ಅಯೋಧ್ಯೆ, ಜುಲೈ 7: ರಾಮಮಂದಿರ (Ram Temple) ದೇಣಿಗೆ ಎಣಿಕೆ ವೇಳೆ ನಡೆದಿದ್ದ ಎನ್ನಲಾದ ಕಳವು ಪ್ರಕರಣದ ವಿವಾದದ ನಡುವೆಯೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಮಹತ್ವದ ಆಡಳಿತಾತ್ಮಕ ಬದಲಾವಣೆ ಘೋಷಿಸಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರೈ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ಟ್ರಸ್ಟ್, ಹರ್ದೋಯಿಯ ಕೃಷ್ಣ ಮೋಹನ್(Krishna Mohan) ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದೆ.
ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಈ ಕುರಿತು ಮಾಹಿತಿ ನೀಡಿದ್ದು, ಹೊಸ ಪ್ರಧಾನ ಕಾರ್ಯದರ್ಶಿಯ ನೇಮಕವಾಗುವವರೆಗೆ ಕೃಷ್ಣ ಮೋಹನ್ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಮ ಮಂದಿರ ಹುಂಡಿ ಕಳವು ಆರೋಪಿ ಅನುಕಲ್ಪ್ ಮಿಶ್ರಾಗೆ ಮತ್ತೊಂದು ಸಂಕಷ್ಟ; ಚಿಕ್ಕಮ್ಮನ ಮೇಲೆಯೇ ಹಲ್ಲೆ ನಡೆಸಿದ್ದ ಪಾಪಿ
ಯಾರು ಈ ಕೃಷ್ಣ ಮೋಹನ್?
ಕೃಷ್ಣ ಮೋಹನ್ ಅವರು ಲಖನೌ ವಿಶ್ವವಿದ್ಯಾಲಯದ ಪದವೀಧರರು. ಆರಂಭದಲ್ಲಿ ಅಣುಶಕ್ತಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಬಳಿಕ ಭಾರತೀಯ ಅರಣ್ಯ ಸೇವೆ (IFS)ಗೆ ಸೇರಿದ್ದರು. ಮಹಾರಾಷ್ಟ್ರ ಕೇಡರ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಅವರು ಹರ್ದೋಯಿಯಲ್ಲಿ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
'ಲೋಪಗಳನ್ನು ಸರಿಪಡಿಸುತ್ತೇನೆ'
ನೇಮಕದ ಬಳಿಕ ಮಾತನಾಡಿದ ಕೃಷ್ಣ ಮೋಹನ್, ಟ್ರಸ್ಟ್‌ನ ವ್ಯವಸ್ಥೆಯಲ್ಲಿಇದ್ದ ಕೆಲವು ಲೋಪಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಒಪ್ಪಿಕೊಂಡರು. ಆ ಲೋಪಗಳನ್ನು ಮುಚ್ಚಿ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ತಮ್ಮ ಮೊದಲ ಆದ್ಯತೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂಬುದು ತನಿಖೆಯಿಂದ ಬಹಿರಂಗವಾದರೆ, ಅವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಟ್ರಸ್ಟ್ ದೃಢವಾಗಿ ಒತ್ತಾಯಿಸಲಿದೆ ಎಂದು ಅವರು ಹೇಳಿದರು.
'ನಮಗೂ ನೋವಾಗಿದೆ'
ಟ್ರಸ್ಟ್ ಬಳಿಕ ಮಾತನಾಡಿದ ಸ್ವಾಮಿ ಗೋವಿಂದ ದೇವ್ ಗಿರಿ, ಈ ಬೆಳವಣಿಗೆಯಿಂದ ತಮಗೂ ತೀವ್ರ ನೋವಾಗಿದೆ ಎಂದು ಹೇಳಿದರು. ಚಂಪತ್ ರೈ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಟ್ರಸ್ಟ್ ಸಂವಿಧಾನದ ಪ್ರಕಾರ ಅಂಗೀಕರಿಸಲಾಗಿದೆ ಎಂದರು.
ರಾಮಭಕ್ತರ ವಿಶ್ವಾಸಕ್ಕೆ ಧಕ್ಕೆಯಾಗಿರುವ ಈ ಬೆಳವಣಿಗೆಯಿಂದ ಸಮಾಜದಲ್ಲಿ ಟ್ರಸ್ಟ್‌ನ ಬಗ್ಗೆ ಉಂಟಾಗಿರುವ ಅನುಮಾನವನ್ನು ದೂರ ಮಾಡಿ, ವಿಶ್ವಾಸವನ್ನು ಮರುಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.