ಚೆನ್ನೈ: ಡಿಸೆಂಬರ್‌ನಲ್ಲಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಅಣ್ಣಾ ವಿಶ್ವವಿದ್ಯಾಲಯದಲ್ಲಿ (Anna University) ನಡೆದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಿರಿಯಾನಿ ಮಾರಾಟಗಾರ ಜ್ಞಾನಶೇಖರನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 90,000 ರೂ. ದಂಡ ವಿಧಿಸಲಾಗಿದೆ ಎಂದು ಚೆನ್ನೈನ ಮಹಿಳಾ ನ್ಯಾಯಾಲಯವು ತಿಳಿಸಿದೆ. ಮೇ 28 ರಂದು ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿತ್ತು.
ಅಪರಾಧಿ ಕನಿಷ್ಠ 30 ವರ್ಷಗಳ ಕಾಲ ಜೈಲಿನಲ್ಲಿ ಇರಬೇಕು ಎಂದು ನ್ಯಾಯಾಧೀಶೆ ಎಂ ರಾಜಲಕ್ಷ್ಮಿ ಹೇಳಿದರು. ಅವನಿಗೆ ಯಾವುದೇ ಕರುಣೆ ತೋರಿಸಬಾರದು ಎಂದು ಹೇಳಿದರು. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಮತ್ತು ಅಪಹರಣ ಸೇರಿದಂತೆ ಎಲ್ಲಾ 11 ಆರೋಪಗಳಲ್ಲಿ ಜ್ಞಾನಶೇಖರನ್ ತಪ್ಪಿತಸ್ಥನೆಂದು ನ್ಯಾಯಾಧೀಶರು ಕಳೆದ ವಾರ ಘೋಷಿಸಿದರು. ಪ್ರಕರಣದಲ್ಲಿ ಕನಿಷ್ಠ 29 ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದು, ಪೊಲೀಸರು 100 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ತನ್ನ ವೃದ್ಧ ತಾಯಿ ಮತ್ತು ಎಂಟು ವರ್ಷದ ಮಗಳನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾದ ಅಗತ್ಯವನ್ನು ಉಲ್ಲೇಖಿಸಿ ಕನಿಷ್ಠ ಶಿಕ್ಷೆಗಾಗಿ ಅವನು ಈ ಹಿಂದೆ ಮನವಿ ಮಾಡಿದ್ದನು. ಆದರೆ ಎಲ್ಲಾ ಆರೋಪಗಳಲ್ಲಿ ಅವನ ದೋಷ ಸಾಬೀತಾಗಿರುವುದರಿಂದ, ಅವನಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.
ಈ ಸುದ್ದಿಯನ್ನೂ ಓದಿ: Physical Abuse: ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ ಕೋರ್ಟ್
ವರದಿಗಳ ಪ್ರಕಾರ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯು ಆಕೆಯ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ನಂತರ ಆಕೆ ಡಿಸೆಂಬರ್ 24 ರಂದು (ಮಂಗಳವಾರ) ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಹುಡುಗಿಯ ದೂರಿನ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಗೋವಿ ಚೆಜಿಯಾನ್ ಖಚಿತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ವಿಶ್ವವಿದ್ಯಾಲಯದಲ್ಲಿ ವಿಶೇಷ ಸಮಿತಿಯನ್ನೂ ರಚಿಸಲಾಗಿದ್ದು, ಜೊತೆಗೆ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.