ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಗೀತ ಕಾನ್ಸರ್ಟ್‌ ವೇಳೆ ದುರಂತ; ಅತಿಯಾಗಿ ಮದ್ಯ ಸೇವಿಸಿ ವ್ಯಕ್ತಿ ಸಾವು, ಮಹಿಳೆಗೆ ಗಾಯ

Music Event Tragedy: ಲೈವ್‌ ಕಾನ್ಸರ್ಟ್‌ನಲ್ಲಿ ಅತಿಯಾಗಿ ಮದ್ಯ ಸೇವಿಸಿದ ನಂತರ ವ್ಯಕ್ತಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈಯ ವರ್ಲಿ ಪ್ರದೇಶದಲ್ಲಿ ನಡೆದಿದೆ. ಮಾಹಿಮ್ ನಿವಾಸಿ 28 ವರ್ಷದ ವೃಷಭ್ ಗಂಗುರ್ಡೆ ಮತ್ತು ಆತನ ಸ್ನೇಹಿತೆ ವಿಪರೀತ ಮದ್ಯ ಸೇವಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಮುಂಬೈ, ಜೂ. 7: ಸಂಗೀತ ಕಾರ್ಯಕ್ರಮದಲ್ಲಿ ಅತಿಯಾಗಿ ಮದ್ಯ ಸೇವಿಸಿದ ನಂತರ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈಯ (Mumbai) ವರ್ಲಿ ಪ್ರದೇಶದಲ್ಲಿ ನಡೆದಿದೆ. ಆತನ ಸ್ನೇಹಿತೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಶನಿವಾರ (ಜೂನ್‌ 6) ತಡರಾತ್ರಿ ಎನ್‌ಎಸ್‌ಸಿಐ ಡೋಮ್ ವರ್ಲಿಯಲ್ಲಿ ನಡೆದ ಕ್ಲಾಂಗ್‌ಕುಯೆನ್‌ಸ್ಟ್ಲರ್ ಆಲ್ ನೈಟ್ ಲಾಂಗ್ ಸಂಗೀತ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು (Music Event Tragedy).

ಮಾಹಿಮ್ ನಿವಾಸಿ 28 ವರ್ಷದ ವೃಷಭ್ ಗಂಗುರ್ಡೆ ಮತ್ತು ಆತನ ಸ್ನೇಹಿತೆ ವಿಪರೀತ ಮದ್ಯ ಸೇವಿಸಿದ್ದರು ಎಂದು ಮೂಲಗಳು ತಿಳಿಸಿವೆ. ಜನಜಂಗುಳಿಯಿಂದ ಕೂಡಿದ್ದ ಸ್ಥಳದಲ್ಲಿ ಅವರು ಅಸ್ವಸ್ಥರಾದಂತೆ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ತಲುಪುವ ಹೊತ್ತಿಗೆ ಗಂಗುರ್ಡೆ ಮೃತಪಟ್ಟಿದ್ದರು. ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಆರೈಕೆಗಾಗಿ ಜಸ್ಲೋಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ. ತಾನು ಆಲ್ಕೋಹಾಲ್ ಮತ್ತು ಎನರ್ಜಿ ಡ್ರಿಂಕ್ಸ್ ಮಾತ್ರ ಸೇವಿಸಿದ್ದೇನೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ಲಂಬರ್ ಖಾತೆಗೆ ಏಕಾಏಕಿ 294 ಕೋಟಿ ರು. ಜಮೆ; ಬ್ಯಾಂಕ್‌ ಬ್ಯಾಲೆನ್ಸ್ ನೋಡಿ ಬೆಚ್ಚಿಬಿದ್ದ ಯುವಕ

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೊಲೀಸರು ಸದ್ಯಕ್ಕೆ ಮಾದಕ ದ್ರವ್ಯ ಸೇವಿಸಿರಬಹುದು ಎಂಬ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಸದ್ಯ ಗಂಗುರ್ಡೆ ಸಾವಿನ ತನಿಖೆ ಮುಂದುವರಿದಿದ್ದು, ಸ್ಥಳದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯು ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎನ್ನುವುದನ್ನು ಸೂಚಿಸಿದೆ. ಆದರೆ ಪೊಲೀಸರು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಿಗಾಗಿ ಕಾಯುತ್ತಿದ್ದಾರೆ.

ಗೋರೆಗಾಂವ್‌ನ ನೆಸ್ಕೋ ಕೇಂದ್ರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಅತಿಯಾದ ಮಾದಕ ದ್ರವ್ಯ ಸೇವನೆಯಿಂದ ಮೃತಪಟ್ಟ ನಂತರ ಇದು ಎರಡನೇ ಘಟನೆಯಾಗಿದೆ. ಗೋರೆಗಾಂವ್ ದುರಂತ ಮತ್ತು ಭದ್ರತೆ ಹಾಗೂ ಜನಸಂದಣಿ ನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಸ್ಥಳೀಯ ಪೊಲೀಸರು ಆರಂಭದಲ್ಲಿ ವರ್ಲಿ ಸಂಗೀತ ಕಛೇರಿಗೆ ಅನುಮತಿ ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಸ್ಥಳೀಯ ಪೊಲೀಸರ ಆಕ್ಷೇಪಣೆಗಳ ಹೊರತಾಗಿಯೂ ಹಿರಿಯ ಅಧಿಕಾರಿಗಳು ನಂತರ ಅನುಮತಿ ನೀಡಿದರು ಎನ್ನಲಾಗಿದೆ.

ಸಂಗೀತ ಕಛೇರಿ ಸ್ಥಳದಲ್ಲಿ ನಾಲ್ಕು ಮದ್ಯದಂಗಡಿಗಳಿದ್ದವು. ಅವೆಲ್ಲವನ್ನೂ ಅಬಕಾರಿ ಇಲಾಖೆ ಅನುಮೋದಿಸಿದೆ. ಸಂಗೀತ ಕಛೇರಿ ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯಿತು. ಪ್ರತಿ ಟಿಕೆಟ್‌ನ ಬೆಲೆ 4,000 ರುಪಾಯಿ ಅದು ಸಮಯಕ್ಕೆ ಕೊನೆಗೊಂಡಿತು. ಸಂಗೀತ ಕಛೇರಿಗೆ ಮದ್ಯ ಪೂರೈಸುವ ಪರವಾನಗಿಗಳು ಮತ್ತು ಇತರ ಅಗತ್ಯ ಪರವಾನಗಿಗಳನ್ನು ಈಗ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಪೊಲೀಸರು ಈ ಸಂಬಂಧ ಆಕಸ್ಮಿಕ ಸಾವು ವರದಿ ದಾಖಲಿಸಿಕೊಂಡಿದ್ದು, ಆಯೋಜಕರನ್ನು ಒಳಗೊಂಡಂತೆ ಕನಿಷ್ಠ ಎಂಟು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಟಿಕೆಟ್‌ಗಳ ಅಕ್ರಮ ಕಾಳಬಜಾರಿ ನಡೆದಿರುವ ಸಾಧ್ಯತೆಯನ್ನು ಪರಿಶೀಲಿಸುವ ಸಲುವಾಗಿ ಆಯೋಜಕರ ಬ್ಯಾಂಕ್ ಖಾತೆಗಳನ್ನೂ ತನಿಖೆಗೆ ಒಳಪಡಿಸಲಾಗಿದೆ. ಸ್ಥಳದಲ್ಲಿ ನಿಯೋಜಿಸಲಾದ ಖಾಸಗಿ ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.