Sonam Wangchuk: ಲಡಾಖ್‌ನಲ್ಲಿ ಹಿಂಸಾಚಾರ ಪ್ರಕರಣ; ಪ್ರಚೋದನಾಕಾರಿ ಭಾಷಣ ಮಾಡಿದ್ದ ಸೋನಮ್ ವಾಂಗ್‌ಚುಕ್ ಬಂಧನ
ಲಡಾಖ್‌ನಲ್ಲಿ (Ladakh) ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿ, 90 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆಗೆ ಮೂಲ ಕಾರಣ ಸೋನಮ್ ವಾಂಗ್‌ಚುಕ್ ಎಂದು ಆರೋಪಿಸಿ, ಲೇಹ್ ಪೊಲೀಸರು ಶುಕ್ರವಾರ ಅವರನ್ನು ಬಂಧಿಸಿದ್ದಾರೆ.

-

ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿ, 90 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆಗೆ ಮೂಲ ಕಾರಣ ಸೋನಮ್ ವಾಂಗ್‌ಚುಕ್ ಎಂದು ಆರೋಪಿಸಿ, ಲೇಹ್ ಪೊಲೀಸರು ಶುಕ್ರವಾರ ಅವರನ್ನು ಬಂಧಿಸಿದ್ದಾರೆ. ಲೆಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಜೊತೆಗೂಡಿ ವಾಂಗ್ಚುಕ್ ನೇತೃತ್ವದಲ್ಲಿ ಲಡಾಖ್‌ಗೆ ಪೂರ್ಣ ರಾಜ್ಯ ಸ್ಥಾನಮಾನ ಮತ್ತು ಭಾರತೀಯ ಸಂವಿಧಾನದ ಆರನೇ ವೇಳಾಪಟ್ಟಿಯ ಅಡಿಯಲ್ಲಿ ಸೇರ್ಪಡೆಗಾಗಿ ಈ ಪ್ರತಿಭಟನೆ ನಡೆಸಲಾಗಿತ್ತು.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ವಾಂಗ್‌ಚುಕ್ ಸೆಪ್ಟೆಂಬರ್ 10, 2025 ರಂದು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ಬುಧವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಲಡಾಖ್ ಗೆ ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಒತ್ತಾಯಿಸಿ ಉಪವಾಸ ನಡೆಸುತ್ತಿದ್ದ ವಾಂಗ್ಚುಕ್ ನೀಡಿದ ಹೇಳಿಕೆಗಳು ಯುವಕರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ ಎಂದು ಹೇಳಿದೆ. ಗೃಹ ಸಚಿವಾಲಯವು ಅಧಿಕೃತವಾಗಿ SECMOL ನ ಪರವಾನಗಿಯನ್ನು ರದ್ದುಪಡಿಸುವ ತೀರ್ಮಾನ ಕೈಗೊಂಡಿದೆ.
ಹಿಂಸಾಚಾರ ನಡೆದ ಬಳಿಕ "ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ಲಡಾಖ್‌ನ ಯುವಕರನ್ನು ವಿನಂತಿಸುತ್ತೇನೆ. ಏಕೆಂದರೆ ಅದು ನಮ್ಮ ಉದ್ದೇಶಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ನಾವು ಲಡಾಖ್ ಮತ್ತು ದೇಶದಲ್ಲಿ ಅಸ್ಥಿರತೆಯನ್ನು ಬಯಸುವುದಿಲ್ಲ" ಎಂದು ಮುಷ್ಕರದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ತಮ್ಮ ಬೆಂಬಲಿಗರಿಗೆ ವಾಂಗ್‌ಚುಕ್ ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Ladakh Statehood Protest: ಲಡಾಖ್ ಗಲಭೆ ನಡೆದಿದ್ದು ಹೇಗೆ? ನಿಜವಾದ ಕಾರಣ ಬಿಚ್ಚಿಟ್ಟ ಕೇಂದ್ರ ಸರ್ಕಾರ
ವಾಂಗ್‌ಚುಕ್ ಲಡಾಕ್‌ಗೆ ರಾಜ್ಯ ಸ್ಥಾನ ನೀಡುವುದರ ಜತೆ, 6ನೇ ಅನುಸೂಚಿ, ಉದ್ಯೋಗ ಮೀಸಲಾತಿ ಮತ್ತು ಎರಡು ಸಂಸತ್ ಸೀಟುಗಳನ್ನು ನೀಡುವಂತೆ ಆಗ್ರಹಿಸಿ ಉಪವಾಸ ಮಾಡುತ್ತಿದ್ದರು. 2019ರಲ್ಲಿ ಲಡಾಖ್ ಯೂನಿಯನ್ ಟೆರಿಟರಿಯಾಗಿ, ಸ್ವಾಯತ್ತತೆ ಕಳೆದುಕೊಂಡಿತು. ಇದರಿಂದ ಯುವಕರಲ್ಲಿ ಅಸಮಾಧಾನ ಹೆಚ್ಚಾಯಿತು. “5 ವರ್ಷಗಳಿಂದ ಉದ್ಯೋಗವಿಲ್ಲ, ಇದು Zen-Z ಕ್ರಾಂತಿಯಾಯಿತು” ಎಂದು ವಾಂಗ್‌ಚುಕ್ ಹೇಳಿದರು. ಪ್ರತಿಭಟನೆಯಲ್ಲಿ ಶಾಲಾ ಬಾಲಕಿಯರು, ಕಾಲೇಜು ವಿದ್ಯಾರ್ಥಿಗಳು, ಸಾಧುಗಳು ಭಾಗವಹಿಸಿದ್ದರು.