ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುರುಕ್ಷೇತ್ರದಲ್ಲಿ ಭೀಕರ ಅಪಘಾತ: ಭಕ್ತರನ್ನು ಹೊತ್ತ ಟ್ರ್ಯಾಕ್ಟರ್-ಟ್ರಾಲಿ ಪಲ್ಟಿ, 6 ಮಂದಿ ಸಾವು

Road Accident: ಹರಿಯಾಣದ ಕುರುಕ್ಷೇತ್ರದ ಪಿಂಡಾರ್ಸಿ ಗ್ರಾಮದ ಬಳಿ ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿ ಪಲ್ಟಿಯಾಗಿ ಆರು ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 30 ಭಕ್ತರು ಕಲಾಲ್ ಮಜ್ರಾದಿಂದ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಗೊಗಾಮೆಡಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಮತ್ತೊಂದು ಟ್ರಾಲಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಕೆಲವು ಭಕ್ತರು ತಿಳಿಸಿದ್ದಾರೆ. ಗಾಯಾಳುಗಳನ್ನು ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸಾಂದರ್ಭಿಕ ಚಿತ್ರ

ಚಂಡೀಗಢ, ಸೆ. 24: ಹರಿಯಾಣದ ಕುರುಕ್ಷೇತ್ರದ (Kurukshetra) ಪಿಂಡಾರ್ಸಿ ಗ್ರಾಮದ (Pindarsi village) ಬಳಿ ಗುರುವಾರ ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿ ಪಲ್ಟಿಯಾಗಿ ಆರು ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 30 ಮಂದಿ ಭಕ್ತರು ಕಲಾಲ್ ಮಜ್ರಾದಿಂದ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿರುವ ಗೊಗಾಮೆಡಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಪಿಂಡಾರ್ಸಿ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ.

ಮೃತರನ್ನು ಲೀಲಾ ದೇವಿ (58), ಬಾಲಾ ದೇವಿ (50), ಬೋಹತಿ ದೇವಿ (60), ಅಂಜಲಿ (25), ಅಂಜಲಿ ಅವರ 18 ತಿಂಗಳ ಮಗಳು ಸೀರತ್ ಹಾಗೂ ಹರ್ಷ್ (7) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಎಸಿ ಸ್ಫೋಟಗೊಂಡು ಎಂಜಿನ್‌ಗೆ ತಗುಲಿದ ಕಿಡಿ; ಗ್ರೇಟರ್ ನೋಯ್ಡಾದಲ್ಲಿ ಬಸ್ ಬೆಂಕಿಗೆ ಆಹುತಿಯಾಗಿದ್ದು ಹೇಗೆ?

ಭಕ್ತರ ಪ್ರಕಾರ, ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಮತ್ತೊಂದು ಟ್ರಾಲಿ ಇವರಿದ್ದ ಟ್ರ್ಯಾಕ್ಟರ್-ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗಿದೆ. ಕೆಲ ಭಕ್ತರು ಅಪಘಾತದಲ್ಲಿ ಟ್ರಕ್ ಕೂಡ ಭಾಗಿಯಾಗಿತ್ತು ಎಂದು ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಘಾತದ ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ಪಲ್ಟಿಯಾಗಿದ್ದ ಟ್ರಾಲಿಯನ್ನು ಎತ್ತಿ, ಅದರ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಕುರುಕ್ಷೇತ್ರದ ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕುರುಕ್ಷೇತ್ರದ ಆದರ್ಶ ಪೊಲೀಸ್ ಠಾಣೆಯ ಠಾಣಾಧಿಕಾರಿ ಜಗದೀಶ್ ತಮಸ್ ಅವರ ಪ್ರಕಾರ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಂಜಲಿ ಮತ್ತು ಅವರ ಪುತ್ರಿ ಸೀರತ್ ಅವರ ಮೃತದೇಹಗಳನ್ನು ಬರಾನ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು, ಉಳಿದ ಮೃತದೇಹಗಳನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.