ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ನಾಗಾ-ಕುಕಿ ಗುಂಪುಗಳ ನಡುವೆ ಭೀಕರ ಸಂಘರ್ಷ

ಮಣಿಪುರದ ಸೇನಾಪತಿ ಜಿಲ್ಲೆಯ ಟಿ.ಖುಲ್ಲೆನ್ ಗ್ರಾಮದಲ್ಲಿ ನಾಗಾ ಮತ್ತು ಕುಕಿ ಸಶಸ್ತ್ರ ಗುಂಪುಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ನಾಗಾ ನಾಗರಿಕರ ಹತ್ಯೆಯ ನಂತರ ಉದ್ವಿಗ್ನತೆ ಹೆಚ್ಚಿದ್ದು, ಬಂದ್, ರಸ್ತೆ ತಡೆ ಮತ್ತು ಪ್ರತಿಭಟನೆಗಳಿಂದ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

ಮಣಿಪುರದಲ್ಲಿನ ಉದ್ವಿಗ್ನ ಪರಿಸ್ಥಿತಿ

ಇಂಫಾಲ, ಏ. 21: ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ಕಿಚ್ಚು ಮತ್ತೆ ಹತ್ತಿಕೊಂಡಿದ್ದು, ಸೇನಾಪತಿ ಜಿಲ್ಲೆಯ ಟಿ. ಖುಲ್ಲೆನ್ (T Khullen) ಗ್ರಾಮದಲ್ಲಿ ನಾಗಾ ಮತ್ತು ಕುಕಿ (Naga and Kuki) ಸಶಸ್ತ್ರ ಗುಂಪುಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಏಪ್ರಿಲ್ 18ರಂದು ಇಂಫಾಲ-ಉಖ್ರುಲ್ ರಸ್ತೆಯಲ್ಲಿ (Imphal-Ukhrul road) ಇಬ್ಬರು ನಾಗಾ ನಾಗರಿಕರನ್ನು ಹೊಂಚು ದಾಳಿ ನಡೆಸಿ ಹತ್ಯೆ ಮಾಡಿದ ಘಟನೆಯ ನಂತರ ಉಭಯ ಸಮುದಾಯಗಳ ನಡುವೆ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಶಂಕಿತ ಕುಕಿ ಉಗ್ರರು ನಡೆಸಿದ ಈ ದಾಳಿಯು ನಾಗಾ ಸಮುದಾಯವನ್ನು ಕೆರಳಿಸಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.

ಹತ್ಯೆಯನ್ನು ಖಂಡಿಸಿ ಯುನೈಟೆಡ್ ನಾಗಾ ಕೌನ್ಸಿಲ್ (UNC) ನಾಗಾ ಪ್ರಾಬಲ್ಯದ ಪ್ರದೇಶಗಳಲ್ಲಿ ಬಂದ್ ಮತ್ತು ರಸ್ತೆ ತಡೆಗೆ ಕರೆ ನೀಡಿದೆ. ಈ ಬಂದ್ ಜಾರಿಗೊಳಿಸುವ ಸಂದರ್ಭದಲ್ಲಿ ಕುಕಿ ಮತ್ತು ನಾಗಾ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಅದು ಸಶಸ್ತ್ರ ಸಂಘರ್ಷಕ್ಕೆ ತಿರುಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಗುಂಡಿನ ಚಕಮಕಿಯಿಂದ ಉಂಟಾದ ಸಾವುನೋವುಗಳ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ. ಉಖ್ರುಲ್ ಮತ್ತು ಸೇನಾಪತಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ ಮತ್ತು ಸಾರಿಗೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.

ಡೊನಾಲ್ಡ್‌ ಟ್ರಂಪ್ ಗಡುವು ವಿಸ್ತರಿಸುವರೇ ಅಥವಾ ಬಾಂಬ್ ಮಳೆ ಸುರಿಸುವರೇ? ಆತಂಕದಲ್ಲಿ ಜಗತ್ತು

ಮುಖ್ಯಮಂತ್ರಿ ಭೇಟಿಗೆ ಭಾರಿ ವಿರೋಧ

ಮತ್ತೊಂದೆಡೆ, ಥೌಬಲ್ ಜಿಲ್ಲೆಯ ವಾಂಗ್‌ಜಿಂಗ್‌ನಲ್ಲಿ ಹೊಸ ಬಿಡಿಒ ಕಚೇರಿ ಉದ್ಘಾಟಿಸಲು ಆಗಮಿಸಿದ ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಅವರಿಗೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಭಾರಿ ವಿರೋಧ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಕಣ್ಣೀರು ಅನಿಲ ಮತ್ತು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. "ಬೆಟ್ಟದ ಜಿಲ್ಲೆಗಳಿಗೆ ಭೇಟಿ ನೀಡಿದಾಗ ನನಗೆ ಯಾವುದೇ ಅಡೆತಡೆಗಳು ಎದುರಾಗಿಲ್ಲ, ಆದರೆ ಕಣಿವೆ ಜಿಲ್ಲೆಯಾದ ಥೌಬಲ್‌ನಲ್ಲಿ ನನ್ನ ಭೇಟಿಗೆ ವಿರೋಧ ವ್ಯಕ್ತವಾಗುತ್ತಿರುವುದು ಆಶ್ಚರ್ಯ ತಂದಿದೆ" ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ.

ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಕರ್ಫ್ಯೂ ಉಲ್ಲಂಘಿಸಿ ಮಹಿಳಾ ಸಂಘಟನೆಗಳು ನಡೆಸಿದ ಬೃಹತ್ ಪಂಜಿನ ಮೆರವಣಿಗೆಯೂ ಹಿಂಸಾಚಾರಕ್ಕೆ ತಿರುಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಾಗಾ ಮತ್ತು ಕುಕಿ ಗುಂಪುಗಳ ನಡುವಿನ ಹಳೆಯ ಪ್ರಾದೇಶಿಕ ವಿವಾದಗಳು ಮತ್ತೆ ಭುಗಿಲೆದ್ದಿರುವುದು ಮಣಿಪುರವನ್ನು ಮತ್ತೆ ಹಿಂಸಾಚಾರದ ಕೂಪಕ್ಕೆ ತಳ್ಳುವ ಭೀತಿ ಮೂಡಿಸಿದೆ.