ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುಜರಾತ್‌ ಜನರು ಅನಕ್ಷರಸ್ಥರು ಎಂಬ ಹೇಳಿಕೆಗೆ ಕೊನೆಗೂ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ

Mallikarjun Kharge apologizes: ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗುಜರಾತ್ ಜನರ ವಿರುದ್ಧ ನೀಡಿದ ಇತ್ತೀಚಿನ ಹೇಳಿಕೆಗಳಿಗೆ ಕ್ಷಮೆಯಾಚಿಸಿದರು. ಎಂದಿಗೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ನೀಡಿದ ಹೇಳಿಕೆಯಿಂದ ಉಂಟಾದ ರಾಜಕೀಯ ವಿವಾದದ ಮಧ್ಯೆ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿದರು.

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)

ನವದೆಹಲಿ, ಏ. 8: ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗುಜರಾತ್ ಜನರ ವಿರುದ್ಧ ನೀಡಿದ್ದ ಇತ್ತೀಚಿನ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ. ಎಂದಿಗೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಖರ್ಗೆ, ʼʼಕೇರಳದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಭಾಷಣದಲ್ಲಿ ನನ್ನ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಹಾಗಿದ್ದರೂ, ನಾನು ನನ್ನ ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ನಾನು ಯಾವಾಗಲೂ ಗೌರವಿಸುವ ಮತ್ತು ಮುಂದೆಯೂ ಅತ್ಯುನ್ನತ ಗೌರವವನ್ನು ಹೊಂದಿರುವ ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲʼʼ ಎಂದು ತಿಳಿಸಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ನೀಡಿದ ಹೇಳಿಕೆಯಿಂದ ಉಂಟಾದ ರಾಜಕೀಯ ವಿವಾದದ ಮಧ್ಯೆ ಅವರು ಕ್ಷಮೆಯಾಚಿಸಿದ್ದಾರೆ.

ಇಲ್ಲಿದೆ ಪೋಸ್ಟ್:





ಕೇರಳ ವಿಧಾನಸಭಾ ಚುನಾವಣೆ ಪ್ರಯುಕ್ತ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ʼʼಕೇರಳದ ಜನರು ವಿದ್ಯಾವಂತರು ಮತ್ತು ಬುದ್ಧಿವಂತರು. ಗುಜರಾತ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ಅನಕ್ಷರಸ್ಥರು ಆಗಿರುವವರಂತೆ ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿ, ಈ ಹೇಳಿಕೆ ಅವಮಾನದಿಂದ ಕೂಡಿತ್ತು. ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು. ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಟೀಕಿಸಿ, ಭಾರಿ ವಿರೋಧ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಜತೆಗಿನದ್ದು 'ಬಲವಂತದ ಮದುವೆ'; ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ದೇವೇಗೌಡ ತಿರುಗೇಟು

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಈ ಹೇಳಿಕೆಗಳನ್ನು ಒಪ್ಪುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಅವರು ಕೇಳಿದರು. ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಉಳಿಯಲು ಅರ್ಹರೇ ಎಂದು ಪ್ರಶ್ನಿಸಿದ ಪ್ರಸಾದ್, ಐತಿಹಾಸಿಕವಾಗಿ ಜವಾಹರಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ನಾಯಕರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ನಾಯಕತ್ವವು ಈ ಹೇಳಿಕೆಯಿಂದ ದೂರವಿರಬೇಕು ಎಂದು ಒತ್ತಾಯಿಸಿದರು.

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ರಾಜಕೀಯ ಭಾಷಣಗಳು ಹದಗೆಡಬಾರದು ಮತ್ತು ಸಾರ್ವಜನಿಕ ಚರ್ಚೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಖರ್ಗೆ ಅವರ ಹೇಳಿಕೆಗಳನ್ನು ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ತೀವ್ರವಾಗಿ ಟೀಕಿಸಿದರು. ಇದು ರಾಜ್ಯದ ಜನರಿಗೆ ಮತ್ತು ಅದರ ಪರಂಪರೆಗೆ ಮಾಡಿದ ಅವಮಾನ ಎಂದು ಕರೆದರು. ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ನಾಯಕರನ್ನು ನೀಡಿದ ಗುಜರಾತ್, ಅಂತಹ ಹೇಳಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.