ಮುಂಬೈ, ಜು. 11: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ 1990ರ ದಶಕದಲ್ಲಿ ಭೀತಿ ಹುಟ್ಟಿಸಿದ್ದ ಕುಖ್ಯಾತ ಡಾನ್ ಬಾಬಾ ಫರ್ಜಾನ್‌ಗೆ (Don Baba Farzan) ಸೇರಿದ ಐಷಾರಾಮಿ ಬಂಗಲೆಯ ಮೇಲೆ ಅಪರಾಧ ವಿಭಾಗದ ಪೊಲೀಸರು ಶನಿವಾರ (ಜುಲೈ 11) ಮುಂಜಾನೆ ಬೃಹತ್ ದಾಳಿ ನಡೆಸಿದ್ದಾರೆ. ಅನಾರೋಗ್ಯದಿಂದ ಡಾನ್ ಮೃತಪಟ್ಟ ಆರು ತಿಂಗಳ ಬಳಿಕ ನಡೆದಿರುವ ಈ ದಾಳಿಯಲ್ಲಿ ಕೊಠಡಿಗಳಲ್ಲಿ ಬಚ್ಚಿಡಲಾಗಿದ್ದ ಕೋಟ್ಯಂತರ ರುಪಾಯಿ ನಗದು, ಭಾರಿ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ದಾಳಿ ವೇಳೆ ಬಾಬಾ ಫರ್ಜಾನ್‌ನ ಎರಡನೇ ಪತ್ನಿ ಶೀಲಾ ಗಣಪತ್‌ರಾವ್ ಸಾಳ್ವೆ ಮನೆಯಲ್ಲಿದ್ದರು. ತನಿಖೆಯ ವೇಳೆ 5,26,29,560 ರುಪಾಯಿ ಅಕ್ರಮ ನಗದು ಪತ್ತೆಯಾಗಿದೆ. ಇದರಲ್ಲಿ 100 ಮತ್ತು 200 ರುಪಾಯಿ ಮುಖಬೆಲೆಯ ನೋಟುಗಳ ಜತೆಗೆ 50, 20 ಮತ್ತು 10 ರುಪಾಯಿ ಮುಖಬೆಲೆಯ ನೋಟುಗಳ ಸಣ್ಣ ಕಂತೆಗಳೂ ಇದ್ದವು. ಇಷ್ಟೊಂದು ಬೃಹತ್ ಮೊತ್ತದ ಹಣವನ್ನು ಎಣಿಸಲು ಪೊಲೀಸರು ಐದು ನೋಟು ಎಣಿಕೆ ಯಂತ್ರಗಳನ್ನು ತರಿಸಬೇಕಾಯಿತು.
ಮಾರಕಾಸ್ತ್ರ, ಆಭರಣಗಳ ಜಪ್ತಿ
ನಗದಿನ ಜತೆಗೆ ಬಂಗಲೆಯಲ್ಲಿ ಸುಮಾರು 5,50,000 ರುಪಾಯಿ ಮೌಲ್ಯದ ಭಾರಿ ಪ್ರಮಾಣದ ಆಯುಧಗಳು ಪತ್ತೆಯಾಗಿವೆ. ಇದರಲ್ಲಿ ಎರಡು ಪಿಸ್ತೂಲ್‌ಗಳು, ನಾಲ್ಕು ರೈಫಲ್‌ಗಳು, 12-ಬೋರ್ ರೈಫಲ್, ಎರಡು ಏರ್ ಗನ್‌ಗಳು, ಒಂದು ಕತ್ತಿ, ಮೂರು ಕಠಾರಿಗಳು, 17 ಬಗೆಯ ಚಾಕುಗಳು ಮತ್ತು 21 ಇತರ ಚೂಪಾದ ಆಯುಧಗಳು ಸೇರಿವೆ. ಆರಂಭಿಕ ತನಿಖೆಯಲ್ಲಿ ಕೆಲವು ರೈಫಲ್‌ಗಳು ಫರ್ಜಾನ್ ಹೆಸರಿನಲ್ಲೇ ಪರವಾನಗಿ ಹೊಂದಿದ್ದರೂ, ಮತ್ತೊಂದು ಪಿಸ್ತೂಲ್‌ಗೆ ಯಾವುದೇ ಕಾನೂನುಬದ್ಧ ದಾಖಲೆಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಇದರೊಂದಿಗೆ 21,34,350 ರುಪಾಯಿ ಮೌಲ್ಯದ ಚಿನ್ನಾಭರಣ, 8,09,248 ರುಪಾಯಿ ಮೌಲ್ಯದ ಬೆಳ್ಳಿ ಮತ್ತು 34,836 ರುಪಾಯಿ ಮೌಲ್ಯದ 45 ವಿದೇಶಿ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಪತ್ತೆಯಾಗಿರುವ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳು ಮತ್ತು ಬೇನಾಮಿ ಆಸ್ತಿಗಳ ದಾಖಲೆಗಳಿಂದ 1990ರ ದಶಕದ ಹಲವು ಬಗೆಹರಿಯದ ಅಪರಾಧ ಪ್ರಕರಣಗಳ ಸುಳಿವು ಸಿಗಬಹುದು ಎಂದು ಪೊಲೀಸರು ನಂಬಿದ್ದಾರೆ.
ಉಜ್ಬೇಕಿಸ್ತಾನದಲ್ಲಿ ಕೇರಳಂ ಮೂಲದ ವಿದ್ಯಾರ್ಥಿನಿಯ ಮತಾಂತರ ಯತ್ನ, ಕಿರುಕುಳ; ನರಳಿ ನರಳಿ ಪ್ರಾಣಬಿಟ್ಟ ಸಂತ್ರಸ್ತೆ
ಯಾರು ಈ ಬಾಬಾ ಫರ್ಜಾನ್?
ಮೂಲತಃ ರೋಹಿಲ್ಲಾ ಗಲ್ಲಿ ನಿವಾಸಿಯಾದ ಬಾಬಾ ಫರ್ಜಾನ್, 1980-90ರ ದಶಕದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ. ಆನಂತರ ಅಪರಾಧ ಜಗತ್ತಿಗೆ ಕಾಲಿಟ್ಟ ಈತ, 1990ರ ದಶಕದಲ್ಲಿ ಛತ್ರಪತಿ ಸಂಭಾಜಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನದೇ ಆದ ಭೂಗತ ಸಾಮ್ರಾಜ್ಯ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಿದ್ದ. ನಗರದ ಪ್ರಮುಖ ಭೂ ವಿವಾದಗಳು, ವಸೂಲಿ ಮತ್ತು ದೊಡ್ಡ ದಂಗೆಗಳ ಇತ್ಯರ್ಥದಲ್ಲಿ ಈತನ ಹೆಸರು ಕೇಳಿಬರುತ್ತಿತ್ತು.
ಈತನ ವಿರುದ್ಧ ದಂಗೆ, ಹಲ್ಲೆ, ಕೊಲೆ ಯತ್ನ ಮತ್ತು ಅಪಹರಣ ಸೇರಿ 4 ಅತ್ಯಂತ ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಹಾಗೂ ದೀರ್ಘಕಾಲದ ಅನಾರೋಗ್ಯದ ಕಾರಣ ಈತನ ಕ್ರಿಮಿನಲ್ ನೆಟ್‌ವರ್ಕ್ ಸಂಪೂರ್ಣವಾಗಿ ದುರ್ಬಲಗೊಂಡಿತ್ತು. ಸರಿಸುಮಾರು 6 ತಿಂಗಳ ಹಿಂದೆ ಈತ ಮೃತಪಟ್ಟಿದ್ದು, ಇದೀಗ ಆತನ ಅಕ್ರಮ ಆಸ್ತಿಯ ಜಾಲವನ್ನು ಭೇದಿಸಲು ಪೊಲೀಸರು ಈ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.