Malabar Gold: ಪಾಕಿಸ್ತಾನ ಇನ್‌ಫ್ಲುವೆನ್ಸರ್ ಜೊತೆ ನಂಟು; ಮಲಬಾರ್ ಗೋಲ್ಡ್‌ಗೆ ಬಾಯ್ಕಾಟ್ ಬಿಸಿ
Malabar Gold faces boycott: ಸೋಶಿಯಲ್ ಮೀಡಿಯಾ ಮೂಲಕ ಆಲಿಷ್ಬಾ ಖಾಲೀದ್ ದೇಶ ವಿದೇಶಗಳಲ್ಲಿ ಮಲಬಾರ್ ಗೋಲ್ಡ್ ಪ್ರಚಾರ ಮಾಡಲಿದ್ದಾರೆ. ಇದು ಅನೇಕ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಅಲಿಷ್ಬಾ ಕೇವಲ ಪಾಕಿಸ್ತಾನಿ ಎಂಬ ಕಾರಣಕ್ಕೆ ಬಹಿಷ್ಕಾರದ ಕೂಗು ಕೇಳಿಬರುತ್ತಿಲ್ಲ. ಬದಲಾಗಿದೆ. ಇದರ ಹಿಂದಿನ ಕಾರಣ ಅತ್ಯಂತ ಬಲವಾಗಿದೆ.

-

ನವದೆಹಲಿ: ಭಾರತದ ಜನಪ್ರಿಯ ಚಿನ್ನದ ಮಳಿಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್‌ಗೆ(Malabar Gold) ದೇಶಾದ್ಯಂತ ಬಾಯ್ಕಾಟ್ ಬಿಸಿ ಜೋರಾಗಿ ತಟ್ಟಿದೆ. ಲಂಡನ್ ಮೂಲದ ಪಾಕಿಸ್ತಾನಿ ಇನ್‌ಸ್ಟಾಗ್ರಾಮ್ ಪ್ರಭಾವಿ ಅಲಿಷ್ಬಾ ಖಾಲಿದ್ ಜೊತೆಗೆ ಕೊಲಾಬರೇಶನ್ ಮಾಡಿಕೊಂಡಿರುವುದು ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು, ಮಲಬಾರ್ ಗೋಲ್ಡ್ & ಡೈಮಂಡ್ಸ್ ಅನ್ನು ಬಹಿಷ್ಕರಿಸಬೇಕೆಂದು ಕೂಗು ಕೇಳಿ ಬಂದಿದೆ. ಸೋಶಿಯಲ್ ಮೀಡಿಯಾ ಮೂಲಕ ಆಲಿಷ್ಬಾ ಖಾಲೀದ್ ದೇಶ ವಿದೇಶಗಳಲ್ಲಿ ಮಲಬಾರ್ ಗೋಲ್ಡ್ ಪ್ರಚಾರ ಮಾಡಲಿದ್ದಾರೆ. ಇದು ಅನೇಕ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಅಲಿಷ್ಬಾ ಕೇವಲ ಪಾಕಿಸ್ತಾನಿ ಎಂಬ ಕಾರಣಕ್ಕೆ ಬಹಿಷ್ಕಾರದ ಕೂಗು ಕೇಳಿಬರುತ್ತಿಲ್ಲ. ಬದಲಾಗಿದೆ. ಇದರ ಹಿಂದಿನ ಕಾರಣ ಅತ್ಯಂತ ಬಲವಾಗಿದೆ. ಅದೇನೆಂಬುವುದನ್ನು ನೋಡೋಣ ಬನ್ನಿ.
ಭಾರತದ ವಿರುದ್ಧವೇ ಅವಹೇಳನಕಾರಿ ಹೇಳಿಕೆ ನೀಡಿದ್ದ ಅಲಿಷ್ಬಾ
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಅಲಿಷ್ಬಾ ಕೆಲವು ತಿಂಗಳ ಹಿಂದೆ ಭಾರತದ ವಿರುದ್ಧವೇ ಅವಹೇಳನಕಾರಿ ಹೇಳಿಕೆ ನೀಡಿದ್ದಳು. ಪಹಲ್ಗಾಂ ದಾಳಿ ನಂತರ ಭಾರತ ನಡೆಸಿದ ಆಪರೇಷನ್ ಸಿಂದೂರ್ ಅನ್ನು ಕಟುವಾಗಿ ಟೀಕಿಸಿದ್ದ. ಈಕೆ ಭಾರತದ ವಿರುದ್ಧ ಬಹಳ ಲಘುವಾಗಿ ಹೇಳಿಕೆ ಕೊಟ್ಟಿದ್ದಳು. ಪಹಲ್ಗಾಂ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಸಾಬೀತುಪಡಿಸುವಲ್ಲಿ ಭಾರತ ವಿಫಲವಾಗಿದೆ. ಆದರೂ ರಾತ್ರೋರಾತ್ರಿ ಪಾಕ್ ಮೇಲೆ ದಾಳಿ ನಡೆಸಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳುವ ಭಾರತದ ಅಸಲಿಯತ್ತು ಬಯಲಾಗಿದೆ. ಅದೂ ಅಲ್ಲದೇ ಆಪರೇಷನ್ ಸಿಂದೂರ್ ಭಾರತದ ಹೇಡಿತನದ ಕೃತ್ಯ ಎಂದು ಕರೆದಿದ್ದಳು. ಭಾರತೀಯರ ಭಾರಿ ವಿರೋಧದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Boycott Turkey: ಭಾರತದಲ್ಲಿ ಜೋರಾಯ್ತು ಬಾಯ್ಕಾಟ್ ಟರ್ಕಿ ಅಭಿಯಾನ; ಪಾಕಿಸ್ತಾನಕ್ಕೆ ನೆರವಿನ ಹಸ್ತ ಚಾಚಿ ಬಲವಾದ ಹೊಡೆತ ತಿಂದ ಮುಸ್ಲಿಂ ರಾಷ್ಟ್ರ
ಮಲಬಾರ್ ವಿರುದ್ಧ ಗ್ರಾಹಕರ ಆಕ್ರೋಶ
ಇನ್ನು ಇದೇ ಅಲಿಷ್ಬಾಳ ಜೊತೆಗೂಡಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಕೊಲಾಬರೇಷನ್ ಮಾಡಿಕೊಂಡಿದೆ. ಕಂಪನಿಯು ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಹೊಸ ಶೋರೂಮ್ ಅನ್ನು ಉದ್ಘಾಟಿಸಿತು. ಬಾಲಿವುಡ್ ನಟಿ ಕರೀನಾ ಕಪೂರ್ ಮುಖ್ಯ ಅತಿಥಿಯಾಗಿ ಹಾಜರಿದ್ದರು. ಈ ಕಾರ್ಯಕ್ರಮಕ್ಕೆ ಬ್ರ್ಯಾಂಡ್ ಪ್ರವರ್ತಕರಾಗಿ ಅಲಿಷ್ಬಾ ಖಾಲಿದ್ ಅವರನ್ನು ಸಹ ಆಹ್ವಾನಿಸಲಾಗಿತ್ತು. ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಅವರು ಕರೀನಾ ಕಪೂರ್ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಸೆಪ್ಟೆಂಬರ್ 10 ರಂದು ಸಾಮಾಜಿಕ ಮಾಧ್ಯಮ ಬಳಕೆದಾರ ವಿಜಯ್ ಪಟೇಲ್ ಇದನ್ನು ಹೈಲೈಟ್ ಮಾಡಿದರು, ಮಲಬಾರ್ ಗೋಲ್ಡ್ ಭಾರತ ವಿರೋಧಿ ನಿಲುವು ಹೊಂದಿರುವ ಪಾಕಿಸ್ತಾನಿ ಪ್ರಭಾವಿಗಳೊಂದಿಗೆ ನಂಟು ಹೊಂದಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿತ್ತು.
ಮಲಬಾರ್ ಗೋಲ್ಡ್‌ನಿಂದ ಸ್ಪಷ್ಟನೆ
ಇನ್ನು ಈ ಬಗ್ಗೆ ಮಲಬಾರ್ ಗೋಲ್ಡ್ ಸ್ಪಷ್ಟನೆ ನೀಡಿದ್ದು, ಇಂಗ್ಲೆಂಡ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಪಹಲ್ಗಾಂ ದಾಳಿಗೂ ಮುನ್ನವೇ ನಿರ್ಧರಿಸಲಾಗಿತ್ತು.ಕಂಪನಿಗೆ ಆಕೆಯ ಭಾರತ ವಿರೋಧಿ ದೃಷ್ಟಿಕೋನಗಳು ಮತ್ತು ಹೇಳಿಕೆಗಳ ಬಗ್ಗೆ "ಯಾವುದೇ ಜ್ಞಾನವಿಲ್ಲ" ಮತ್ತು ಕೇವಲ ಪ್ರಚಾರದ ಉದ್ದೇಶಗಳಿಗಾಗಿ ಮಾತ್ರ ಆಕೆಯನ್ನು ಸದ್ಭಾವನೆಯಿಂದ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದೆ.