ದೆಹಲಿ, ಅ. 18: ಸಂಸತ್ ಸಮೀಪವಿರುವ ಸಂಸದರ ವಸತಿ ಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದೆ (Fire Accident). ಸದ್ಯ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ದೆಹಲಿಯ ಬಿ.ಡಿ. ಮಾರ್ಗದಲ್ಲಿರುವ ಬಹುಮಹಡಿ ಕಟ್ಟಡ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ (ಅ. 18) ಭಾರಿ ಬೆಂಕಿ ಅವಘಡ ಸಂಭವಿಸಿದೆ. 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ ಈ ಕಟ್ಟಡದಲ್ಲಿ ಹಲವು ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ವಾಸಿಸುತ್ತಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಸಂಕೀರ್ಣದ ಮೇಲಿನ ಮಹಡಿಗಳಲ್ಲಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಭೀತಿಯ ವಾತಾವರಣ ಮೂಡಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಸಂಸತ್ತಿನಿಂದ ಕೇವಲ 200 ಮೀಟರ್ ದೂರದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್ ಸಂಸತ್ ಸದಸ್ಯರಿಗೆ ಹಂಚಿಕೆಯಾದ ಅಧಿಕೃತ ನಿವಾಸಗಳಲ್ಲಿ ಒಂದು.
ಸದ್ಯ ಸ್ಥಳಕ್ಕೆ 6 ಅಗ್ನಿ ಶಾಮಕ ದಳದ ವಾಹನ ಧಾವಿಸಿವೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ʼʼಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಯಾರಿಗೂ ಗಾಯವಾಗಿಲ್ಲʼʼ ಎಂದು ವಿವರಿಸಿದ್ದಾರೆ.
ಸಂಸದರ ವಸತಿ ಗೃಹದಲ್ಲಿ ಕಾಣಿಸಿಕೊಂಡ ಬೆಂಕಿ:
ಈ ಸುದ್ದಿಯನ್ನೂ ಓದಿ: Fire Accident: ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ, ರೋಗಿಗಳು ಪಾರು
ಅಸಮಾಧಾನ ವ್ಯಕ್ತಪಡಿಸಿದ್ದ ಸಾಕೇತ್ ಗೋಖಲೆ
ಆರಂಭದಲ್ಲೇ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರು. "ದೆಹಲಿಯ ಬಿ.ಡಿ. ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಈ ಕಟ್ಟಡದಲ್ಲಿರುವವರೆಲ್ಲ ರಾಜ್ಯಸಭಾ ಸದಸ್ಯರು. ಕಟ್ಟಡವು ಸಂಸತ್ತಿನಿಂದ ಸುಮಾರು 200 ಮೀಟರ್ ದೂರದಲ್ಲಿದೆ. 30 ನಿಮಿಷಗಳಿಂದಲೂ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದಿಲ್ಲ. ಬೆಂಕಿ ಇನ್ನೂ ಉರಿಯುತ್ತಿದೆ. ಪದೇ ಪದೆ ಕರೆ ನೀಡಿದರೂ ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿಲ್ಲ" ಎಂದು ಬರೆದುಕೊಂಡಿದ್ದಾರೆ.
ಸದ್ಯ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಘಟನೆ ತನಿಖೆ ನಡೆಸಲು ಅಧಿಕಾರಿಗಳು ಸೂಚಿಸಿದ್ದಾರೆ.