ನವದೆಹಲಿ: ನೀಟ್ ಪರೀಕ್ಷೆಯಲ್ಲಿನ (NEET Protest) ಅಕ್ರಮಗಳನ್ನು ಖಂಡಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಭಾರೀ ಪ್ರತಿಭಟನೆಗೆ ಬಹುದೊಡ್ಡ ಗೆಲುವು ಸಿಕ್ಕಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆ ನೀಡಿದ್ದಾರೆ. ಸದ್ಯ ಜಂತರ್‌ಮಂತರ್‌ನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಪ್ರಧಾನ್ ರಾಜೀನಾಮೆ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಿರಳೆ ಜನತಾ ಪಕ್ಷ "ವಿದ್ಯಾರ್ಥಿ ಶಕ್ತಿ ಚಿರಾಯುವಾಗಲಿ" ಎಂದು ಬರೆದುಕೊಂಡಿದೆ.
ಸಿಜೆಪಿಯ ಸದಸ್ಯರು, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಧಾನ್ ಅವರ ರಾಜೀನಾಮೆ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಿ ಜೂನ್‌ನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದರು. ಇಂದು ಸಿಜೆಪಿ ಹಾಗೂ ಸರ್ಕಾರದ ನಡುವೆ ನಡೆಯಲಿರುವ ಮೂರನೇ ಸುತ್ತಿನ ಮಾತುಕತೆಗೂ ಮೊದಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ "ಮೊದಲ ದಿನದಿಂದಲೇ, ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡೆ ಮತ್ತು ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿಯಲಿಲ್ಲ. 'ಪರೀಕ್ಷಾ ಮಾಫಿಯಾ'ದಿಂದ ಯಾವುದೇ ಪ್ರತಿಭಾನ್ವಿತ ವಿದ್ಯಾರ್ಥಿಯ ಸಾಮರ್ಥ್ಯ ಹಾಳಾಗಬಾರದು ಅಥವಾ ಯಾವುದೇ ವಿದ್ಯಾರ್ಥಿಗೆ ಯಾವುದೇ ಅನ್ಯಾಯವಾಗಬಾರದು ಎಂದು ನಾನು ದೃಢನಿಶ್ಚಯ ಮಾಡಿದ್ದೆ". 'ಕಳೆದ 10 ದಿನಗಳ ಬೆಳವಣಿಗೆಗಳನ್ನು ನೋಡಿ ನನ್ನ ಮನಸ್ಸು ದುಃಖಿತವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಶಕ್ತಿ. ದೇಶದ ಯುವಶಕ್ತಿಯನ್ನು ಭ್ರಮೆಯ ಕುಚಕ್ರದಲ್ಲಿ ಸಿಲುಕಿಸುವುದಿಲ್ಲ, ಇದೇ ನನ್ನ ಸಂಕಲ್ಪ' ಎಂದು ಹೇಳಿದ್ದಾರೆ.
NEET Paper leak: ನೀಟ್ ಅಕ್ರಮ ಹಿನ್ನೆಲೆ NTAಗೆ ಮೇಜರ್ ಸರ್ಜರಿ; 47 ಅಧಿಕಾರಿಗಳ ವಜಾ
ಜಂತರ್-ಮಂತರ್ ಮತ್ತು ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದ ರಾಷ್ಟ್ರವಿರೋಧಿ ಶಕ್ತಿಗಳು ಪ್ರಯೋಜನ ಪಡೆಯದಂತೆ, ದೇಶದ ಏಕತೆ ಕಾಯ್ದುಕೊಳ್ಳಲು, ಭಾರತದ ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಜಟಿಲತೆಗಳಲ್ಲಿ ಸಿಲುಕದಂತೆ, ನಮ್ಮ ಮಕ್ಕಳು ತಮ್ಮ ಸಮಯವನ್ನು ಓದಿಗೆ ಮೀಸಲಿಡಲು ಮತ್ತು ವೃತ್ತಿ ನಿರ್ಮಾಣದ ಮೇಲೆ ಗಮನ ಹರಿಸುವ ಬಗ್ಗೆ ಯೋಚಿಸಿ ನಾನು ನನ್ನ ರಾಜೀನಾಮೆ ಪತ್ರವನ್ನು ಗೌರವಾನ್ವಿತ ಪ್ರಧಾನಮಂತ್ರಿ ಅವರಿಗೆ ಕಳುಹಿಸಿದ್ದೇನೆ' ಎಂದು ಸುದೀರ್ಘವಾದ ಪತ್ರವನ್ನು ಹಂಚಿಕೊಂಡಿದ್ದಾರೆ.