ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MiG-21 Fighter Jet: ಮಿಗ್-21 ಫೈಟರ್ ಜೆಟ್ ಯಗಾಂತ್ಯ! ಆರು ದಶಕಗಳ ಸೇವೆಯ ಬಳಿಕ ನಿವೃತ್ತಿ

ರಷ್ಯಾದಲ್ಲಿ ಜನ್ಮ ತಳೆದು 1963ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಮಿಗ್-21 ಫೈಟರ್ ಜೆಟ್‌ ಸುಮಾರು 62 ವರ್ಷಗಳ ಸೇವೆಯನ್ನು ಭಾರತೀಯ ಸೇನೆಗೆ ಸಲ್ಲಿಸಿ ಶುಕ್ರವಾರ ನಿವೃತ್ತಿ ಪಡೆದಿದೆ. ಚಂಡೀಗಢದಲ್ಲಿ ನಡೆದ ಮಿಗ್-21 ಫೈಟರ್ ಜೆಟ್‌ ನ ಔಪಚಾರಿಕ ನಿವೃತ್ತಿ ಸಮಾರಂಭದಲ್ಲಿ ಇದಕ್ಕೆ ಭಾರತೀಯ ವಾಯುಪಡೆಯು ವಿದ್ಯುಕ್ತವಾಗಿ ವಿದಾಯ ಹೇಳಿತು.

ಮಿಗ್-21 ಫೈಟರ್ ಜೆಟ್ ಯುಗಾಂತ್ಯ

-

ಬೆಂಗಳೂರು: ಸುಮಾರು ಆರು ದಶಕಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಭಾರತೀಯ ವಾಯುಪಡೆಯ (Indian Air Force) ಮಿಗ್-21 ಫೈಟರ್ ಜೆಟ್ (MiG-21 Fighter Jet) ಶುಕ್ರವಾರ ನಿವೃತ್ತಿ ಪಡೆದಿದೆ. 1963ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಮಿಗ್-21 ಫೈಟರ್ ಜೆಟ್‌ ಸೆಪ್ಟೆಂಬರ್ ವೇಳೆಗೆ ನಿವೃತ್ತಿಯಾಗುವುದಾಗಿ ಕಳೆದ ಜುಲೈ ತಿಂಗಳಲ್ಲಿ ಘೋಷಣೆಯಾಗಿತ್ತು. ಅಂತೆಯೇ ಭಾರತೀಯ ವಾಯುಪಡೆಯು ಶುಕ್ರವಾರ ದೇಶದ ಮೊದಲ ಸೂಪರ್‌ಸಾನಿಕ್ ಫೈಟರ್ ಮತ್ತು ಇಂಟರ್‌ಸೆಪ್ಟರ್‌ (supersonic fighter and interceptor) ಮಿಗ್ 21ಕ್ಕೆ ವಿದ್ಯುಕ್ತವಾಗಿ ವಿದಾಯ ಹೇಳಿತು.

ರಷ್ಯಾದಲ್ಲಿ ಜನ್ಮ ತಳೆದು 1963ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಮಿಗ್-21 ಫೈಟರ್ ಜೆಟ್‌ ಸುಮಾರು 62 ವರ್ಷಗಳ ಸೇವೆಯನ್ನು ಭಾರತೀಯ ಸೇನೆಗೆ ನೀಡಿತ್ತು. ಈ ಜೆಟ್ ಭಾರತದ ವಾಯು ಶಕ್ತಿಯ ಆಧಾರವಾಗಿದ್ದು, ರಾಷ್ಟ್ರದ ಮಿಲಿಟರಿ ವಾಯುಯಾನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಚಂಡೀಗಢದಲ್ಲಿ ನಡೆದ ಮಿಗ್-21 ಫೈಟರ್ ಜೆಟ್‌ ನ ಔಪಚಾರಿಕ ನಿವೃತ್ತಿ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು, ಪ್ರಮುಖ ಗಣ್ಯರು, ವಾಯು ಯೋಧರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಮಿಗ್ -21ಗಳು ವಿವಿಧ ರೀತಿಯ ಕೊನೆಯ ಪ್ರದರ್ಶನ ನೀಡಿದವು. ವಾಯುಪಡೆಯ ಮುಖ್ಯಸ್ಥ ಎ.ಪಿ. ಸಿಂಗ್ ಅವರು ಸ್ವತಃ ಸ್ಕ್ವಾಡ್ರನ್ ಲೀಡರ್ ಪ್ರಿಯಾ ಶರ್ಮಾ ಅವರೊಂದಿಗೆ ಇದರಲ್ಲಿ ಸೇರಿಕೊಂಡರು.

ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಸಿಂಗ್, ಸೆಪ್ಟೆಂಬರ್ 26ರಂದು ನಾನು ಚಂಡೀಗಢದಲ್ಲಿರುತ್ತೇನೆ. ಭಾರತೀಯ ವಾಯುಪಡೆಯ ಮಿಗ್ -21 ರ ನಿವೃತ್ತಿ ಸಮಾರಂಭದಲ್ಲಿ ಭಾಗವಹಿಸುತ್ತೇನೆ. ಅದನ್ನು ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: PM Narendra Modi: ಮಿಗ್‌ ಫೈಟರ್‌ ಜೆಟ್‌, S-400 ಜೊತೆ ಫೋಟೋ... ಸೈಲೆಂಟ್‌ ಆಗಿಯೇ ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ರಾ ಮೋದಿ?

ಮಿಗ್-21 ಜಾಗ್ವಾರ್‌ಗಳು ಮತ್ತು ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವನ್ನು ಒಳಗೊಂಡ ವಿಸ್ತಾರವಾದ ಫ್ಲೈಪಾಸ್ಟ್ ಮೂಲಕ ವಿದಾಯ ಹೇಳಿತು. ಮಿಗ್ -21 ಗಳು ಮತ್ತು ಜಾಗ್ವಾರ್‌ಗಳ ನಡುವಿನ ಸಿಮ್ಯುಲೇಟೆಡ್ ಡಾಗ್‌ಫೈಟ್ ಕಾರ್ಯಕ್ರಮದ ಪ್ರಮುಖ ಭಾಗವಾಗಿತ್ತು. ಇದು 2019 ರ ಬಾಲಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನಿ ಎಫ್ -16 ಅನ್ನು ಎದುರಿಸಿದಾಗ ಜೆಟ್‌ನ ಪಾತ್ರವನ್ನು ನೆನಪಿಸುವ ಉದ್ದೇಶವನ್ನು ಹೊಂದಿತ್ತು.

ಜೆಟ್‌ಗಳಿಗೆ ವಿಧ್ಯುಕ್ತ ಜಲ ಫಿರಂಗಿ ವಂದನೆಯನ್ನು ಸಹ ಸಲ್ಲಿಸಲಾಯಿತು. ಸಾಂಕೇತಿಕ ಸನ್ನೆಯ ಮೂಲಕ ವಾಯುಪಡೆಯ ಮುಖ್ಯಸ್ಥರು ವಿಮಾನದ ಫಾರ್ಮ್ 700 ಲಾಗ್‌ಬುಕ್ ಅನ್ನು ರಕ್ಷಣಾ ಸಚಿವರಿಗೆ ಹಸ್ತಾಂತರಿಸಿದರು. ಇದು ಯುದ್ಧ ವಿಮಾನದ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಈ ಬಳಿಕ ಮಿಗ್-21ರ ಸ್ಮರಣಾರ್ಥ ವಿಶೇಷ ಅಂಚೆ ಕವರ್ ಅನ್ನು ಸಹ ಬಿಡುಗಡೆ ಮಾಡಲಾಯಿತು.



ಭಾರತೀಯ ವಾಯುಪಡೆಯಲ್ಲಿ ಮಿಗ್-21ರ ಪಾತ್ರ

ಮಿಗ್ -21 ಬೈಸನ್ ಫೈಟರ್ ಜೆಟ್‌ಗಳನ್ನು ಸೋವಿಯತ್ ಮಿಕೋಯಾನ್- ಗುರೆವಿಚ್ ಬ್ಯೂರೋ ಅಭಿವೃದ್ಧಿಪಡಿಸಿದ್ದು, ಇದು ಭಾರತದ ಮೊದಲ ಸೂಪರ್‌ಸಾನಿಕ್ ಜೆಟ್ ಆಗಿದ್ದು, ಭಾರತೀಯ ವಾಯುಪಡೆಯು 870ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು ನಿರ್ವಹಿಸಿದೆ. ಮಿಗ್-21 ಬಿಸ್‌ನ ನವೀಕೃತ ಆವೃತ್ತಿ ಮಿಗ್-21 ಬೈಸನ್ 1976ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿತ್ತು. ಈ ಫೈಟರ್ ಜೆಟ್ 1990ರ ದಶಕದ ಮಧ್ಯಭಾಗದಲ್ಲಿ ತನ್ನ ನಿವೃತ್ತಿಯ ನಿರ್ಧಾರ ಮಾಡಿತ್ತು.

1,000ಕ್ಕೂ ಹೆಚ್ಚು ಘಟಕಗಳನ್ನು ಉತ್ಪಾದಿಸಲಾಗುತ್ತಿದ್ದ ಈ ಫೈಟರ್ ಜೆಟ್ ಕೈಗೆಟುಕುವ ದರ, ಹೆಚ್ಚು ಚುರುಕು ಮತ್ತು ಸೂಪರ್ ಸಾನಿಕ್ ಸಾಮರ್ಥ್ಯದಿಂದಾಗಿ ಏಷ್ಯಾ, ಆಫ್ರಿಕಾ ಮತ್ತು ಪೂರ್ವ ಯುರೋಪಿನಾದ್ಯಂತ ವಾಯುಪಡೆಗಳಲ್ಲಿ ತನ್ನ ಸ್ಥಾನ ಪಡೆದಿತ್ತು. 1963ರಲ್ಲಿ ಭಾರತೀಯ ವಾಯುಪಡೆ ಸೇರಿದ ಮಿಗ್-21 ಪ್ರಮುಖ ಸಂಘರ್ಷಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. 1965ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ತನ್ನ ಮೊದಲ ಶಕ್ತಿ ಪ್ರದರ್ಶನ ನೀಡಿದ ಇದು 1971ರಲ್ಲಿ ಢಾಕಾದ ಗವರ್ನರ್ ಹೌಸ್ ಅನ್ನು ಹೊಡೆದುರುಳಿಸಿತ್ತು. ಇದು ಸಂಘರ್ಷದಲ್ಲಿನ ಒಂದು ಮಹತ್ವದ ತಿರುವಾಗಿತ್ತು. ದಶಕಗಳ ಅನಂತರ ಬಾಲಕೋಟ್ ದಾಳಿಯಳ್ಳಿ ಅದು ಪಾಕಿಸ್ತಾನಿ ಎಫ್-16 ಅನ್ನು ಹೊಡೆದುರುಳಿಸಿತು. ಇತ್ತೀಚಿನ ಆಪರೇಷನ್ ಸಿಂದೂರ್ ನಲ್ಲೂ ಇದು ಪ್ರಮುಖ ಪಾತ್ರ ವಹಿಸಿದೆ.

ಇದನ್ನೂ ಓದಿ: Viral News: ಶ್ರೀಮಂತ ವಯಸ್ಸಾದ ಪುರುಷರೇ ಇವ್ಳ ಟಾರ್ಗೆಟ್‌... ಡೇಟಿಂಗೇ ಬ್ಯುಸಿನೆಸ್‌!

ಮಿಗ್-21 ನಿವೃತ್ತಿಯೊಂದಿಗೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಬಲವು 29 ಸ್ಕ್ವಾಡ್ರನ್‌ಗಳಿಗೆ ಇಳಿಯಲಿದೆ. ಇದು ಮಂಜೂರಾದ 42 ಸ್ಕ್ವಾಡ್ರನ್‌ಗಳಿಗಿಂತ ಬಹಳ ಕಡಿಮೆಯಾಗಿದೆ. ತೇಜಸ್ ಎಂಕೆ-1 ಮತ್ತು ಎಂಕೆ-2 ವಿಮಾನಗಳು, ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಇದರ ಅಂತರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದರೆ ಇದಕ್ಕೆ ಹೆಚ್ಚಿನ ಸಮಯ ಬೇಕಾಗಬಹುದು.