ಕೊಚ್ಚಿ, ನ. 27: ಭಾರತದ ಎಐ ಕಿಡ್ ಎಂದು ಹೆಸರು ಮಾಡಿರುವ ರಾಹುಲ್ ಜಾನ್ ಅಜು (Raul Jon Aju) ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು, ಎಐ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದಾರೆ. ಮನರಂಜನೆಗಾಗಿ ವಿಡಿಯೋ ಮಾಡುತ್ತಿದ್ದ ಬಾಲಕ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ʼʼರಾಹುಲ್ ದಿ ರಾಕ್ಸ್ಟಾರ್ʼʼ ಎಂದು ಬರೆದುಕೊಂಡಿದ್ದಾರೆ.
12ನೇ ವಯಸ್ಸಿನಲ್ಲಿ ಮೊದಲ ರೋಬೋಟ್ ರೂಪಿಸಿದ್ದ ರಾಹುಲ್, ಈಗ ‘ಎಐ ರೆಲಮ್ ಟೆಕ್ನಾಲಜೀಸ್’ ಸ್ಟಾರ್ಟ್ಅಪ್ ಮೂಲಕ ಹಲವು ಎಐ ಟೂಲ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಐ ಜರ್ನಿ ಸಮಾವೇಶದಲ್ಲಿ ತಮ್ಮಗಿಂತ ಹೆಚ್ಚು ಜ್ಞಾನವಿರುವ ಹಲವರನ್ನು ಭೇಟಿಯಾದ ಬಳಿಕ ಇನ್ನೂ ಸಾಕಷ್ಟು ಕಲಿಯಬೇಕಿದೆ ಎಂಬ ಅರಿವಾಯಿತು ಎಂದು ಅವರು ಬರೆದುಕೊಂಡಿದ್ದಾರೆ.
ರಾಹುಲ್ ಪುಟಿನ್ ಜೊತೆಗಿನ ಸೆಲ್ಫಿ ಪೋಸ್ಟ್ ನೋಡಿ:
ʼʼಪುಟಿನ್ ಜತೆ ಸೆಲ್ಫಿ ಅಂದುಕೊಂಡಿರಲಿಲ್ಲ”
ರಾಹುಲ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಫೋಟೋ ಹಂಚಿಕೊಂಡಿದ್ದು, ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. “9ನೇ ವಯಸ್ಸಿನಲ್ಲಿ ಕೇವಲ ಮೋಜಿಗಾಗಿ ಮೊದಲ ವಿಡಿಯೋ ಮಾಡಿದ್ದರಿಂದ ಹಿಡಿದು, ಅಧ್ಯಕ್ಷ ಪುಟಿನ್ ಜತೆ ಸೆಲ್ಫಿ ತೆಗೆದುಕೊಳ್ಳುವವರೆಗೆ ಬದುಕು ಇಲ್ಲಿಗೆ ಕರೆತರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನಾನು ಇನ್ನೂ ಕಲಿಯುವುದು ಬಹಳಷ್ಟಿದೆ. ನನ್ನ ಜೀವನದ ಪಯಣದಲ್ಲಿ ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ. ಎಐ ಜರ್ನಿ ಸಮಾವೇಶದಲ್ಲಿ ತಮ್ಮಗಿಂತ ಹೆಚ್ಚು ಜ್ಞಾನವಿರುವ ಹಲವರನ್ನು ಭೇಟಿಯಾದ ಬಳಿಕ ಇನ್ನೂ ಸಾಕಷ್ಟು ಕಲಿಯಬೇಕಿದೆ ಎಂಬ ಅರಿವಾಯಿತು ಎಂದೂ ಹೇಳಿದ್ದಾರೆ.
5 ಲಕ್ಷ ಅತಿಥಿಗಳು, 6 ಹೆಲಿಪ್ಯಾಡ್, 80 ಲಕ್ಷ ಸ್ವೀಟ್ಸ್: ಬಿಹಾರ ಶಾಸಕನ ಮಗಳ ಮದುವೆ ಕಂಡು ದೇಶವೇ ಶಾಕ್
ಯಾರು ಈ ರಾಹುಲ್ ಜಾನ್ ಅಜು?
ಕೇರಳದ ಯುವ ಪ್ರತಿಭೆಯಾದ ರಾಹುಲ್, ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನದತ್ತ ಆಕರ್ಷಿತರಾದವರು. 12ನೇ ವಯಸ್ಸಿನಲ್ಲಿ ತಮ್ಮ ಮೊದಲ ರೋಬೋಟ್ ರೂಪಿಸಿದ್ದ ಅವರು, ಇಲ್ಲಿಯವರೆಗೆ ಹಲವು ಎಐ ಟೂಲ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ʼʼಎಐ ಕಿಡ್ ಆಫ್ ಇಂಡಿಯಾʼʼ ಎಂದೇ ಪ್ರಸಿದ್ಧರಾಗಿರುವ ಅವರು ಚಿಕ್ಕ ವಯಸ್ಸಿನಲ್ಲೇ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
‘ಎಐ ರೆಲಮ್ ಟೆಕ್ನಾಲಜೀಸ್’ ಸ್ಟಾರ್ಟ್ಅಪ್ ಆರಂಭಿಸಿರುವ ರಾಹುಲ್, ತಂತ್ರಜ್ಞಾನವನ್ನು ಕಲಿಯುವುದಷ್ಟೇ ಅಲ್ಲದೆ ಇತರರಿಗೂ ಅದರ ಜ್ಞಾನ ತಲುಪಿಸಬೇಕು ಎಂಬ ಉದ್ದೇಶದಿಂದ ಉಚಿತ ಎಐ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಇನ್ನೂ ಕಲಿಯುವುದು ಸಾಗರದಷ್ಟಿದೆ
ಪುಟಿನ್ ಅವರನ್ನು ಭೇಟಿಯಾದ ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ನಾನು ಇನ್ನೂ ಜೀವನದಲ್ಲಿ ಕಲಿಯುವುದು ಬಹಳ ಇದೆ. ಇದನ್ನೇ ತನ್ನ ಸಾಧನೆಯ ಹಂತ ಎಂದು ಭಾವಿಸುವುದಿಲ್ಲ, ಹೊಸದನ್ನು ಕಲಿತು ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಹಂಬಲವಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.