ನವದೆಹಲಿ, ಮೇ 14: ಮಧ್ಯಪ್ರಾಚ್ಯ ಬಿಕ್ಕಟ್ಟು (Middle East crisis) ಇದೇ ರೀತಿ ದೀರ್ಘಕಾಲದವರೆಗೆ ಮುಂದುವರಿದರೆ, ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು (Petrol-Diesel price hike) ಹೆಚ್ಚಿಸಬೇಕಾಗಬಹುದು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ (RBI Governor Sanjay Malhotra) ಹೇಳಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಮಲ್ಹೋತ್ರಾ, ಸರ್ಕಾರವು ಹಣಕಾಸಿನ ವಿಷಯದಲ್ಲಿ ಸಾಕಷ್ಟು ವಿವೇಕಯುತವಾಗಿ ನಡೆದುಕೊಳ್ಳುತ್ತಿದೆ. ಆರ್ಥಿಕತೆಯನ್ನು ಬಲಪಡಿಸಲು ಶ್ರಮಿಸುತ್ತಿದೆ ಎಂದು ಎತ್ತಿ ತೋರಿಸಿದರು.
ಮಧ್ಯಪ್ರಾಚ್ಯ ಸಂಘರ್ಷ ಮತ್ತು ಹೊರ್ಮುಜ್ ಜಲಸಂಧಿಯ ದಿಗ್ಬಂಧನವು ತೈಲ ಮತ್ತು ಅನಿಲ ಪೂರೈಕೆಯನ್ನು ಅಡ್ಡಿಪಡಿಸಿದೆ. ಇದರಿಂದಾಗಿ ಇಂಧನ ಬೆಲೆಗಳು ಹೆಚ್ಚಿವೆ. ಭಾರತವು ಇಂಧನ ಮತ್ತು ರಸಗೊಬ್ಬರಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಿದ ಮಲ್ಹೋತ್ರಾ, ಪ್ರಸ್ತುತ ಅಡಚಣೆಗಳು ಭಾರತದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ ಎಂದು ಹೇಳಿದರು.
ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಬೆಲೆ ಏರಿಕೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಎಚ್ಚರಿಕೆ ನೀಡಿದ್ದಾರೆ. ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ಸರ್ಕಾರಕ್ಕೆ ಆ ವೆಚ್ಚವನ್ನು ಹೊರುವುದು ಕಷ್ಟವಾಗುತ್ತದೆ. ಹೀಗಾಗಿ ಅದರ ಹೊರೆಯನ್ನು ಜನರ ಮೇಲೆ ಹಾಕಬಹುದು ಎನ್ನಲಾಗಿದೆ.
ಇರಾನ್ ಅಧ್ಯಕ್ಷರೊಂದಿಗೆ ಷರೀಫ್ ಸಭೆ: ಪಾಕಿಸ್ತಾನದಲ್ಲಿ ಮಧ್ಯಪ್ರಾಚ್ಯ ಶಾಂತಿ ಮಾತುಕತೆಗೆ ಸಿದ್ಧತೆ
ಫೆಬ್ರವರಿ 28 ರಂದು ಪ್ರಾರಂಭವಾದ ಮಧ್ಯಪ್ರಾಚ್ಯ ಸಂಘರ್ಷದ ಹೊರತಾಗಿಯೂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿಲ್ಲ. ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸುವ ಉದ್ದೇಶದಿಂದ ಇಂಧನ ಬಳಕೆ ಮತ್ತು ಖಾದ್ಯ ಎಣ್ಣೆ ಬಳಕೆಯನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಮಿತವ್ಯಯ ಕ್ರಮಗಳನ್ನು ಅನುಸರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದ್ದು, ಪ್ರಸ್ತುತ ಅಮೆರಿಕ ಡಾಲರ್ ವಿರುದ್ಧ 95 ರ ಗಡಿಗಿಂತ ಕೆಳಗಿದೆ.
ಕೈಗಾರಿಕಾ ಡೀಸೆಲ್ ಬೆಲೆ ಈಗಾಗಲೇ ಹೆಚ್ಚಳ
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಕೈಗಾರಿಕಾ ಡೀಸೆಲ್ ಲೀಟರ್‌ಗೆ 28.22 ರೂ. ಹೆಚ್ಚಿಸಿದ್ದು, ಶೇ. 25 ಕ್ಕಿಂತ ಹೆಚ್ಚು ಹೆಚ್ಚಳವಾಗಿದ್ದು, ಹೊಸ ದರವನ್ನು ಲೀಟರ್‌ಗೆ 137.81 ರೂ. ಗೆ ನಿಗದಿಪಡಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಕಂಪನಿಗಳು ಬುಧವಾರ (ಏ.1) ಈ ಹೊಂದಾಣಿಕೆಯನ್ನು ಮಾಡಿವೆ.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ನೇರವಾಗಿ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿದಾಗ ಎಚ್‌ಎಸ್‌ಡಿ ಎಂದು ಕರೆಯಲ್ಪಡುವ ಹೈ-ಸ್ಪೀಡ್ ಡೀಸೆಲ್‌ಗೆ ಇದು ಅನ್ವಯಿಸುತ್ತದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಏರಿಕೆಯನ್ನು ಕಂಪನಿಗಳು ಈ ಕ್ರಮಕ್ಕೆ ಕಾರಣವೆಂದು ಉಲ್ಲೇಖಿಸಿವೆ. ಅದೇ ಆಂತರಿಕ ಅಧಿಸೂಚನೆಯಲ್ಲಿ, ಫರ್ನೇಸ್ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 23.77 ರೂ. ಹೆಚ್ಚಿಸಲಾಗಿದೆ.
ಕೈಗಾರಿಕಾ ಮತ್ತು ಬೃಹತ್ ಬಳಕೆದಾರರಿಗೆ ಸರಬರಾಜು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ಕಂಪನಿಗಳು ಗ್ರಾಹಕರಿಗೆ ತಿಳಿಸಿವೆ. ಲಭ್ಯತೆಯಲ್ಲಿ ಯಾವುದೇ ಅಡಚಣೆಯಾಗಿಲ್ಲ ಎಂದು ಅವರು ಹೇಳಿದ್ದರು.