ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉದ್ಧವ್ ಬಣಕ್ಕೆ ಭಾರಿ ಶಾಕ್: ಏಕನಾಥ್ ಶಿಂದೆ ಪಾಳಯ ಸೇರಿದ 6 ಬಂಡಾಯ ಸಂಸದರು

Eknath Shinde: ಮಹಾರಾಷ್ಟ್ರದಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಆರು ಲೋಕಸಭಾ ಸಂಸದರು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅಗತ್ಯವಿದ್ದ ಮೂರನೇ ಎರಡರಷ್ಟು ಬೆಂಬಲವನ್ನು ಪಡೆದಿರುವ ಬಂಡಾಯ ಬಣವು ಶಿಂದೆ ಬಣದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಏಕನಾಥ್ ಶಿಂಧೆ (ಸಂಗ್ರಹ ಚಿತ್ರ)

ಮುಂಬೈ, ಜೂ. 22: ಮಹಾರಾಷ್ಟ್ರ (Maharashtra) ರಾಜಕಾರಣದಲ್ಲಿ ಮತ್ತೊಂದು ದೊಡ್ಡ ರಾಜಕೀಯ ದ್ರುವೀಕರಣ ನಡೆದಿದೆ. ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನಾ (Shiv Sena) ಬಣದ ಒಟ್ಟು ಒಂಬತ್ತು ಲೋಕಸಭಾ ಸಂಸದರ ಪೈಕಿ ಆರು ಮಂದಿ ಸಂಸದರು ಸೋಮವಾರ ಸಂಜೆ ಮುಂಬೈಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಅಧಿಕೃತ ಶಿವಸೇನಾ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಭಾರಿ ರಾಜಕೀಯ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಬಂಡಾಯ ಎದ್ದಿರುವ ಸಂಸದರನ್ನು ಓಂರಾಜೇ ನಿಂಬಾಳ್ಕರ್ (ಧಾರಾಶಿವ್), ಸಂಜಯ್ ದಿನಾ ಪಾಟೀಲ್ (ಮುಂಬೈ ಈಶಾನ್ಯ), ಸಂಜಯ್ ಜಾಧವ್ (ಪರಭಣಿ), ಸಂಜಯ್ ದೇಶ್‌ಮುಖ್ (ಯವತ್ಮಾಲ್-ವಾಶಿಮ್), ನಾಗೇಶ್ ಪಾಟೀಲ್ ಅಷ್ಟಿಕರ್ (ಹಿಂಗೋಲಿ) ಮತ್ತು ಭೌಸಾಹೇಬ್ ವಾಕಚೌರೆ (ಶಿರಡಿ) ಎಂದು ಗುರುತಿಸಲಾಗಿದೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಲು ಕನಿಷ್ಠ ಮೂರನೇ ಎರಡರಷ್ಟು (2/3) ಅಂದರೆ 6 ಸಂಸದರ ಬೆಂಬಲ ಅಗತ್ಯವಾಗಿದ್ದು, ಬಂಡಾಯ ಬಣವು ಈ ಸಂಖ್ಯೆಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಲಖನೌ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಅಗ್ನಿ ದುರಂತ: 14 ಮಂದಿ ಸಾವು

"ಆರು ಸಿಂಹಗಳು ಈಗ ನಮ್ಮೊಂದಿಗೆ ಬಂದಿವೆ. ಅವರೆಲ್ಲರನ್ನೂ ಅಸಲಿ ಶಿವಸೇನಾ ಕುಟುಂಬಕ್ಕೆ ಸ್ವಾಗತಿಸುತ್ತೇನೆ" ಎಂದು ಏಕನಾಥ್ ಶಿಂದೆ ಹೇಳಿದ್ದಾರೆ. ಈ ಕಾರ್ಯಾಚರಣೆಗೆ "ಆಪರೇಷನ್ ಟೈಗರ್" ಎಂದು ಕೋಡ್ ವರ್ಡ್ ಇಡಲಾಗಿತ್ತು. "ನಾಲ್ಕು ವರ್ಷಗಳ ಹಿಂದೆ 2022ರ ಜೂನ್ 22ರಂದು ನಾವು 40 ಶಾಸಕರೊಂದಿಗೆ ಶಿವಸೇನೆಯಲ್ಲಿ ಬಂಡಾಯವೆದ್ದಿದ್ದೆವು. ಜೂನ್ 22ರಂದೇ ನಾವು ಬೌಂಡರಿ ಬಾರಿಸಿಲ್ಲ, ಬದಲಿಗೆ ಸಿಕ್ಸರ್ ಬಾರಿಸಿದ್ದೇವೆ" ಎಂದು ಶಿಂದೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಉದ್ಧವ್ ಬಣದ ಸಂಜಯ್ ರಾವತ್ ವಿರುದ್ಧ ತಿರುಗೇಟು ನೀಡಿದ ಅವರು, "ನಮ್ಮೊಂದಿಗೆ ಮೂವರು ಸಂಜಯ್‌ಗಳು ಇರುವಾಗ ಬೇರೆ ಯಾವುದೇ ಸಂಜಯ್ ನಮಗೆ ಲೆಕ್ಕಕ್ಕಿಲ್ಲ" ಎಂದಿದ್ದಾರೆ. ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗದಿರುವುದೇ ಪಕ್ಷ ಬದಲಾವಣೆಗೆ ಮುಖ್ಯ ಕಾರಣ ಎಂದು ಬಂಡಾಯ ಸಂಸದರು ತಿಳಿಸಿದ್ದಾರೆ. ಈ ಸೇರ್ಪಡೆಯೊಂದಿಗೆ ಶಿವಸೇನೆಯು ಮಹಾರಾಷ್ಟ್ರದ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಮತ್ತೊಂದೆಡೆ, ಉದ್ಧವ್ ಬಣದ ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಏಕನಾಥ್ ಶಿಂದೆ ಆರು ಜನ ದ್ರೋಹಿಗಳಿಗೆ ಜನ್ಮ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಿಜೇರಿಯನ್ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ" ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಧವ್ ಠಾಕ್ರೆ ಜೂನ್ 27ರಿಂದ ಬಂಡಾಯ ಸಂಸದರ ಕ್ಷೇತ್ರಗಳೂ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಜನಾಂದೋಲನ ಪ್ರಚಾರ ಪ್ರವಾಸ ಕೈಗೊಳ್ಳಲಿದ್ದಾರೆ.