ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಂದೂಗಳ ಹಕ್ಕನ್ನು ತಿರಸ್ಕರಿಸಿದ್ದ ಡಿಎಂಕೆ ಸರಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ತರಾಟೆ

Karthigai Deepam Row: ತಮಿಳುನಾಡಿನ ತಿರುಪರನ್‌ಕುಂಡ್ರಂ ಬೆಟ್ಟಗಳ ಮೇಲಿರುವ, ಸುಬ್ರಮಣ್ಯ ದೇವಾಲಯಕ್ಕೆ ಸೇರಿದ ಕಲ್ಲಿನ ಕಂಬದಲ್ಲಿ ಹಿಂದೂಗಳು ತಮ್ಮ ಧಾರ್ಮಿಕ ಪರಂಪರೆಯ ಪ್ರಕಾರ, ಕಾರ್ತಿಗೈ ದೀಪವನ್ನು ಬೆಳಗಿಸಲು ಅನುಕೂಲವಾಗುವಂತೆ, ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ಎತ್ತಿ ಹಿಡಿದಿದೆ.

ಡಿಎಂಕೆ ಸರಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ತರಾಟೆ

ಕಾರ್ತಿಗೈ ದೀಪಂ (ಸಂಗ್ರಹ ಚಿತ್ರ) -

Ramesh B
Ramesh B Jan 8, 2026 9:00 PM
  • ಮಾಧವ ಶರ್ಮಾ, ಬೆಂಗಳೂರು

ತಮಿಳುನಾಡಿನ ತಿರುಪರನ್‌ಕುಂಡ್ರಂ ಬೆಟ್ಟಗಳ ಮೇಲಿರುವ, ಸುಬ್ರಮಣ್ಯ ದೇವಾಲಯಕ್ಕೆ ಸೇರಿದ ಕಲ್ಲಿನ ಕಂಬದಲ್ಲಿ (ದೀಪಥೂನ್) ಹಿಂದೂಗಳು ತಮ್ಮ ಧಾರ್ಮಿಕ ಪರಂಪರೆಯ ಪ್ರಕಾರ, ಕಾರ್ತಿಗೈ ದೀಪವನ್ನು ಬೆಳಗಿಸಲು ಅನುಕೂಲವಾಗುವಂತೆ, ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ಎತ್ತಿಹಿಡಿದಿದೆ (Karthigai Deepam Row). ಈ ಆಚರಣೆಯು ಸಾರ್ವಜನಿಕ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಭಂಗಗೊಳಿಸಬಹುದು ಎಂಬ ರಾಜ್ಯದ ಆತಂಕಗಳನ್ನು ಹೈಕೋರ್ಟ್ ಬಲವಾಗಿ ತಿರಸ್ಕರಿಸಿದೆ. ಇದರಿಂದಾಗಿ ದೀರ್ಘಕಾಲದ ಮತ್ತು ವಿವಾದಾತ್ಮಕ ಸಮಸ್ಯೆ ಅಂತ್ಯ ಕಂಡಿದೆ.‌ ಹಿಂದೂಗಳ ಆರಾಧನೆಗೆ ಇದ್ದ ಅಡ್ಡಿಗಳು ನಿವಾರಣೆಯಾಗಿವೆ. ಹಿಂದೂಗಳ ಪರವಾಗಿ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ದೀಪೋತ್ಸವ ಆಚರಿಸಲು ಆದೇಶಿಸಿದ್ದರು. ಈ ತೀರ್ಪನ್ನು ಹೈಕೋರ್ಟಿನ ಮಧುರೈ ಪೀಠವು ಇದೀಗ ಎತ್ತಿ ಹಿಡಿದಿದೆ.

ತಿರುಪರನ್‌ ಕುಂಡ್ರಂ ಮುರುಗನ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಮಧುರೈ ಜಿಲ್ಲಾಧಿಕಾರಿ ಮತ್ತು ಮಧುರೈ ನಗರ ಪೊಲೀಸ್ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿ ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಕೆ ಕೆ ರಾಮಕೃಷ್ಣನ್ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. 'ದೀಪ' ಬೆಳಗುವ ವಿಷಯವನ್ನು "ಅನಗತ್ಯವಾಗಿ ರಾಜಕೀಯಗೊಳಿಸಲಾಗಿದೆ" ಎಂದು ವಿಭಾಗೀಯ ಪೀಠ ತಿಳಿಸಿದೆ. ತಮಿಳುನಾಡು ರಾಜ್ಯ ಸರಕಾರವು ಪ್ರಕಣವನ್ನು ರಾಜಕೀಯಗೊಳಿಸಿರುವುದನ್ನು ಪೀಠವು ಗಮನಿಸಿದೆ.

ಜಿಲ್ಲಾಡಳಿತವು ಈ ಸಮಸ್ಯೆಯನ್ನು ಮಧ್ಯಸ್ಥಿಕೆಯ ಮೂಲಕ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಒಂದು ಅವಕಾಶವಾಗಿ ಪರಿಗಣಿಸಬೇಕಿತ್ತು ಎಂದು ನ್ಯಾಯಾಲಯ ಗಮನಿಸಿದೆ. ಬೆಟ್ಟವು ಸಂರಕ್ಷಿತ ತಾಣವಾಗಿರುವುದರಿಂದ, ಅದರ ಮೇಲೆ ನಡೆಸುವ ಯಾವುದೇ ಚಟುವಟಿಕೆಯು ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅದು ಹೇಳಿದೆ.

ದೀಪವನ್ನು ಬೆಳಗಿಸಬಹುದು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಸಮಾರಂಭಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗುವುದು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಯೊಂದಿಗೆ ಸಮಾಲೋಚನೆಗೆ ಒಳಪಟ್ಟಿರುತ್ತದೆ ಎಂದು ಹೇಳಿತು.

ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ

ಬಿಜೆಪಿ ಪ್ರತಿಕ್ರಿಯೆ

ಮಧುರೈ ಹೈಕೋರ್ಟ್‌ನ ತೀರ್ಪನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಶ್ಲಾಘಿಸಿದ್ದು, ತಮಿಳುನಾಡಿನಲ್ಲಿ "ಹಿಂದೂ ನಂಬಿಕೆ"ಗೆ "ದೊಡ್ಡ ಗೆಲುವು" ಎಂದು ಬಣ್ಣಿಸಿದೆ. ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ, ಇದು "ಡಿಎಂಕೆಗೆ ದೊಡ್ಡ ಮುಜುಗರ" ಎಂದು ಹೇಳಿದ್ದಾರೆ.

"ದೋಷಾರೋಪಣೆ ಗೊತ್ತುವಳಿ,ಸಂವಿಧಾನ ವಿರೋಧಿ, ಹಿಂದೂ ವಿರೋಧಿ ಗ್ಯಾಂಗ್ ಸೋತಿತು. ಇದನ್ನು ಬೆಂಬಲಿಸಿದ್ದಕ್ಕಾಗಿ ಉದ್ಧವ್ ಸೇನಾ ಕ್ಷಮೆಯಾಚಿಸುತ್ತದೆಯೇ?" ಎಂದು ಶೆಹಜಾದ್ ಪೂನವಾಲ್ಲಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ತಮಿಳುನಾಡು ಸರಕಾರದ ಅಧಿಕಾರಿಗಳು, ಬೆಟ್ಟದಲ್ಲಿ ದೀಪ ಬೆಳಗುವುದರಿಂದ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಆಗಬಹುದು ಎಂಬ "ಗುಮ್ಮʼʼನನ್ನು ಸೃಷ್ಟಿಸಿದ್ದರು. ಇದು ನಿರರ್ಥಕ ಎಂದು ಪೀಠ ಹೇಳಿದೆ.

ಹೈಕೋರ್ಟ್‌ ಹೇಳಿದ್ದೇನು?

ತಿರುಪರನ್‌ ಕುಂಡ್ರಂ ಬೆಟ್ಟದ ಮೇಲೆ ಇರುವ ದೇವಾಲಯದ ಸ್ಥಳದಲ್ಲಿ ದೀಪ ಬೆಳಗಿದರೆ, ಸಾರ್ವಜನಿಕರ ಶಾಂತಿ ಭಂಗವಾಗಲಿದೆ ಎಂಬ ವಾದವೇ ಅರ್ಥವಿಲ್ಲದ್ದು. ಸ್ವತಃ ಸರಕಾರವೇ ಅಶಾಂತಿಯನ್ನು ಪ್ರಾಯೋಜಕತ್ವ ಮಾಡಬೇಕೇ ಹೊರತು, ಬೇರೆ ಕಾರಣಗಳಿಗೆ ಗಲಭೆ ಆಗುವ ಸಾಧ್ಯತೆ ಅಲ್ಲಿ ಕಂಡುಬರುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರ ಈ ವಿಚಾರದಲ್ಲಿ ತನ್ನ ರಾಜಕೀಯದ ಬೇಳೆ ಬೇಯಿಸಬಾರದು ಎಂಬುದು ನಮ್ಮ ಮನವಿ ಎಂದು ಕೋರ್ಟ್‌ ಹೇಳಿದೆ.

ತಿರುಪರನ್‌ ಕುಂಡ್ರಂ ಬೆಟ್ಟದ ಮೇಲೆ ದೀಪೋತ್ಸವ ನಡೆಸುವ ಸ್ಥಳವು ಸುಬ್ರಮಣ್ಯ ದೇವಾಲಯಕ್ಕೆ ಸೇರಿದ ಸ್ಥಳವಾಗಿದೆ ಎಂಬುದನ್ನು ಕೋರ್ಟ್‌ ಕೂಡ ಖಾತರಿಪಡಿಸಿದೆ. ವಕ್ಫ್‌ ಮಂಡಳಿಯೂ ಈ ವಿಚಾರದಲ್ಲಿ ಯಾವುದೇ ಆಕ್ಷೇಪ ಮಾಡಿಲ್ಲ. ಇದೇ ಮೊದಲ ಬಾರಿಗೆ ವಕ್ಫ್‌ ಪರವಾಗಿ ಮೇಲ್ಮನವಿ ಸಲ್ಲಿಸುವ ವೇಳೆಯಲ್ಲಿ ದೀಪೋತ್ಸವದ ಕಂಬವು ದರ್ಗಾಕ್ಕೆ ಸೇರಿದ್ದೆಂದು ಪ್ರತಿಪಾದಿಸಲಾಗಿತ್ತು. ಈ ಅರ್ಜಿಯನ್ನು ಪರಿಶೀಲಿಸಿದ ಸಂದರ್ಭ ಕೋರ್ಟ್‌ ಸಂದೇಹ ವ್ಯಕ್ತಪಡಿಸಿದಾಗ ಬೇರೆ ಕಾರಣವನ್ನು ಮಂಡಿಸಲಾಗಿತ್ತು.

ಆದರೆ ಕಾರ್ತಿಗೈ ದೀಪಮ್‌ (ಕಾರ್ತಿಕ ದೀಪ) ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಶತಮಾನಗಳಿಂದ ಇದು ನಡೆದುಕೊಂಡು ಬರುತ್ತಿದೆ. ಈ ದೇವಾಲಯವು ಮುರುಗನ್‌ (ಸುಬ್ರಮಣ್ಯ) ಮತ್ತು ಮಹಾ ಶಿವನ ದೇಗುಲ. ತಮಿಳುನಾಡಿನ ಪ್ರಮುಖ ಹಿಂದೂ ಆರಾಧನಾ ತಾಣಗಳಲ್ಲಿ ಒಂದಾಗಿದೆ. ಬೆಟ್ಟದಲ್ಲಿ ಇರುವ ದರ್ಗಾವನ್ನು ಸಿಕಂದರ್‌ ದರ್ಗಾ ಅಥವಾ ಸಿಕಂದರ್‌ ಬಾದ್‌ ಶಹಾ ದರ್ಗಾ ಎಂದು ಕರೆಯುತ್ತಾರೆ. 14ನೇ ಶತಮಾನದಲ್ಲಿ ಮಧುರೈ ಸುಲ್ತಾನರ ಕಾಲದಲ್ಲಿ ಕಟ್ಟಲಾಗಿತ್ತು. ಪಾಂಡ್ಯ ದೊರೆಗಳನ್ನು ಸೋಲಿಸಿದ್ದ ಸಿಕಂದರ್‌ ಬಾದ್‌ ಶಾ ಈ ಬೆಟ್ಟದಲ್ಲೂ ಕೆಲ ಕಾಲ ವಾಸ್ತವ್ಯಕ್ಕೆ ಇದ್ದರು ಎಂಬ ಐತಿಹ್ಯ ಇದೆ. ಪ್ರತಿದಾಳಿಯಲ್ಲಿ ಅವರು ಹತರಾಗಿದ್ದರು. ಬಳಿಕ ದರ್ಗಾ ಕಟ್ಟಲಾಯಿತು ಎಂಬ ಇತಿಹಾಸ ಇದೆ. ಆದರೆ ಕಾರ್ತಿಕ ದೀಪಮ್‌ ಆಚರಣೆ ಎಲ್ಲಕ್ಕಿಂತ ಪ್ರಾಚೀನ ಪದ್ಧತಿ. ದೇವಾಲಯವೂ ಅತ್ಯಂತ ಹಳೆಯ ಕಾಲದ್ದು.

ಮಧುರೈ ದೇವಸ್ಥಾನದಲ್ಲಿ ಗಲಾಟೆಗೆ ಕಾರಣವಾಯಿತು ಕಾರ್ತಿಗೈ ದೀಪಂ

ಕಾರ್ತಿಕ ದೀಪಂ ಆಚರಣೆಯ ವಿವಾದವು ತಮಿಳುನಾಡಿನ ಡಿಎಂಕೆ ಸರಕಾರವು ವ್ಯವಸ್ಥಿತವಾಗಿ ಹಿಂದೂಗಳ ಹಕ್ಕನ್ನು ಹೇಗೆ ನಿರಾಕರಿಸುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಶತಮಾನಗಳಷ್ಟು ಹಳೆಯ ಹಿಂದೂ ಸಂಪ್ರದಾಯವನ್ನು ಪ್ರಶ್ನಿಸಿ ಡಿಎಂಕೆ ಸರಕಾರವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಡಿಎಂಕೆ ಸರಕಾರದ ಸಚಿವ ಪಿಕೆ ಶೇಖರ್‌ ಬಾಬು ಅವರು ದೀಪೋತ್ಸವದಿಂದ ಕೋಮು ಗಲಭೆ ಆಗಬಹುದು ಎಂದು ಇಲ್ಲಸಲ್ಲದ ಆರೋಪ ಮಾಡಿದ್ದರು. ಮದ್ರಾಸ್‌ ಹೈಕೋರ್ಟ್‌ ಹಿಂದೂಗಳ ಪರವಾಗಿ ಆದೇಶಿಸಿದ್ದರೂ, ಡಿಎಂಕೆ ಸರಕಾರ ಅನುಷ್ಠಾನವನ್ನು ವಿಳಂಬಿಸಿತ್ತು. ಒಂದು ದೀಪವನ್ನು ಬೆಳಗುವುದನ್ನು ತಡೆಯಲು ಇಡೀ ಸರಕಾರವೇ ಯತ್ನಿಸಿತ್ತು. 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ, ಮೇಲ್ಮನವಿಗಳು, ನ್ಯಾಯಾಂಗ ನಿಂದನೆಯ ಯತ್ನ ಎಲ್ಲವೂ ನಡೆಯಿತು. ತಮಿಳುನಾಡಿನಲ್ಲಿ ಹಿಂದೂಗಳು ಈಗ ಅಭದ್ರತೆಯ ಭಾವನೆ ಅನುಭವಿಸುತ್ತಿದ್ದಾರೆ. ಹಿಂದೂ ಆಚರಣೆಗಳನ್ನು ಹತ್ತಿಕ್ಕಲಾಗುತ್ತಿದೆ. ದೇವಾಲಯಗಳನ್ನು ಅತಿಕ್ರಮಿಸಲಾಗುತ್ತಿದೆ.

ಡಿಎಂಕೆ ಸಂಸದ ಎ. ರಾಜಾ ಸನಾತನ ಧರ್ಮವನ್ನು ಎಚ್‌ಐವಿ, ಕುಷ್ಠ ರೋಗಕ್ಕೆ ಹೋಲಿಸಿದ್ದರು. ಹಿಂದೂ ಭಕ್ತರನ್ನು ಮೂರ್ಖರೆಂದು ನಿಂದಿಸಿದ್ದರು. ಹಿಂದೂ ಸಂಪ್ರದಾಯವನ್ನು ಪಾಲಿಸುವವರನ್ನು " ವೇಶ್ಯೆಯರ ಮಕ್ಕಳಾಗಿʼʼ ಇರಬೇಕಾಗುತ್ತದೆ ಎಂದು ಅವಹೇಳನಕರವಾಗಿ ನಿಂದಿಸಿದ್ದರು. ಡಿಎಂಕೆ ಭಾಗವಾಗಿರುವ ಇಂಡಿ ಒಕ್ಕೂಟದಲ್ಲಿ ಇರುವ ಪಕ್ಷಗಳ ಅಜೆಂಡಾ ಇದುವೆಯಾ ಎಂಬ ಪ್ರಶ್ನೆಗೆ ಇದು ಕಾರಣವಾಗಿದೆ.