ನವದೆಹಲಿ, ಮಾ. 19: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ (Middle East conflict) ಬಗ್ಗೆ ಭಾರತ ತಳೆದಿರುವ ನಿಲುವಿನ ಬಗ್ಗೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ (Manish Tewari)ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವನ್ನು ಬೆಂಬಲಿಸಿದರು. ಭಾರತ ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಯಾವಾಗಲೂ ಅಲ್ಪ ಪಾತ್ರವಹಿಸಿದ್ದೇ ಹೊರತು ಪ್ರಮುಖ ಪಾತ್ರದಲ್ಲಿರಲಿಲ್ಲ ಎಂದು ಅವರು ಒತ್ತಿ ಹೇಳಿದರು.
ಪಶ್ಚಿಮ ಏಷ್ಯಾದಲ್ಲಿ ಒಂದೇ ಯುದ್ಧ ನಡೆಯುತ್ತಿಲ್ಲ. ಬದಲಾಗಿ ಹಲವು ಸಂಘರ್ಷಗಳು ಒಂದೇ ಸಮಯದಲ್ಲಿ ನಡೆಯುತ್ತಿವೆ. ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಪರಿಸ್ಥಿತಿ ಕೇವಲ ಆ ಪ್ರದೇಶದ ವಿಷಯವಲ್ಲ, ಅದು ದೊಡ್ಡ ಜಾಗತಿಕ ಪರಿಣಾಮಗಳನ್ನು ಹೊಂದಿದೆ. ಆದರೆ ಇದು ಭಾರತದ ಯುದ್ಧವಲ್ಲ. ಭಾರತ ಈ ಪ್ರದೇಶದಲ್ಲಿ ಸದಾ ದೊಡ್ಡ ಪಾತ್ರವಹಿಸದೇ, ಅಲ್ಪ ಪಾತ್ರದಲ್ಲೇ ಇತ್ತು. ಭಾರತ ಸರಿಯಾದ ಕ್ರಮವನ್ನೇ ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಾವು ಎಚ್ಚರಿಕೆಯಿಂದ ನಡೆದುಕೊಂಡರೆ, ನಾವು ಸರಿಯಾದ ಕೆಲಸವನ್ನೇ ಮಾಡುತ್ತಿದ್ದೇವೆ ಎನ್ನಬಹುದು. ಯಾರನ್ನೂ ಅನುಸರಿಸದೇ, ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಹಾಗೂ ಪರಿಸ್ಥಿತಿಗೆ ತಕ್ಕಂತೆ ಜಾಣ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೇ ಮುಖ್ಯ ಎಂದು ತಿವಾರಿ ತಿಳಿಸಿದ್ದಾರೆ.
ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರಕ್ಕೆ ವ್ಯಾಪಕ ಹಾನಿ
ಭಾರತವು ಗಲ್ಫ್ ಪ್ರದೇಶದಲ್ಲಿ ಇರಾನ್ ನಡೆಸಿದ ದಾಳಿಗಳನ್ನು ಖಂಡಿಸಿದರೂ, ಇರಾನ್ ಜತೆ ರಾಜತಾಂತ್ರಿಕ ಮಾತುಕತೆ ನಡೆಸುತ್ತಿದೆ. ಇದರ ಉದ್ದೇಶ ಹೊರ್ಮುಜ್ ಜಲಸಂಧಿ ಮೂಲಕ ತೈಲ ಮತ್ತು ಅನಿಲ ಪೂರೈಕೆಯನ್ನು ಸುರಕ್ಷಿತವಾಗಿ ಮುಂದುವರಿಸುವುದು. ಈ ಜಲಸಂಧಿ ಅತ್ಯಂತ ಮಹತ್ವದ್ದಾಗಿದ್ದು, ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ ಸುಮಾರು ಐದನೇ ಒಂದು ಭಾಗ ಇದೇ ಮಾರ್ಗದಿಂದ ಸಾಗುತ್ತದೆ.
ಕೇಂದ್ರ ಸರ್ಕಾರವನ್ನು ಬೆಂಬಲಿಸಿದ ಶಶಿ ತರೂರ್
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತನಾಡುತ್ತಾ, ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಶ್ಲಾಘಿಸಿದರು. ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಯುದ್ಧವನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಭಾರತವು ದೀರ್ಘಕಾಲದಿಂದ ಎತ್ತಿಹಿಡಿದಿರುವ ಸಾರ್ವಭೌಮತ್ವ ಮತ್ತು ಆಕ್ರಮಣಶೀಲವಲ್ಲದಿರುವಿಕೆ ಸೇರಿದಂತೆ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ
ಫೆಬ್ರವರಿ 28ರಂದು, ಅಮೆರಿಕ ಮತ್ತು ಇಸ್ರೇಲ್-ಇರಾನ್ ವಿರುದ್ಧ ಸಂಘಟಿತ ದಾಳಿಗಳನ್ನು ಆರಂಭಿಸಿದವು. ದೇಶದ ಅನೇಕ ನಗರಗಳು ಮತ್ತು ತಾಣಗಳನ್ನು ಗುರಿಯಾಗಿಸಿಕೊಂಡವು. ಇದಕ್ಕೆ ಪ್ರತೀಕಾರವಾಗಿ, ಇರಾನ್ ಗಲ್ಫ್‌ನಾದ್ಯಂತ ವಾಷಿಂಗ್ಟನ್ ಮತ್ತು ಜೆರುಸಲೆಮ್‌ಗೆ ಸಂಪರ್ಕ ಹೊಂದಿದ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಿತು.
ಮಾ. 19ಕ್ಕೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ 20ನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ಕಡೆಯವರು ಮಿಲಿಟರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಾರೆ.