ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayag Raj) ಮಹಾಕುಂಭ ಮೇಳ (Mahakumbh 2025) ನಡೆಯುತ್ತಿದೆ. ಜನವರಿ 16 ರಿಂದ ಫೆ. 26 ರ ವರೆಗೆ ಮಹಾಕುಂಭ ಮೇಳ ನಡೆಯಲಿದೆ. ಮಹಾಕುಂಭ ಮೇಳಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ತ್ರಿವೇಣಿಯಲ್ಲಿ ಪುಣ್ಯ ಸ್ನಾನ ಮಾಡಿ ಪಾವನರಾಗುತ್ತಿದ್ದಾರೆ. ಈ ವರೆಗೆ 41 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳಕ್ಕೆ 45 ಕೋಟಿ ಜನರು ಬರುವ ನಿರೀಕ್ಷೆ ಇದೆ ಎಂದು ಹೇಳಿತ್ತು. ಮೌನಿ ಅಮವಾಸ್ಯೆಯಂದೇ ನಾಲ್ಕು ಕೋಟಿಗೂ ಅಧಿಕ ಜನರು ತ್ರಿವೇಣಿಯಲ್ಲಿ ಮುಳುಗೆದ್ದಿದ್ದಾರೆ ಎಂದು ತಿಳಿದು ಬಂದಿದೆ.
ಫೆ. 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿಯಲ್ಲಿ ಪುಣ್ಯ ಸ್ನಾನವನ್ನು ಕೈಗೊಂಡಿದ್ದಾರೆ. ಮಹಾ ಕುಂಭಮೇಳವನ್ನು ಅವರು ಅವರು 'ಏಕತೆಯ ಮಹಾ ಯಜ್ಞ' ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತಮ್ಮ ಕುಟುಂಬದವರೊಂದಿಗೆ ಪ್ರಯಾಗರಾಜ್‌ಗೆ ಆಗಮಿಸಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಶನಿವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸಂಗಮವು ಗಂಗಾ ಮತ್ತು ಯಮುನಾ ಮಾತೆಯ ಆಶೀರ್ವಾದವನ್ನು ಹೊಂದಿದೆ ಮತ್ತು ಪ್ರಯಾಗ್ರಾಜ್ ಎಲ್ಲಾ ತೀರ್ಥಯಾತ್ರೆಗಳಲ್ಲಿ ಸರ್ವೋಚ್ಚ ಸ್ಥಳವಾಗಿದೆ. ಮಧ್ಯಪ್ರದೇಶದ ಜನರ ಯೋಗಕ್ಷೇಮಕ್ಕಾಗಿ, ವಿಶೇಷವಾಗಿ ಯುವಜನತೆ ಮತ್ತು ಸಮಾಜದ ಪ್ರತಿಯೊಂದು ವರ್ಗದವರಿಗಾಗಿ ನಾನು ಇಲ್ಲಿ ಪ್ರಾರ್ಥಿಸಿದೆ ಎಂದು ಯಾದವ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: PM Modi at Mahakumbh : ಮಹಾಕುಂಭ ಮೇಳದಲ್ಲಿ ಪ್ರಾಧಾನಿ ಮೋದಿ; ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ
ಮಾಜಿ ಕೇಂದ್ರ ಸಚಿವ ಮತ್ತು ಹಿಮಾಚಲ ಪ್ರದೇಶದ ಹಮೀರ್‌ಪುರದ ಲೋಕಸಭಾ ಸಂಸದ ಅನುರಾಗ್ ಠಾಕೂರ್ ಕೂಡ ತಮ್ಮ ಪತ್ನಿಯೊಂದಿಗೆ ಶನಿವಾರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಅಷ್ಟೇ ಅಲ್ಲದೆ ಹೇಮಾ ಮಾಲಿನಿ, ಅನುಪಮ್ ಖೇರ್, ಭಾಗ್ಯಶ್ರೀ ಮತ್ತು ಮಿಲಿಂದ್ ಸೋಮನ್ ಹಾಗೂ ಕವಿ ಕುಮಾರ್ ವಿಶ್ವಾಸ್, ಕ್ರಿಕೆಟಿಗ ಸುರೇಶ್ ರೈನಾ, ಕುಸ್ತಿಪಟು ಖಲಿ, ನೃತ್ಯ ಸಂಯೋಜಕ ರೆಮೊ ಡಿಸೋಜಾ ಸೇರಿದಂತೆ ಹಲವರು ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ.