ಲಖನೌ, ಜೂ. 22: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಸೋಮವಾರ (ಜೂನ್ 22) ಮಧ್ಯಾಹ್ನ 3 ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಆಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಉಷಾ ಮೆಹ್ತಾ ಮಾರ್ಗದಲ್ಲಿರುವ ಕೋಚಿಂಗ್ ಸೆಂಟರ್ ಕಟ್ಟಡದಲ್ಲಿ ಅಪರಾಹ್ನ 3 ಗಂಟೆಯ ಸುಮಾರಿಗೆ ಈ ಭಯಾನಕ ದುರಂತ ಸಂಭವಿಸಿದ್ದು, ಸ್ಥಳದಲ್ಲಿ ಭಾರೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕಟ್ಟಡದಲ್ಲಿ ದಟ್ಟವಾದ ಹೊಗೆ ಮತ್ತು ಬೆಂಕಿಯ ಭೀಕರ ಜ್ವಾಲೆಗಳು ಇಡೀ ಆವರಣವನ್ನು ಆವರಿಸಿಕೊಳ್ಳುತ್ತಿದ್ದಂತೆ, ಪ್ರಾಣ ಉಳಿಸಿಕೊಳ್ಳಲು ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆತಂಕದಿಂದ ಒದ್ದಾಡಿದರು. ಕೊಠಡಿಗಳೊಳಗೆ ಸಿಲುಕಿದ ಹಲವು ವಿದ್ಯಾರ್ಥಿಗಳು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, 7ರಿಂದ 8 ವಿದ್ಯಾರ್ಥಿಗಳು ತೀವ್ರ ಆತುರದಲ್ಲಿ ಕಟ್ಟಡದಿಂದ ಕೆಳಗೆ ಜಿಗಿದು ಪಾರಾಗಿದ್ದು, ಈ ವೇಳೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಖನೌ ಅಗ್ನಿ ಅವಘಡದ ದೃಶ್ಯ:
ಕಟ್ಟಡದೊಳಗೆ ಇನ್ನೂ 20 ರಿಂದ 25 ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಶಂಕೆ ಎದುರಾಗಿದೆ. ಘಟನಾ ಸ್ಥಳಕ್ಕೆ ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ ಸೇರಿದಂತೆ 14 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಠಿಣ ಕಾರ್ಯದಲ್ಲಿ ತೊಡಗಿವೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ದುರಂತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯು ಜೆಸಿಬಿ ಯಂತ್ರಗಳ ಸಹಾಯದಿಂದ ಗೋಡೆಯನ್ನು ಒಡೆದು ಕಟ್ಟಡದ ಒಳಗೆ ಪ್ರವೇಶಿಸಿ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಲಿಗಢ ಪ್ರವಾಸವನ್ನು ರದ್ದುಗೊಳಿಸಿ ತಕ್ಷಣ ಲಖನೌಗೆ ಮರಳಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದ್ದು, ನಿಖರವಾದ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ಈ ಘಟನೆಯು ಶೈಕ್ಷಣಿಕ ಸಂಸ್ಥೆಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ತೀವ್ರ ಸಂತಾಪ; ₹ 2 ಲಕ್ಷ ಪರಿಹಾರ ಘೋಷಣೆ
ಲಖನೌ ಕೋಚಿಂಗ್ ಸೆಂಟರ್ ಅಗ್ನಿ ದುರಂತದಲ್ಲಿ ಹಲವು ಜೀವಗಳು ಬಲಿಯಾದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ದುಃಖತಪ್ತ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರುಪಾಯಿ ಪರಿಹಾರ ಧನ ಪ್ರಕಟಿಸಿದ್ದಾರೆ.
ಇದೇ ವೇಳೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಘಟನೆಗೆ ತೀವ್ರ ಕಂಬನಿ ಮಿಡಿದಿದ್ದಾರೆ. ಎಕ್ಸ್‌ನಲ್ಲಿ ಕಳವಳ ಹಂಚಿಕೊಂಡಿರುವ ಅವರು, "ಹಲವು ವಿದ್ಯಾರ್ಥಿಗಳ ಸಾವು ಮತ್ತು ಗಾಯದ ಸುದ್ದಿ ಅತ್ಯಂತ ಹೃದಯ ವಿದ್ರಾವಕವಾಗಿದೆ" ಎಂದು ಹೇಳಿದ್ದಾರೆ.