ಮುಂಬೈ: 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟೀಸ್ ಹೊರಡಿಸಿದ್ದಾರೆ. ಬೆಸ್ಟ್ ಡೀಲ್ ಪ್ರೈವೇಟ್ ಲಿಮಿಟೆಡ್ ಹೂಡಿಕೆ ಒಪ್ಪಂಕ್ಕೆ ಸಂಬಂಧಿಸಿ ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಪ್ರಕರಣ ದಾಖಲಿಸಿದೆ. ಅಧಿಕಾರಿಗಳು ದಂಪತಿಯ ಜೊತೆಗೆ ಸಂಸ್ಥೆಯ ಲೆಕ್ಕಪರಿಶೋಧನಾಧಿಕಾರಿಗಳನ್ನೂ ತನಿಖೆಗೆ ಕರೆದಿದ್ದಾರೆ.
ಉದ್ಯಮಿ ದೀಪಕ್ ಕೊಠಾರಿ ಅವರು 2015-2023 ರವರೆಗೆ ವ್ಯವಹಾರ ವಿಸ್ತರಣೆಗಾಗಿ 60.48 ಕೋಟಿ ರೂ.ಗಳನ್ನು ನೀಡಿದ್ದರು. ಆದರೆ ಕುಂದ್ರಾ ದಂಪತಿ ಅದನ್ನು ತಮ್ಮ ವಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ. 2015 ರಲ್ಲಿ ರಾಜೇಶ್ ಆರ್ಯ ಎಂಬ ಏಜೆಂಟ್ ಮೂಲಕ ದಂಪತಿಯ ಪರಿಚಯವಾಯಿತು ಎಂದು ಕೊಠಾರಿ ಹೇಳಿದ್ದರು. 2015 ಮತ್ತು 2023 ರ ಅವಧಿಯಲ್ಲಿ ಸ್ಟಾರ್ ಜೋಡಿ ನನ್ನ ಬಳಿ 60 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದೆ. ಉದ್ಯಮ ವಿಸ್ತರಿಸುವ ಸಂಬಂಧ ಹಣ ಪಡೆದಿದ್ದರು. ಆದರೆ ಅವರು, ನಾನು ನೀಡಿದ್ದ ಹಣವನ್ನು ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಂಪತಿ ಹಣವನ್ನು ಆರಂಭದಲ್ಲಿ ಸಾಲ ಎಂದು ಪಡೆದಿದ್ದರು. ನಂತರ ಹೂಡಿಕೆ ಎಂದು ಟ್ಯಾಕ್ಸ್ ಸೇವಿಂಗ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ಯಮಿ ಕೋಠಾರಿ ಪ್ರಕಾರ, ಶಿಲ್ಪಾ ಶೆಟ್ಟಿ ದಂಪತಿ ಪಡೆದಿದ್ದ ಹಣವನ್ನು ಶೇಕಡಾ 12 ರಷ್ಟು ಬಡ್ಡಿಯೊಂದಿಗೆ ನಿರ್ದಿಷ್ಟ ಅವಧಿಗೆ ಹಿಂತಿರುಗಿಸಬೇಕಾಗಿತ್ತು. 2016ರಲ್ಲಿ ಈ ಬಗ್ಗೆ ಆ ದಂಪತಿ ಲಿಖಿತ ಪತ್ರದ ಮೂಲಕ ಭರವಸೆ ಕೂಡ ನೀಡಿತ್ತು. ಆದರೆ ಇಷ್ಟು ದಿನವಾದರೂ ಹಣ ವಾಪಾಸ್ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Raghavendra Rajkumar: ರಾಘವೇಂದ್ರ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ದುಬಾರಿ ಕಾರು ಗಿಫ್ಟ್ ನೀಡಿದ ಮಕ್ಕಳು!
ಆರಂಭದಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಈ ಅಪರಾಧವನ್ನು ದಾಖಲಿಸಲಾಗಿತ್ತು. ಆದಾಗ್ಯೂ, ಒಳಗೊಂಡಿರುವ ಮೊತ್ತವು 10 ಕೋಟಿ ರೂ.ಗಳನ್ನು ಮೀರಿದ್ದರಿಂದ, ವಿಷಯವನ್ನು ಇಒಡಬ್ಲ್ಯೂಗೆ ವರ್ಗಾಯಿಸಲಾಯಿತು. ಇದೀಗ ಪೊಲೀಸರು ಲುಕ್‌ಔಟ್ ನೋಟೀಸ್ ಹೊರಡಿಸಿದ್ದಾರೆ.