ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ನಾಳೆ ಮಗಳ ಮದುವೆ, ದಯವಿಟ್ಟು ಬೆಳೆ ಖರೀದಿಸಿ": ಮಂಡಿಯಲ್ಲಿ ಅಸಾಹಯಕ ರೈತನ ಕಣ್ಣೀರು

ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ನಾನಾಖೇಡಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ವಿವಾದದಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಮಗಳ ಮದುವೆ ಖರ್ಚಿಗಾಗಿ ಬೆಳೆ ಮಾರಲು ಬಂದ ರೈತನೊಬ್ಬ ಕಣ್ಣೀರು ಹಾಕುತ್ತ ಕೈಮುಗಿದು ಬೇಡಿಕೊಂಡ ಘಟನೆ ಸಾಮಾಜಿಕ ಕಳವಳಕ್ಕೆ ಕಾರಣವಾಗಿದೆ. ಮಾರುಕಟ್ಟೆ ನಿರೀಕ್ಷಕರ ವಿರುದ್ಧ ರೈತರು ಅಕ್ರಮದ ಆರೋಪ ಮಾಡಿದ್ದಾರೆ.

ಸಂತ್ರಸ್ತ ರೈತ

ಭೋಪಾಲ್‌, ಮಾ. 12: ಮಧ್ಯ ಪ್ರದೇಶದ (Madhya Pradesh) ಗುಣಾ (Guna) ಜಿಲ್ಲೆಯ ನಾನಾಖೇಡಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(Nanakhedi Krishi Upaj Mandi) (ಮಂಡಿ) ಮಗಳ ಮದುವೆಗಾಗಿ ಹಣ ಹೊಂದಿಸಲು ಬಂದ ರೈತನೊಬ್ಬ ಕಣ್ಣೀರು ಸುರಿಸುತ್ತ ಕೈಮುಗಿದು ಬೇಡಿಕೊಂಡ ಘಟನೆಯು ದೇಶದ ಬೆನ್ನುಲುಬಾದ ರೈತನ ಅಸಹಾಯಕತೆಯನ್ನು ಬಿಂಬಿಸಿದೆ. ಮಾರುಕಟ್ಟೆ ನಿರೀಕ್ಷಕರೊಬ್ಬರ ಬೇಜವಾಬ್ದಾರಿತನ ಮತ್ತು ಮಂಡಿಯಲ್ಲಿ ಉಂಟಾದ ಸಣ್ಣ ವಿವಾದದಿಂದಾಗಿ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದ್ದೇ ಈ ದುಸ್ಥಿತಿಗೆ ಕಾರಣ.

ಮಂಗಳವಾರ (ಮಾರ್ಚ್‌ 10) ಬೆಳಗ್ಗೆ ಮಂಡಿಯ ಹರಾಜು ಪ್ರಕ್ರಿಯೆಯಲ್ಲಿ ಮಾರುಕಟ್ಟೆ ನಿರೀಕ್ಷಕ ರಾಜಕುಮಾರ್ ಶರ್ಮಾ ಎಂಬುವವರು ಕುಡಿದ ಅಮಲಿನಲ್ಲಿ ದರ್ಪ ತೋರಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ಹರಾಜಿನಲ್ಲಿ ರೈತನೊಬ್ಬನ ಕೊತ್ತಂಬರಿ ಬೀಜ ಕ್ವಿಂಟಾಲ್‌ಗೆ 5,700 ರುಪಾಯಿ ಗರಿಷ್ಠ ಬೆಲೆ ಬಂದಿತ್ತು. ಆದರೆ ನಿರೀಕ್ಷಕರು ಚೀಟಿಯಲ್ಲಿ ಅಕ್ರಮವಾಗಿ ಕೇವಲ 5,400 ರುಪಾಯಿ ಎಂದು ದಾಖಲಿಸಿದ್ದರು. ಈ 300 ರುಪಾಯಿಗಳ ವ್ಯತ್ಯಾಸವನ್ನು ರೈತ ಪ್ರಶ್ನಿಸಿದಾಗ ವಿವಾದ ಉಂಟಾಯಿತು. ನಿರೀಕ್ಷಕರು ರೈತರು ಮತ್ತು ವರ್ತಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣ, ಆಕ್ರೋಶಗೊಂಡ ವರ್ತಕರು ಹರಾಜು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು.

ಭಾರತಕ್ಕೆ ಮಾತ್ರ ಹಾರ್ಮೊಜ್‌ ಜಲಸಂಧಿ ತೆರವುಗೊಳಿಸಿದ ಇರಾನ್‌; ವಿದೇಶಾಂಗ ಸಚಿವರ ಮಾತುಕತೆ ಬೆನ್ನಲ್ಲೇ ಮಹತ್ವದ ಘೋಷಣೆ!

ರೈತನ ಕಣ್ಣೀರು

ಹಲವು ಗಂಟೆಗಳ ಕಾಲ ಹರಾಜು ನಡೆಯದಿದ್ದಾಗ ಶ್ರೀಪುರಚಕ್ ಗ್ರಾಮದ ರೈತರೊಬ್ಬರು ಕಂಗಾಲಾದರು. ಅವರು ತಮ್ಮ ಬೆಳೆಗಳನ್ನು ಮಾರಿ ಮಗಳ ಮದುವೆಯ ಖರ್ಚು ನಿಭಾಯಿಸಲು ಬಂದಿದ್ದರು. "ನಾಳೆ ನನ್ನ ಮಗಳ ಮದುವೆ ಇದೆ, ಮನೆಯಲ್ಲಿ ಸಮಾರಂಭಕ್ಕೆ ಹಣದ ಅಗತ್ಯವಿದೆ. ಇಂದು ಬೆಳೆ ಮಾರಾಟವಾಗದಿದ್ದರೆ ಮದುವೆಯೇ ನಿಂತುಹೋಗುತ್ತದೆ" ಎಂದು ಅವರು ಅಧಿಕಾರಿಗಳ ಮತ್ತು ವರ್ತಕರ ಮುಂದೆ ಅತ್ತಿದ್ದಾರೆ. ಆದರೆ ಗಂಟೆಗಳ ಕಾಲ ಯಾರೂ ಅವರ ನೆರವಿಗೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಎಬಿ ರೋಡ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ಕ್ರಮ ಮತ್ತು ರಾಜಕೀಯ ನಾಯಕರ ಆಕ್ರೋಶ

ಈ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವ ಜೈವರ್ಧನ್ ಸಿಂಗ್ ರೈತರಿಗೆ ಎದುರಾದ ಅವಮಾನವನ್ನು ಖಂಡಿಸಿ, ʼʼಅನ್ನದಾತನನ್ನು ಈ ರೀತಿ ಹೀಯಾಳಿಸುವುದು ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಡಿ ಕಾರ್ಯದರ್ಶಿ ಆರ್.ಪಿ. ಸಿಂಗ್ ಪ್ರತಿಕ್ರಿಯಿಸಿ, ʼʼಆರೋಪಿ ನಿರೀಕ್ಷಕನನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಮತ್ತು ಅವರ ವೈದ್ಯಕೀಯ ಪರೀಕ್ಷೆ ಹಾಗೂ ತನಿಖೆಗೆ ಆದೇಶಿಸಲಾಗಿದೆʼʼ ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.