ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5 ಲಕ್ಷ ಅತಿಥಿಗಳು, 6 ಹೆಲಿಪ್ಯಾಡ್, 80 ಲಕ್ಷ ಸ್ವೀಟ್ಸ್: ಬಿಹಾರ ಶಾಸಕನ ಮಗಳ ಮದುವೆ ಕಂಡು ದೇಶವೇ ಶಾಕ್

Bihar viral wedding: 5 ಲಕ್ಷಕ್ಕೂ ಅಧಿಕ ಅತಿಥಿಗಳು, 6 ಹೆಲಿಪ್ಯಾಡ್‌ಗಳು, 52 ಕುದುರೆಗಳ ರೇಸ್, 80 ಲಕ್ಷ ಸಿಹಿತಿಂಡಿ ಮತ್ತು 151 ಕಾರುಗಳ ಬೃಹತ್ ಮೆರವಣಿಗೆ ಬಿಹಾರದ ಬಾಹುಬಲಿ ಖ್ಯಾತಿಯ ಶಾಸಕ ಅನಂತ್ ಸಿಂಗ್ ಅವರ ಪುತ್ರಿಯ ಅದ್ದೂರಿ ವಿವಾಹ ಈಗ ಇಡೀ ದೇಶದ ಗಮನ ಸೆಳೆದಿದೆ. ಒಂದು ಕಡೆ ಮದುವೆಯ ಈ ಅಪಾರ ವೈಭವ ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಈ ಖರ್ಚಿನ ಮೂಲದ ಬಗ್ಗೆ ತನಿಖೆ ನಡೆಸುವಂತೆ ರಾಜಕೀಯ ವಲಯದಲ್ಲಿ ತೀವ್ರ ಒತ್ತಾಯ ಕೇಳಿಬಂದಿದೆ.

ಬಿಹಾರ ಶಾಸಕನ ಮಗಳ ಅದ್ದೂರಿ ವಿವಾಹಕ್ಕೆ ದೇಶವೇ ಶಾಕ್‌!

ಬಿಹಾರ ಶಾಸಕ ಅನಂತ್ ಸಿಂಗ್ ಮಗಳ ಅದ್ದೂರಿ ವಿವಾಹ -

Jyoti S
Jyoti S Nov 27, 2026 10:03 AM

ಪಾಟ್ನಾ, ನ.27: ಬಿಹಾರದಲ್ಲಿ ನಡೆದ ಅದ್ದೂರಿ ವಿವಾಹವೊಂದು ಇದೀಗ ಇಡೀ ದೇಶದ ಗಮನ ಸೆಳೆದಿದ್ದು, 5 ಲಕ್ಷಕ್ಕೂ ಅಧಿಕ ಅತಿಥಿಗಳು, 6 ಹೆಲಿಪ್ಯಾಡ್‌ಗಳು, 52 ಕುದುರೆಗಳ ರೇಸ್, 80 ಲಕ್ಷ ಸಿಹಿತಿಂಡಿ ಮತ್ತು 151 ಕಾರುಗಳ ಬೃಹತ್ ಮೆರವಣಿಗೆ ಮೂಲಕ ಬಿಹಾರದ ಬಾಹುಬಲಿ ಖ್ಯಾತಿಯ ಶಾಸಕ ಅನಂತ್ ಸಿಂಗ್ (Anant Singh) ಅವರ ಪುತ್ರಿಯ ಅದ್ದೂರಿ ವಿವಾಹ ಭಾರಿ ಚರ್ಚೆಗೆ ಕಾರಣವಾಗಿದೆ. ಬುಧವಾರ ಶಿವಾಂಗಿ ಸಿಂಗ್ ಮತ್ತು ರಿಷಿಕೇಶ್ ಕುಮಾರ್ ಅವರ ವಿವಾಹ ನೆರವೇರಿದ್ದು, ಅಂದಾಜು 5 ಲಕ್ಷ ಜನರು ಪಾಲ್ಗೊಂಡಿದ್ದರಿಂದ ರಾಜಧಾನಿಯತ್ತ ಸಾಗುವ ಮಾರ್ಗದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.

ರಾಜ್ಯದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಬಡತನದಲ್ಲಿದ್ದಾರೆ ಎಂದು ಗುರುತಿಸಲ್ಪಟ್ಟಿರುವ ಬಿಹಾರದಲ್ಲಿ ಇಷ್ಟೊಂದು ಬೃಹತ್ ಮಟ್ಟದ ವೈಭವ ಕಂಡುಬಂದಿರುವುದು ಚರ್ಚೆಗೆ ಕಾರಣವಾಗಿದೆ. ಈ ಅದ್ದೂರಿ ವಿವಾಹದ ಹಿಂದಿನ ಹಣಕಾಸಿನ ಮೂಲದ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಗಳು ಕೇಳಿಬಂದಿವೆ.

ಮದುವೆಯ ಜನಸಂದಣಿ ವಿಡಿಯೋ ನೋಡಿ:



ಮದುವೆಯಲ್ಲಿ ವಧು-ವರರ ಎಂಟ್ರಿ ಕೂಡ ಸಿನಿಮಾ ಸ್ಟೈಲ್‌ನಲ್ಲಿತ್ತು. ದೆಹಲಿ ವಿವಿ ಪದವೀಧರೆಯಾದ ವಧು ಶಿವಾಂಗಿ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಬಂದರೆ, ಅಮೆರಿಕದ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಎಂಬಿಎ ಮಾಡಿರುವ ವರ ರಿಷಿಕೇಶ್ ಕುಮಾರ್ 151 ಕಾರುಗಳ ದೊಡ್ಡ ಬೆಂಗಾವಲು ಪಡೆಯೊಂದಿಗೆ ಎಂಟ್ರಿ ಕೊಟ್ಟರು. ವರನಿಗೆ ಚಿನ್ನ-ಬೆಳ್ಳಿಯ ಜೊತೆಗೆ 2.3 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗಿದೆ. ಇದೆಲ್ಲದರ ನಡುವೆ ವಧುವಿನ ತಂದೆ ಅನಂತ್ ಸಿಂಗ್, ಎಸ್‌ಯುವಿ ಕಾರಿನ ಸನ್‌ರೂಫ್ ಮೂಲಕ ಎದ್ದು ನಿಂತು ಬೆಂಬಲಿಗರತ್ತ ಕೈಬೀಸುತ್ತಾ ಬಂದಿದ್ದು ಹೈಲೈಟ್ ಆಗಿತ್ತು.



80 ಲಕ್ಷ ಸ್ವೀಟ್ಸ್, 150 ಬಗೆಯ ಭಕ್ಷ್ಯ

ಐದು ಲಕ್ಷಕ್ಕೂ ಅಧಿಕ ಅತಿಥಿಗಳು ಪಾಲ್ಗೊಂಡಿದ್ದ ಈ ಬೃಹತ್ ವಿವಾಹದಲ್ಲಿ ಊಟದ ವ್ಯವಸ್ಥೆ ಎಲ್ಲರ ಹುಬ್ಬೇರಿಸುವಂತಿತ್ತು. ನಡಾವಾ ಗ್ರಾಮದ ಪೂರ್ವಜರ ಮನೆಯ ಆವರಣದಲ್ಲಿ ಅತಿಥಿಗಳಿಗೆ ಭರ್ಜರಿ ಭೋಜನ ಸಿದ್ಧಪಡಿಸಲು ಬೃಹತ್ ತಾತ್ಕಾಲಿಕ ಅಡುಗೆಮನೆಗಳನ್ನು ನಿರ್ಮಿಸಲಾಗಿತ್ತು. ನೂರಾರು ನುರಿತರು ಹಗಲು-ರಾತ್ರಿ ಶ್ರಮಿಸಿ 150ಕ್ಕೂ ಹೆಚ್ಚು ಬಗೆಯ ವಿವಿಧ ಖಾದ್ಯಗಳನ್ನು ತಯಾರಿಸಿದ್ದರು. ವಿಶೇಷವೆಂದರೆ, ಅತಿಥಿಗಳಿಗಾಗಿ ಬರೋಬ್ಬರಿ 80 ಲಕ್ಷ ಸಿಹಿತಿಂಡಿಗಳನ್ನು ಸಿದ್ಧಪಡಿಸಲಾಗಿತ್ತು. ಅಲ್ಲದೆ, ಮದುವೆಗೆ ಆಗಮಿಸಿದ ಗಣ್ಯರು ಮತ್ತು ವಿಐಪಿ ಅತಿಥಿಗಳಿಗಾಗಿ ಪ್ರತ್ಯೇಕ ಆತಿಥ್ಯ ಹಾಗೂ 6 ಹೆಲಿಪ್ಯಾಡ್‌ಗಳ ವ್ಯವಸ್ಥೆಯನ್ನೂ ಆಯೋಜಕರು ಮಾಡಿದ್ದರು.

ಮದುವೆಗೆ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದುಬಂದಿತ್ತು. ಊಟದ ಕೌಂಟರ್‌ಗಳ ಬಳಿ ಎಷ್ಟು ನೂಕುನುಗ್ಗಲು ಇತ್ತೆಂದರೆ, ಬಡಿಸುವವರು ತಟ್ಟೆಗಳನ್ನು ಕ್ಯಾಚ್-ಕ್ಯಾಚ್ ಆಟದಂತೆ ಜನರ ಗುಂಪಿನ ಮೇಲೆ ಎಸೆಯುತ್ತಿದ್ದರು. ತಟ್ಟೆ ಹಿಡಿಯಲು ಜನರು ಒಬ್ಬರ ಮೇಲೊಬ್ಬರು ಬೀಳುತ್ತಿದ್ದ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲವರು ನೇರವಾಗಿ ಪಾತ್ರೆಗಳಿಂದಲೇ ಪನೀರ್ ತುಂಡುಗಳನ್ನು ಬಾಚಿಕೊಂಡರೆ, ಮತ್ತೊಂದು ವಿಡಿಯೋದಲ್ಲಿ ತಳ್ಳಾಟದ ನಡುವೆ ವ್ಯಕ್ತಿಯೊಬ್ಬ ಪಲ್ಯ ತುಂಬಿದ್ದ ದೊಡ್ಡ ಪಾತ್ರೆಯೊಳಗೇ ಬಿದ್ದಿದ್ದಾರೆ.

ಬಿಹಾರದ ʼಬಾಹುಬಲಿʼ ಮಗಳ ಮದುವೆಗೆ 4 ಲಕ್ಷ ಜನರಿಗೆ ಆಹ್ವಾನ; ಪ್ರಧಾನಿ ಮೋದಿಗೂ ಆಮಂತ್ರಿಸುವೆ ಎಂದ ಶಾಸಕ!

52 ಕುದುರೆಗಳ ರೇಸ್

ವಿವಾಹದ ಪ್ರಮುಖ ಆಕರ್ಷಣೆಯಾಗಿ 52 ಕುದುರೆಗಳ ರೇಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಿಗೆ ಬಿಳಿ ಬಣ್ಣದ ಎಸ್‌ಯುವಿ ಕಾರು, ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಬಹುಮಾನವಾಗಿ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಬುಧವಾರ ಮೈದಾನಕ್ಕೆ ಜನರು ನುಗ್ಗಿದ ಕಾರಣ ಸ್ಪರ್ಧೆಯನ್ನು ಮುಂದೂಡಬೇಕಾಯಿತು ಮತ್ತು ಅಂತಿಮ ಸುತ್ತನ್ನು ಗುರುವಾರಕ್ಕೆ ನಿಗದಿಪಡಿಸಲಾಯಿತು. ಇದಕ್ಕೂ ಮುನ್ನ ನಡೆದ ಪೂರ್ವಾಭ್ಯಾಸದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹತ್ತಾರು ಸಾವಿರ ವೀಕ್ಷಕರು ನೆರೆದಿದ್ದಲ್ಲದೆ, ನೂರಾರು ಮಂದಿ ರೇಸ್ ನೋಡಲು ವಿದ್ಯುತ್ ಗೋಪುರವನ್ನೇ ಏರಿದ್ದ ದೃಶ್ಯ ಕಂಡುಬಂದಿತ್ತು.

ಯಾರು ಈ ಛೋಟೆ ಸರ್ಕಾರ್? 100 ಕೋಟಿ ಆಸ್ತಿ, 24ಕ್ಕೂ ಹೆಚ್ಚು ಕೇಸ್

ಬಿಹಾರ ರಾಜಕಾರಣದಲ್ಲಿ ಛೋಟೆ ಸರ್ಕಾರ್ ಮತ್ತು ಬಾಹುಬಲಿ ಎಂದೇ ಫೇಮಸ್ ಆಗಿರುವ ಅನಂತ್ ಸಿಂಗ್, 2005ರಿಂದ ಮೊಕಾಮಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಶಾಸಕರಾಗಿದ್ದಾರೆ. ಕಳೆದ ವರ್ಷದ ಚುನಾವಣೆ ವೇಳೆ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಪತ್ನಿ ಮತ್ತು ಇವರ ಹೆಸರಿನಲ್ಲಿ 100 ಕೋಟಿ ರೂ. ಆಸ್ತಿಯಿದೆ. ಇದರ ಜೊತೆಗೆ ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಗಲಭೆಯಂತಹ 24ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಕೇಸ್‌ಗಳು ಇವರ ಮೇಲಿವೆ.

2019ರಲ್ಲಿ ಮನೆಯಲ್ಲಿ ಎಕೆ-47 ರೈಫಲ್ ಸಿಕ್ಕ ಕೇಸ್‌ನಲ್ಲಿ 2022ರಲ್ಲಿ ಇವರಿಗೆ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದು ಮೇಲ್ಮನವಿ ಸಲ್ಲಿಸಿದ್ದ ಅನಂತ್ ಸಿಂಗ್, ಕಳೆದ ಚುನಾವಣೆಯಲ್ಲಿ ಗೆದ್ದು ಮತ್ತೆ ಶಾಸಕರಾಗಿದ್ದಾರೆ. ಅದೇ ಚುನಾವಣೆ ವೇಳೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಇವರೇ ಪ್ರಮುಖ ಆರೋಪಿಯಾಗಿದ್ದು, ಡಿಸೆಂಬರ್ 1ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಕೋರ್ಟ್ ಆದೇಶ ಪಾಲಿಸುವುದಾಗಿ ಸ್ವತಃ ಅನಂತ್ ಸಿಂಗ್ ಹೇಳಿಕೊಂಡಿದ್ದಾರೆ.

ಬರಿಗೈಯಲ್ಲಿ ಶೌಚಾಲಯ ಕ್ಲೀನ್‌ ಮಾಡಿದ ಬಿಜೆಪಿ ಸಂಸದ; ವಿಡಿಯೋ ನೋಡಿದ ಜನರು ಹೇಳಿದ್ದೇನು?

ಮದುವೆ ಖರ್ಚಿನ ತನಿಖೆಗೆ ಒತ್ತಾಯ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಮದುವೆ ಕುರಿತು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 40 ಕೋಟಿ ರೂ. ಖರ್ಚು ಮಾಡಿರುವ ಮದುವೆಯಲ್ಲಿ ಲಕ್ಷಾಂತರ ಜನರನ್ನು ಕರೆಯುವ ತಾಕತ್ತಿದ್ದರೆ, ಅವರಿಗೆ ಗೌರವಯುತವಾಗಿ ಊಟ ಹಾಕುವ ಜವಾಬ್ದಾರಿಯೂ ಇರಬೇಕು. ಇದು ಅನ್ನದಾನವಲ್ಲ, ಕೇವಲ ಸಂಪತ್ತು ಮತ್ತು ಅಧಿಕಾರದ ಪ್ರದರ್ಶನ ಎಂದು ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ನೀರಜ್ ಕುಮಾರ್ ಅವರು, "ಈ ಮದುವೆಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ. ಸದ್ಯ ಈ ಮದುವೆ ಕುಟುಂಬದ ಸಂಭ್ರಮಕ್ಕಿಂತ ಹೆಚ್ಚಾಗಿ ಬಿಹಾರದ ಹಣಬಲ ಮತ್ತು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.