ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ವ್ಯಕ್ತಿಯನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆ; ಭೀಕರ ಕೊಲೆಯ ವಿಡಿಯೊ ವೈರಲ್

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಮುಂದುವರಿದಿರುವ ಜಾತಿ ಆಧಾರಿತ ಹಿಂಸಾಚಾರದ ನಡುವೆ, ಮೈತೈ ಸಮುದಾಯದ 38 ವರ್ಷದ ವ್ಯಕ್ತಿಯನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಮೊದಲು “ನನ್ನನ್ನು ಬಿಡಿ” ಎಂದು ಬೇಡಿಕೊಳ್ಳುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಿಂದಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಇಂಫಾಲ, ಜ. 22: ಮಣಿಪುರ(Manipur)ದಲ್ಲಿ ಮುಂದುವರಿಯುತ್ತಿರುವ ಜಾತಿ ಆಧಾರಿತ ಸಂಘರ್ಷಗಳ ನಡುವೆ ಮತ್ತೊಂದು ಭೀಕರ ಘಟನೆ ನಡೆದಿದೆ. ಚುರಾಚಂದ್‌ಪುರ (Churachandpur) ಜಿಲ್ಲೆಯಲ್ಲಿ ಮೈತೈ ಸಮುದಾಯ (Meitei community)ದ 38 ವರ್ಷದ ವ್ಯಕ್ತಿಯನ್ನು ಅಪರಿಚಿತ ಬಂದೂಕುಧಾರಿ ವ್ಯಕ್ತಿಗಳು ಅಪಹರಿಸಿ, ನಂತರ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಹತ್ಯೆಗೂ ಕೆಲ ಕ್ಷಣಗಳ ಮುನ್ನ ಆತ ತನ್ನನ್ನು ಕೊಲ್ಲಬೇಡಿ ಎಂದು ಬೇಡಿಕೊಳ್ಳುತ್ತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಜಾತಿ ಹಿಂಸಾಚಾರದ ಪ್ರಮುಖ ಸ್ಥಳಗಳಲ್ಲಿ ಒಂದಾದ ಚುರಾಚಂದ್‌ಪುರ್‌ನಲ್ಲಿ ಈ ಘಟನೆ ನಡೆದಿದ್ದು, ಬುಧವಾರ (ಜನವರಿ 21) ರಾತ್ರಿ ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆದ ಬಳಿಕವೇ ಘಟನೆಯ ಕುರಿತು ಮಾಹಿತಿ ಲಭಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಕತ್ತಲಲ್ಲಿ ಕಲ್ಲುಮಣ್ಣು ತುಂಬಿರುವ ರಸ್ತೆಯೊಂದರ ಮೇಲೆ ಕುಳಿತಿದ್ದ ವ್ಯಕ್ತಿಯು ಕೈ ಮುಗಿದು, ಕನಿಷ್ಠ ಇಬ್ಬರು ಬಂದೂಕು ಹಿಡಿದಿರುವ ವ್ಯಕ್ತಿಗಳ ಮುಂದೆ ಪದೇ ಪದೆ ತನ್ನನ್ನು ಕೊಲ್ಲಬೇಡಿ ಎಂದು ಬೇಡಿಕೊಳ್ಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆತ ಎಷ್ಟೇ ಬೇಡಿಕೊಂಡರೂ ಬಿಡದೇ ದುಷ್ಕರ್ಮಿಗಳಲ್ಲೊಬ್ಬ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಗುಂಡು ತಗುಲುತ್ತಿದ್ದಂತೆ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ತ ಹರಿಯುತ್ತಿರುವುದು ಸಹ ವಿಡಿಯೊದಲ್ಲಿ ಗೋಚರವಾಗುತ್ತಿದೆ.

ಲಗೇಜ್ ಪರಿಶೀಲಿಸುವ ನೆಪದಲ್ಲಿ ಕೊರಿಯನ್ ಯುವತಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲೈಂಗಿಕ ಕಿರುಕುಳ

ಮೃತನನ್ನು ಕಾಕ್ಚಿಂಗ್ ಜಿಲ್ಲೆಯ ನಿವಾಸಿ 38 ವರ್ಷದ ಮಯಾಂಗ್ಲಂಬಂ ರಿಷಿಕಾಂತ ಎಂದು ಗುರುತಿಸಲಾಗಿದೆ. ರಿಷಿಕಾಂತ ಚುರಾಚಂದ್‌ಪುರದ ಕುಕಿ ಸಮುದಾಯದ ಮಹಿಳೆಯನ್ನು ವಿವಾಹವಾಗಿದ್ದು, 'ಗಿನ್ಮಿಂಥಾಂಗ್' ಎಂಬ ಬುಡಕಟ್ಟು ಹೆಸರನ್ನು ಹೊಂದಿದ್ದರು. ನೇಪಾಳದಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆಲವು ದಿನ ರಜೆ ಪಡೆದು ಚುರಾಚಂದ್‌ಪುರಕ್ಕೆ ಆಗಮಿಸಿದ್ದರು. ಬುಧವಾರ ಸಂಜೆ ರಿಷಿಕಾಂತನ್ನು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿದ್ದು, ರಾತ್ರಿ ಸುಮಾರು 10.30ರ ವೇಳೆಗೆ ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಿಷಿಕಾಂತನ್ನು ಆತನ ಪತ್ನಿಯೊಂದಿಗೆ ಅಪಹರಿಸಲಾಗಿದೆ ಎಂದು ಮೈತೇಯಿ ಸಂಘಟನೆಗಳು ಆರೋಪಿಸಿವೆ. ಜತೆಗೆ ನೇಪಾಳದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿಯ ಭೇಟಿಗಾಗಿ ಪತ್ನಿಯು ಕುಕಿ ನ್ಯಾಷನಲ್ ಆರ್ಗನೈಜೆಷನ್ (KNO) ಹಾಗೂ ತುಯಿಬಾಂಗ್ ಪ್ರದೇಶದ ಸ್ಥಳೀಯ ಅಧಿಕಾರಿಗಳಿಂದ ಮುಂಚಿತ ಅನುಮತಿ ಪಡೆದಿದ್ದರು ಎಂದು ಅವರು ಹೇಳಿದ್ದಾರೆ.

2023ರ ಮೇಯಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಮೈತೇಯಿ ಮತ್ತು ಕುಕಿ ಸಮುದಾಯದವರು ಪರಸ್ಪರ ಪ್ರದೇಶಗಳಿಗೆ ಪ್ರವೇಶಿಸುವುದನ್ನು ಬಹುತೇಕ ನಿಲ್ಲಿಸಿದ್ದು, ಮಣಿಪುರವು ಜಾತಿ ಆಧಾರಿತವಾಗಿ ವಿಭಜನೆಯಾಗಿದೆ. ಈ ದೀರ್ಘಕಾಲದ ಸಂಘರ್ಷದಲ್ಲಿ 260ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ಅಪಹರಣ ಮತ್ತು ಹತ್ಯೆಗೆ ಕಾರಣರಾದವರು ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ (UNKA) ಎಂಬ ಉಗ್ರ ಸಂಘಟನೆಯ ಸದಸ್ಯರಾಗಿರಬಹುದೆಂದು ಶಂಕಿಸಲಾಗಿದೆ. ಈ ಸಂಘಟನೆಯು ಮಣಿಪುರ ಸರ್ಕಾರ ಮತ್ತು ಕೆಲವು ಕುಕಿ-ಝೋ ಸಶಸ್ತ್ರ ಸಂಘಟನೆಗಳ ನಡುವೆ ಮಾಡಿಕೊಳ್ಳಲಾದ ಸಸ್ಪೆನ್ಶನ್ ಆಫ್ ಆಪರೇಷನ್ಸ್ (SoO) ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ ಎನ್ನಲಾಗಿದೆ.