ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಇಂದ್ರ ದೇವನ ವಿರುದ್ಧವೇ ದೂರು ನೀಡಿದ ಭೂಪ

Man, Files Complaint Against Indra: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಮಳೆ ದೇವರಾದ ಇಂದ್ರನ ವಿರುದ್ಧವೇ ದೂರು ದಾಖಲಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೂರಜ್ ತಿವಾರಿ ಎನ್ನುವವರು ತಮ್ಮ ದೂರಿನಲ್ಲಿ ಜಿಲ್ಲೆಯಲ್ಲಿ ಇಂದ್ರದೇವ ಹಲವು ಗಂಟೆಗಳ ಕಾಲ ಅತಿಯಾದ ಮಳೆಯನ್ನು ಸುರಿಯುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶಲ್ಲಿ ಸುರಿದ ಭಾರಿ ಮಳೆ

ಲಖನೌ, ಸೆ. 28: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Heavy Rains), ಮಳೆ ದೇವರಾದ ಇಂದ್ರನ ವಿರುದ್ಧವೇ ದೂರು ದಾಖಲಾದ ವಿಚಿತ್ರ ಘಟನೆ ಉತ್ತರ ಪ್ರದೇಶ (Uttar Pradesh) ದಲ್ಲಿ ನಡೆದಿದೆ. ಹರ್ದೋಯಿ ಜಿಲ್ಲೆಯ ನಿವಾಸಿ ಸೂರಜ್ ತಿವಾರಿ, ರಾಜ್ಯದ ಸಾರ್ವಜನಿಕ ಕುಂದುಕೊರತೆ ಪರಿಹಾರ ಪೋರ್ಟಲ್‌ನಲ್ಲಿ ಹಿಂದೂ ದೇವರಾದ ಇಂದ್ರನ ವಿರುದ್ಧ ದೂರು ಸಲ್ಲಿಸಿದ್ದಾರೆ. ಮಳೆ ಸುರಿಯುವುದನ್ನು ನಿಯಂತ್ರಿಸಲು ಅಧಿಕಾರಿಗಳು ತಮ್ಮ ದೈವಿಕ ಸಂವಹನದ ಮಾರ್ಗಗಳನ್ನು ಬಳಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ತಿವಾರಿ ತಮ್ಮ ದೂರಿನಲ್ಲಿ, ಜಿಲ್ಲೆಯಲ್ಲಿ ಇಂದ್ರದೇವ ಹಲವು ಗಂಟೆಗಳ ಕಾಲ ಅತಿಯಾದ ಮಳೆಯನ್ನು ಸುರಿಯುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದ ಸಂದರ್ಭದಲ್ಲಿ, ಅವರು ಸೆಪ್ಟೆಂಬರ್ 26ರಂದು ಈ ದೂರನ್ನು ಸಲ್ಲಿಸಿದ್ದರು.

ಕೆಲವೊಮ್ಮೆ ಭಾರಿ ಮತ್ತು ಕೆಲವೊಮ್ಮೆ ನಿಧಾನಗತಿಯ ಮಳೆಯು ಸಾಮಾನ್ಯ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತಿದೆ. ಯಾವುದೇ ಪೂರ್ವ ಮಾಹಿತಿಯಿಲ್ಲದೆ ಇಂದ್ರದೇವ ನಿರಂತರವಾಗಿ ಮಳೆಯನ್ನು ತರುತ್ತಿದ್ದು, ಸಾರ್ವಜನಿಕರನ್ನು ಅನಗತ್ಯ ತೊಂದರೆಗೆ ಸಿಲುಕಿಸುತ್ತಿದ್ದಾರೆ ಎಂದು ತಿವಾರಿ ಆಡಳಿತಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನೇಪಾಳದಲ್ಲಿ ಮತ್ತೆ ಮಳೆ ಆರ್ಭಟ: ಹೆಚ್ಚಾದ ಪ್ರವಾಹ, ಭೂಕುಸಿತದ ಭೀತಿ

ರಸ್ತೆಗಳು, ಲೇನ್‌ಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತಮ್ಮ ಮನೆಗಳಿಂದ ಹೊರಬರಲು ಕಷ್ಟಪಡುತ್ತಿದ್ದಾರೆ. ಇದು ಅವರ ದೈನಂದಿನ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. ಬೆಳೆ ಹಾನಿಯ ಬಗ್ಗೆ ರೈತರಲ್ಲಿ ಕಳವಳ ಉಂಟಾಗಿದೆ ಎಂದ ತಿವಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಈ ದೂರು ಸಲ್ಲಿಸಿದ್ದಾರೆ.

“ಇಂದ್ರ ದೇವರ ಮೊಬೈಲ್ ನಂಬರ್ ನನಗೆ ಗೊತ್ತಿಲ್ಲ. ಆದ್ದರಿಂದ, ಜಿಲ್ಲಾಧಿಕಾರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ದೈವಿಕ ಸಂವಹನದ ಮಾರ್ಗಗಳ ಮೂಲಕ ಇಂದ್ರ ದೇವರಿಗೆ ಅಗತ್ಯ ಸೂಚನೆಗಳನ್ನು ನೀಡಿ, ಮಳೆಯನ್ನು ತಕ್ಷಣ ನಿಯಂತ್ರಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಜಿಲ್ಲೆಯ ಜನರಿಗೆ ಪರಿಹಾರ ಸಿಗುತ್ತದೆʼʼ ಎಂದು ಅವರು ಹೇಳಿದ್ದಾರೆ.

ಈ ವಿಚಿತ್ರ ದೂರಿನ ಹಿಂದೆ ಗಂಭೀರ ಹವಾಮಾನ ಪರಿಸ್ಥಿತಿ ಇದೆ. ಸೆಪ್ಟೆಂಬರ್ 25ರ ಬೆಳಗ್ಗೆಯಿಂದ ಸೆಪ್ಟೆಂಬರ್ 27ರ ಬೆಳಗ್ಗೆಯವರೆಗೆ 48 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ 97.6 ಮಿ.ಮೀ. ಮಳೆಯಾಗಿದೆ. ಆದರೆ ಈ ಅವಧಿಯ ಸಂಚಿತ ಸರಾಸರಿ ಮಳೆ ಪ್ರಮಾಣ ಕೇವಲ 4.5 ಮಿ.ಮೀ. ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳಂನಲ್ಲಿ ಮತ್ತೆ ಭಾರಿ ಮಳೆ: ಭೂಕುಸಿತ, ಪ್ರವಾಹದಿಂದ 5 ಮಂದಿ ಸಾವು

ಈ ಅವಧಿಯಲ್ಲಿ ರಾಜ್ಯಾದ್ಯಂತ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ 56 ಮಂದಿ ಮೃತಪಟ್ಟಿದ್ದು, 46 ಮಂದಿ ಗಾಯಗೊಂಡಿದ್ದಾರೆ. ಮಳೆ ಸಂಬಂಧಿತ ಘಟನೆಗಳಲ್ಲಿ 1,020ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 107 ಪ್ರಾಣಿಗಳು ಮೃತಪಟ್ಟಿವೆ ಎಂದು ಪರಿಹಾರ ಆಯುಕ್ತ ಹೃಷಿಕೇಶ್ ಭಾಸ್ಕರ್ ಯಶೋದ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 56 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯಶೋದ್ ಹೇಳಿದ್ದಾರೆ. 48 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದೀಗ ಸ್ವಲ್ಪಮಟ್ಟಿಗೆ ತಗ್ಗಿದೆ. ಸದ್ಯ ಇದು ಮುಖ್ಯವಾಗಿ ಟೆರೈ ಪ್ರದೇಶಕ್ಕೆ ಸೀಮಿತವಾಗಿದ್ದು, ಈ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.