ಜೈಪುರ, ಮೇ 30: ರಾಜಸ್ಥಾನದೆಲ್ಲೆಡೆ (Rajasthan) ಶನಿವಾರ (ಮೇ 30) ಮಧ್ಯಾಹ್ನ ಪ್ರಬಲವಾದ ಧೂಳಿನ ಬಿರುಗಾಳಿ (Dust Storm) ಬೀಸಿದೆ. ಚುರು ಮತ್ತು ಇತರ ಜಿಲ್ಲೆಗಳಲ್ಲಿ ಈ ಬಿರುಗಾಳಿಯು ಸಾಮಾನ್ಯ ಜನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿತು. ಚಂಡಮಾರುತವು ಎಷ್ಟು ತೀವ್ರವಾಗಿತ್ತು ಎಂದರೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕತ್ತಲೆ ಆವರಿಸಿ ನಿವಾಸಿಗಳು ಆಘಾತಕ್ಕೊಳಗಾದರು.
ಅದರಲ್ಲೂ ಚುರು ಪ್ರದೇಶದಲ್ಲಿ ಧೂಳಿನ ದಟ್ಟ ಮೋಡಗಳು ಆವರಿಸಿತು. ಇದರಿಂದ ಗೋಚರತೆಯು ಬಹುತೇಕ ಶೂನ್ಯಕ್ಕೆ ಇಳಿಯಿತು. ವಾಹನಗಳು ರಸ್ತೆಗಳ ಮಧ್ಯದಲ್ಲೇ ನಿಲ್ಲಬೇಕಾಯಿತು. ಏನೂ ಕಾಣಿಸದೇ ಇದ್ದುದರಿಂದ ಚಾಲಕರಿಗೆ ವಾಹನ ಚಲಾಯಿಸಲು ಸಾಧ್ಯವಾಗಲಿಲ್ಲ. ವಾತಾವರಣ ತುಂಬಾ ಧೂಳು ತುಂಬಿಕೊಂಡಿದ್ದರಿಂದ, ವಾಹನದ ಹೆಡ್‌ಲೈಟ್ ಆನ್ ಮಾಡಿದರೂ ದಾರಿ ಕಾಣಿಸುತ್ತಲೇ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಿರುಗಾಳಿಯು ಸುಮಾರು 30 ನಿಮಿಷಗಳ ಕಾಲ ಬೀಸಿದೆ. ಬಲವಾದ ಗಾಳಿಯಿಂದಾಗಿ ವಾತಾವಾರಣ ಧೂಳಿನ ಮಿಶ್ರಣವಾಗಿ ಬದಲಾಗಿದ್ದರಿಂದ ಸುರಕ್ಷತೆಗಾಗಿ ಜನರು ಮನೆಗಳು ಮತ್ತು ಅಂಗಡಿಗಳತ್ತ ಧಾವಿಸಿದರು. ಇದು ಭೀತಿಯಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದರಿಂದ ದೈನಂದಿನ ಚಟುವಟಿಕೆಗಳು ಸ್ಥಗಿತಗೊಂಡವು. ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾನಿ ಸಂಭವಿಸಿದ ವರದಿಗಳಿದ್ದು, ಬಲವಾದ ಗಾಳಿಯಿಂದಾಗಿ ಮರಗಳು ಬುಡಮೇಲಾಗಿವೆ ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಇಲ್ಲಿದೆ ವಿಡಿಯೊ:
ಗಂಗಾನಗರ, ಜೈಪುರ ಮತ್ತು ಬಿಕಾನೇರ್ ಸೇರಿ ರಾಜಸ್ಥಾನದ ಇತರ ಭಾಗಗಳಲ್ಲೂ ಇದೇ ರೀತಿಯ ಧೂಳಿನ ಬಿರುಗಾಳಿ ಬೀಸಿದೆ. ಚುರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ದಾಟಿದ ಕೆಲವೇ ದಿನಗಳ ನಂತರ ಈ ಹಠಾತ್ ಹವಾಮಾನ ಬದಲಾವಣೆ ಸಂಭವಿಸಿದೆ.
ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್
ರಾಜ್ಯದಲ್ಲಿ ಬಲವಾದ ಬಿರುಗಾಳಿ ಮತ್ತು ಮಳೆ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಮಯದಲ್ಲಿ, ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಮತ್ತು ಗುಡುಗು ಸಹಿತ ಮಳೆ ಉಂಟಾಗಬಹುದು. ಹವಾಮಾನ ಕೇಂದ್ರದ ಪ್ರಕಾರ ಶನಿವಾರ ಬೆಳಗ್ಗೆಯವರೆಗಿನ 24 ಗಂಟೆಗಳಲ್ಲಿ, ಕೆಲವು ಭಾಗಗಳಲ್ಲಿ ಬಿರುಗಾಳಿ ಮತ್ತು ಮಳೆಯಾಗಿದೆ. ಧೋಲ್ಪುರದ ಬಾರಿಯಲ್ಲಿ ಅತಿ ಹೆಚ್ಚು 58 ಮಿ.ಮೀ. ಮಳೆ ಸುರಿದಿದೆ.
ಬಿಕನೇರ್, ಜೈಪುರ, ಅಜ್ಮೀರ್, ಭರತ್‌ಪುರ, ಕೋಟಾ, ಜೋಧ್‌ಪುರ ಮತ್ತು ಉದಯಪುರ ವಿಭಾಗಗಳ ಕೆಲವು ಭಾಗಗಳಲ್ಲಿ, 60-70 ಕಿಲೋ ಮೀಟರ್ ವೇಗದಲ್ಲಿ ಭಾರಿ ಬಿರುಗಾಳಿ ಬೀಸಲಿದೆ ಮತ್ತು ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಮತ್ತು ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರವು ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕೈದು ದಿನಗಳವರೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಬಿರುಗಾಳಿ-ಮಳೆ ಚಟುವಟಿಕೆಗಳು ಮುಂದುವರಿಯುವ ಸಾಧ್ಯತೆಯಿದೆ.
ಎಲ್ ನಿನೋ ಪ್ರಭಾವ: ಮುಂಗಾರು ಕ್ಷೀಣ ಭೀತಿ
ದೆಹಲಿ: 'ಎಲ್ ನಿನೋ' ಚಂಡಮಾರುತ ಈಕ್ವೆಟೋರಿಯಲ್ ಫೆಸಿಫಿಕ್ ಸಾಗರ ಭಾಗದಲ್ಲಿ ರೂಪುಗೊಳ್ಳಲಾರಂಭಿಸಿದೆ. ಪರಿಣಾಮ ಭಾರತ ಉಪಖಂಡದಲ್ಲಿ ಜೂನ್ ಅವಧಿಯ ಮಳೆ ಪ್ರಮಾಣ ವಾಡಿಕೆಗಿಂತಲೂ ಬಹಳ ಕಡಿಮೆ ಇರಲಿದೆ. ಬದಲಾಗಿ ಬಿಸಿಗಾಳಿಯ ಹೊಡೆತ ಹೆಚ್ಚಲಿದೆ ಎಂದು ಹವಾಮಾನ ವರದಿಯಲ್ಲಿ ಹೇಳಲಾಗಿದೆ.