ಲೇಹ್: ಲಡಾಖ್ (Ladakh) ವಲಯದ ಲೇಹ್ (Leh) ಬಳಿ ಮೇ 20 ರಂದು ನಡೆದ ಚೀತಲ್ ಲಘು ಹೆಲಿಕಾಪ್ಟರ್ (Cheetal light helicopter ) ಅಪಘಾತದಲ್ಲಿ ಮೇಜರ್ ಜನರಲ್ ಸೇರಿದಂತೆ ಭಾರತೀಯ ಸೇನೆ (Indian Army)ಯ ಮೂವರು ಅಧಿಕಾರಿಗಳು ಅದ್ಭುತವಾಗಿ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬೆನ್ನಲ್ಲೇ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಗಾಯಗೊಂಡ ಸ್ಥಿತಿಯಲ್ಲೇ ತೆಗೆದುಕೊಂಡ ಸೆಲ್ಫಿ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
TM333B ಎಂಜಿನ್ ಹೊಂದಿರುವ ಚೀತಾ ಹೆಲಿಕಾಪ್ಟರ್‌ನ ಹೊಸ ಆವೃತ್ತಿಯಾದ 'ಚೀತಲ್', ಮಧ್ಯಾಹ್ನದ ಹಾರಾಟದ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೀಡಾಗಿದೆ. ಅಪಘಾತದ ಸಮಯದಲ್ಲಿ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಡಿವಿಷನ್ ಕಮಾಂಡರ್ ಮೇಜರ್ ಜನರಲ್ ಸಚಿನ್ ಮೆಹ್ತಾ ಇದ್ದರು ಎಂದು ಸೇನಾ ಮೂಲಗಳು ಖಚಿತಪಡಿಸಿವೆ. ಈ ಘಟನೆಯಲ್ಲಿ ಮೂವರಿಗೂ ಗಾಯಗಳಾಗಿದ್ದರೂ, ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಸ್ಥಿರವಾಗಿದ್ದಾರೆ. ಇಬ್ಬರು ಪೈಲಟ್‌ಗಳನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್ ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಭಾರತೀಯ ಸೇನೆಯು ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಅಪಘಾತಕ್ಕೀಡಾದ ಚೀತಲ್ ಹೆಲಿಕಾಪ್ಟರ್, ದಶಕಗಳಿಂದ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುತ್ತಿರುವ ಹಳೆಯ ಚೀತಾ ಫ್ಲೀಟ್‌ನ ಸುಧಾರಿತ ಆವೃತ್ತಿಯಾಗಿದೆ. ಫ್ರೆಂಚ್ ಮೂಲದ ಏರೋಸ್ಪೇಷಿಯಾಲ್ ಅಲೋಯೆಟ್ III ವಿನ್ಯಾಸದಿಂದ ಅಭಿವೃದ್ಧಿಪಡಿಸಲಾದ ಚೀತಾ ಹೆಲಿಕಾಪ್ಟರ್‌ಗಳು ಲಡಾಖ್, ಸಿಯಾಚಿನ್ ಮತ್ತು ಅರುಣಾಚಲ ಪ್ರದೇಶದಂತಹ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ತೆಳುವಾದ ಗಾಳಿ ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಾರಾಟ ನಡೆಸುವ ಸಾಮರ್ಥ್ಯ ಇವುಗಳಿಗಿದೆ.
ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ; 90 ಕಾರ್ಮಿಕರು ದುರ್ಮರಣ
ಹಲವು ವರ್ಷಗಳಿಂದ ಈ ಲಘು ಹೆಲಿಕಾಪ್ಟರ್‌ಗಳನ್ನು ವಿಚಕ್ಷಣಾ ಕಾರ್ಯಾಚರಣೆಗಳು, ಗಾಯಾಳುಗಳ ಸ್ಥಳಾಂತರ, ಸೈನಿಕರ ಚಲನವಲನ ಮತ್ತು ರಸ್ತೆ ಸಂಪರ್ಕವಿಲ್ಲದ ದುರ್ಗಮ ಫಾರ್ವರ್ಡ್ ಪೋಸ್ಟ್‌ಗಳಿಗೆ ಅಗತ್ಯ ಸರಬರಾಜುಗಳನ್ನು ತಲುಪಿಸಲು ಬಳಸಲಾಗುತ್ತಿದೆ. ಆದಾಗ್ಯೂ, ಪ್ರಸ್ತುತ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳು ದಶಕಗಳಷ್ಟು ಹಳೆಯದಾಗಿದ್ದು, ಇವುಗಳ ನಿರ್ವಹಣಾ ಸವಾಲುಗಳು ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಆತಂಕಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಸಶಸ್ತ್ರ ಪಡೆಗಳು ಇವುಗಳ ಬದಲಿಗೆ ಹೊಸ ಸ್ವದೇಶಿ ಹೆಲಿಕಾಪ್ಟರ್‌ಗಳನ್ನು ಬಳಸಲು ಮುಂದಾಗಿವೆ. ಇದರ ಭಾಗವಾಗಿ, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ ಲಘು ಉಪಯುಕ್ತ ಹೆಲಿಕಾಪ್ಟರ್ (ಎಲ್‌ಯುಹೆಚ್) ಅನ್ನು ಸೇನೆ ಮತ್ತು ವಾಯುಪಡೆಗೆ ಹಂತಹಂತವಾಗಿ ಸೇರ್ಪಡೆಗೊಳಿಸಲಾಗುತ್ತಿದೆ.