ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mary Kom: ಮೇರಿ ಕೋಮ್‌ ದಾಂಪತ್ಯದಲ್ಲಿ ಬಿರುಕು; ಭಾರತದ ಬಾಕ್ಸಿಂಗ್‌ ಐಕಾನ್‌ ಡಿವೋರ್ಸ್‌ಗೆ ಮುಂದಾಗಿದ್ದೇಕೆ?

ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತದ ಬಾಕ್ಸಿಂಗ್‌ ಐಕಾನ್‌ ಮೇರಿ ಕೋಮ್‌ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ. ಅವರು 20 ವರ್ಷಗಳ ತಮ್ಮ ವೈವಾಹಿಕ ಜೀವನ ಅಂತ್ಯಗೊಳಿಸಲಿದ್ದು, ಸದ್ಯದಲ್ಲೇ ಪತಿಯಿಂದ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೇರಿ ಕೋಮ್‌ ದಾಂಪತ್ಯದಲ್ಲಿ ಬಿರುಕು

ಮಗನೊಂದಿಗೆ ಮೇರಿ ಕೋಮ್‌ ದಂಪತಿ.

Profile Ramesh B Apr 9, 2025 2:13 PM

ಹೊಸದಿಲ್ಲಿ: ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತದ ಬಾಕ್ಸಿಂಗ್‌ ಐಕಾನ್‌ ಮೇರಿ ಕೋಮ್‌ (Mary Kom) ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ. ಅವರು 20 ವರ್ಷಗಳ ತಮ್ಮ ವೈವಾಹಿಕ ಜೀವನ ಅಂತ್ಯಗೊಳಿಸಲಿದ್ದು, ಸದ್ಯದಲ್ಲೇ ಪತಿಯಿಂದ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೇರಿ ಕೋಮ್‌ ಮತ್ತು ಅವರ ಪತಿ ಕೆ ಒನ್ಲರ್‌ ಆಲಿಯಾಸ್‌ ಕರುಂಗ್ ಒಂಖೋಲರ್ (Karung Onkholer) ಕೆಲವು ಸಮಯಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅಧಿಕೃತವಾಗಿ ದೂರವಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲಿಯೇ ಬಾಕ್ಸಿಂಗ್‌ ತಾರೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

2022ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಒನ್ಲರ್ ಸೋತ ನಂತರ ಅವರು ಮತ್ತು ಮೇರಿ ಕೋಮ್‌ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. "ಮೇರಿ ತಮ್ಮ ನಾಲ್ವರು ಮಕ್ಕಳೊಂದಿಗೆ ಫರಿದಾಬಾದ್‌ಗೆ ತೆರಳಿದರೆ, ಒನ್ಲರ್ ಕೆಲವು ಕುಟುಂಬ ಸದಸ್ಯರೊಂದಿಗೆ ದಿಲ್ಲಿಯಲ್ಲಿ ವಾಸವಾಗಿದ್ದಾರೆ. ಚುನಾವಣೆಯ ನಂತರ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡವು. ಒನ್ಲರ್ ಚುನಾವಣೆಯಲ್ಲಿ ಸ್ಪರ್ಧಸಿದ ಕಾರಣಕ್ಕೆ ಸುಮಾರು 2-3 ಕೋಟಿ ರೂ. ಆರ್ಥಿಕ ನಷ್ಟವಾಗಿದ್ದು, ಈ ಬಗ್ಗೆ ಮೇರಿ ಅತೃಪ್ತಿ ಹೊಂದಿದ್ದರು ಎಂದು ಆಪ್ತ ಮೂಲಗಳು ತಿಳಿಸಿದ್ದಾಗಿ ವರದಿಯಲ್ಲಿ ವಿವರಿಸಲಾಗಿದೆ. ಅದಾಗ್ಯೂ ಡಿವೋರ್ಸ್‌ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಂದಿಲ್ಲ.



ಈ ಸುದ್ದಿಯನ್ನೂ ಓದಿ: IPL 2025: ಕ್ರಿಕೆಟ್‌ ಆಡುವಾಗ ಗಾಯಕ್ಕೆ ತುತ್ತಾಗಿದ್ದ ರಾಹುಲ್‌ ದ್ರಾವಿಡ್‌ ರಾಜಸ್ಥಾನ್‌ ರಾಯಲ್ಸ್‌ಗೆ ಸೇರ್ಪಡೆ!

ಹೊಸ ಸಂಗಾತಿ ಕಂಡುಕೊಂಡ ಮೇರಿ ಕೋಮ್‌?

ಆರ್ಥಿಕ ವಿಚಾರದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟಿನ ಜತೆಗೆ ಮೇರಿ ಕೋಮ್ ಮತ್ತೊಬ್ಬ ಮಹಿಳಾ ಬಾಕ್ಸರ್‌ ಪತಿಯ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇದು ಕೂಡ ವಿಚ್ಛೇದನಕ್ಕೆ ಕಾರಣ ಎನ್ನುವ ವದಂತಿಯೂ ಹಬ್ಬಿದೆ. "ಮೇರಿ ಕೋಮ್ ಮತ್ತು ಒನ್ಲರ್ ದೂರವಾಗುತ್ತಿರುವುದು ಕೇವಲ ವದಂತಿಗಳಲ್ಲ. ಆದಾಗ್ಯೂ ಇದಕ್ಕೆ ಕಾರಣ ಖಚಿತವಾಗಿಲ್ಲ. ಮೇರಿ ಇನ್ನೊಬ್ಬ ಬಾಕ್ಸರ್‌ನ ಪತಿಯೊಂದಿಗೆ ಸಂಬಂಧದಲ್ಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗಳು ಇದಕ್ಕೆ ಸಾಕ್ಷಿ" ಎಂದು ಹೆಸರು ಹೇಳಲಿಚ್ಛಿಸದ ಬಾಕ್ಸರ್ ಒಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್‌ ಹೇಳಿದೆ.

20 ವರ್ಷಗಳ ದಾಂಪತ್ಯ ಜೀವನ

2000ನೇ ಇಸವಿಯಲ್ಲಿ ಮೇರಿ ಕೋಮ್ ಮತ್ತು ಒನ್ಲರ್ ಮೊದಲ ಬಾರಿಗೆ ದಿಲ್ಲಿಯಲ್ಲಿ ಭೇಟಿಯಾಗಿದ್ದರು. ಒನ್ಲರ್ ಆಗ ದಿಲ್ಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ವಿದ್ಯಾರ್ಥಿಯಾಗಿದ್ದರು. ಮೇರಿ ಕೋಮ್‌ ಬಾಕ್ಸಿಂಗ್‌ ಸ್ಪರ್ಧೆಗೆಂದು ಪ್ರಯಾಣಿಸುತ್ತಿದ್ದಾಗ ಲಗೇಜ್‌ ಕಳೆದುಕೊಂಡಿದ್ದರು. ಈ ವೇಳೆ ಅವರು ಒನ್ಲರ್ ಸಹಾಯ ಪಡೆದಿದ್ದರು. ಹೀಗೆ ಆಕಸ್ಮಿಕವಾಗಿ ಆದ ಭೇಟಿ ಅವರನ್ನು ಕ್ರಮೇಣ ಇನ್ನಷ್ಟು ಹತ್ತಿರಕ್ಕೆ ತಂದಿತ್ತು. ಇವರು 2005ರಲ್ಲಿ ವಿವಾಹವಾಗಿದ್ದರು. 2007ರಲ್ಲಿ ಮೇರಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. 2013ರಲ್ಲಿ ಅವರಿಗೆ ಮತ್ತೊಬ್ಬ ಮಗ ಜನಿಸಿದ್ದ. ಮೇರಿ-ಒನ್ಲರ್ ದಂಪತಿ 2018ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು.

2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೇರಿ ಕೋಮ್‌ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಪದ್ಮ ಶ್ರೀ, ಪದ್ಮ ಭೂಷಣ್‌ ಮತ್ತು ಪದ್ಮ ವಿಭೂಷಣ್‌ ಪ್ರಶಸ್ತಿ ನೀಡಿದೆ.