮೇರೆಗೆ ದುಲ್ಖರ್‌ ಅಗತ್ಯ ದಾಖಲೆಗಳನ್ನು ಕಸ್ಟಮ್ಸ್‌ಗೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಕಾರನ್ನು ಹಿಂದಿರುಗಿಸಲಾಗಿದೆ.

ಬ್ಯಾಂಕ್‌ ಗ್ಯಾರಂಟಿಯ ಆಧಾರದಲ್ಲಿ ಕಾರನ್ನು ಅಧಿಕಾರಿಗಳು ಮರಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಾಗ್ಯೂ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಕಾರನ್ನು ಕೇರಳದಿಂದ ಹೊರಗೆ ಕೊಂಡೊಯ್ಯವಂತಿಲ್ಲ.

ಕಸ್ಟಮ್ಸ್‌ ನಿಯಮಗಳನ್ನು ಗಾಳಿಗೆ ತೂರಿ ಈ ಐಷಾರಾಮಿ ಕಾರನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ವಶಕ್ಕೆ ಪಡೆಯಲಾಗಿತ್ತು. ನಿಯಮ ಉಲ್ಲಂಘಿಸಿ ಆಮದು ಮಾಡಿಕೊಳ್ಳಲಾದ ಐಷಾರಾಮಿ ಕಾರುಗಳ ಪತ್ತೆಗೆ ಇತ್ತೀಚೆಗೆ ಆಪರೇಷನ್‌ ನಮ್‌ಖೋರ್‌ ಕಾರ್ಯಾಚರಣೆ ನಡೆಸಲಾಗಿತ್ತು.

ಈ ಸುದ್ದಿಯನ್ನೂ ಓದಿ: ED Raid: ಭರ್ಜರಿ ಇಡಿ ರೇಡ್‌! ದೆಹಲಿ ಉದ್ಯಮಿಗೆ ಸೇರಿದ 80 ಕೋಟಿ ರೂ. ವಿದೇಶಿ ಆಸ್ತಿ ವಶಕ್ಕೆ

ಹಲವು ಕಡೆಗಳಲ್ಲಿ ದಾಳಿ

ಆಪರೇಷನ್‌ ನಮ್‌ಖೋರ್‌ ಕಾರ್ಯಾಚರಣೆಯ ಭಾಗವಾಗಿ ಕಸ್ಟಮ್ಸ್‌ ಅಧಿಕಾರಿಗಳ ತಂಡ ಕೇರಳದ ಸುಮಾರು 30 ಕಡೆಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಒಟ್ಟು 36 ಐಷರಾಮಿ ಕಾರುಗಳನ್ನು ಸೀಝ್‌ ಮಾಡಲಾಗಿತ್ತು. ಈ ವಾಹನಗಳನ್ನು ಭೂತಾನ್‌ನಿಂದ ಅಕ್ರಮವಾಗಿ ತರಿಸಿಕೊಂಡು ನಕಲಿ ದಾಖಲೆಗಳ ಮೂಲಕ ನೋಂದಾಯಿಸಲಾಗುತ್ತಿದೆ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಡೆಯುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

ಇಡಿ ದಾಳಿ

ಕೆಲ ದಿನಗಳ ಹಿಂದೆಯಷ್ಟೇ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ದುಲ್ಖರ್‌ ಸಲ್ಮಾನ್, ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಸುಕುಮಾರನ್‌ ಮನೆಗೆ ದಾಳಿ ನಡೆಸಿದ್ದರು. ಏಕಕಾಲದಲ್ಲಿ 17 ಸ್ಥಳಗಳಲ್ಲಿ ಶೋಧ ನಡೆಸಲಾಯಿತು.

ಭೂತಾನ್/ನೇಪಾಳ ಮಾರ್ಗಗಳ ಮೂಲಕ ಭಾರತಕ್ಕೆ ಲ್ಯಾಂಡ್ ಕ್ರೂಸರ್ ಮತ್ತು ಡಿಫೆಂಡರ್‌ನಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ಭಾಗಿಯಾಗಿರುವ ಸಿಂಡಿಕೇಟ್ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಇಡಿ ತಿಳಿಸಿತ್ತು. ಈ ವಂಚನೆಯ ಜಾಲವು ವಾಹನಗಳನ್ನು ಮೊದಲು ಹಿಮಾಚಲ ಪ್ರದೇಶದಲ್ಲಿ ನೋಂದಾಯಿಸಿ, ನಂತರ ಅವುಗಳನ್ನು ಭಾರತದ ವಿವಿಧ ಭಾಗಗಳಿಗೆ ಸಾಗಿಸುತ್ತದೆ ಎನ್ನಲಾಗಿದೆ. ಆ ಕಾರುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಕೇರಳದಲ್ಲಿಯೇ ಇಂತಹ ಕಾರುಗಳ ಮಾರಾಟ ಹೆಚ್ಚಾಗಿದೆ ಎಂದು ವರದಿಯೊಂದು ತಿಳಿಸಿದೆ.

ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೋಟಯಂ ಮತ್ತು ಕೊಯಮತ್ತೂರಿನಲ್ಲಿ ತಪಾಸಣೆ ನಡೆಸಲಾಯಿತು. ಪೃಥ್ವಿರಾಜ್, ದುಲ್ಕರ್ ಸಲ್ಮಾನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರ ನಿವಾಸ ಮತ್ತು ಸಂಸ್ಥೆಗಳು, ಕೆಲವು ವಾಹನ ಮಾಲೀಕರು ಮತ್ತು ವ್ಯಾಪಾರಿಗಳ ನಿವಾಸ ಸೇರಿದಂತೆ 17 ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು.