ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಸಚಿವೆಯ ಮುಖಕ್ಕೆ ಕೆಜಿಗಟ್ಟಲೆ ಮೇಕಪ್": ನಾಲಗೆ ಹರಿಬಿಟ್ಟ ವೈಎಸ್ಆರ್ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

YSR Congress Party Leader Sparks Controversy: ಆಂಧ್ರ ಪ್ರದೇಶದ ಗೃಹ ಸಚಿವೆ, ಟಿಡಿಪಿ ನಾಯಕಿ ವಂಗಲಪುಡಿ ಅನಿತಾ ಮುಖಕ್ಕೆ ಕೆಜಿಗಳಷ್ಟು ಮೇಕಪ್ ಮೆತ್ತುತ್ತಾರೆ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕ ಗುಡಿವಾಡ ಅಮರನಾಥ್ ಟೀಕಿಸಿದ್ದಾರೆ. ಈ ಹೇಳಿಕೆಗೆ ಟಿಡಿಪಿ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮಾಜಿ ಸಚಿವರು ಅಗೌರವದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಂಗಲಪುಡಿ ಅನಿತಾ (ಸಂಗ್ರಹ ಚಿತ್ರ)

ಹೈದರಾಬಾದ್, ಜೂ. 17: ಆಂಧ್ರ ಪ್ರದೇಶದ (Andhra Pradesh) ಸಚಿವೆಯ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಜಗನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಟೀಕೆಗೆ ಗುರಿಯಾಗಿದೆ. ಗೃಹ ಸಚಿವೆ, ತೆಲುಗು ದೇಶಂ ಪಕ್ಷದ (TDP) ನಾಯಕಿ ವಂಗಲಪುಡಿ ಅನಿತಾ (Vangalapudi Anitha) ಅವರ ವಿರುದ್ಧ ವೈಎಸ್ಆರ್ ಕಾಂಗ್ರೆಸ್ (YSR Congress) ಪಕ್ಷದ ನಾಯಕ ಗುಡಿವಾಡ ಅಮರನಾಥ್ ನೀಡುವರ ʼಮೇಕಪ್‌ʼ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮರನಾಥ್, ಸಚಿವೆ ಅನಿತಾ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ. ʼʼಸಚಿವೆಯು ಮುಖಕ್ಕೆ ಕೆಜಿಗಳಷ್ಟು ಮೇಕಪ್, ಕ್ರೀಂ ಮೆತ್ತುತ್ತಾರೆʼʼ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಟಿಡಿಪಿ ನಾಯಕರಿಂದ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಾಜಿ ಸಚಿವರು ಅಗೌರವದ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

ವಂಗಲಪುಡಿ ಅನಿತಾ ಅವರ ಎಕ್ಸ್‌ ಪೋಸ್ಟ್‌:



ವಂಗಲಪುಡಿ ಅನಿತಾ ವಾಗ್ದಾಳಿ

ಈ ಬಗ್ಗೆ ಅನಿತಾ ವಾಗ್ದಾಳಿ ಪ್ರತಿಕ್ರಿಯಿಸಿ, ʼʼವೈಎಸ್‌ಆರ್‌ಸಿಪಿ ನಾಯಕರು ಸಾರ್ವಜನಿಕ ಸಭೆಯಲ್ಲಿ, ಸಾರ್ವಜನಿಕರ ಮುಂದೆ ನನ್ನ ಬಗ್ಗೆ ಹೇಳಿದ ಮಾತುಗಳು ಕೇವಲ ಅವಮಾನವಲ್ಲ. ಅದು ಸಂವಿಧಾನಬದ್ಧ ಹುದ್ದೆಯಲ್ಲಿರುವ ಒಬ್ಬ ಮಹಿಳೆ ಹಾಗೂ ದಲಿತ ಸಮುದಾಯದ ಪ್ರತಿನಿಧಿಯನ್ನು ಅವಮಾನಿಸುವ ಉದ್ದೇಶದಿಂದ ನಡೆಸಲಾದ ಅತ್ಯಂತ ಹೀನ ಮತ್ತು ಜಾತಿ ಆಧಾರಿತ ದಾಳಿʼʼ ಎಂದು ಹೇಳಿದರು. ಇಂತಹ ಟೀಕೆಗಳಿಂದ ತಾನು ಕುಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾರ್ವಜನಿಕ ಸೇವೆಯನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಬಂಡಾಯ; ಸಂಸದರ ಬಣ NCPI ಜೊತೆ ವಿಲೀನ

ಸ್ತ್ರೀ ದ್ವೇಷದ ಹೇಳಿಕೆ

ಟಿಡಿಪಿ ಹಿರಿಯ ನಾಯಕ ನಾರಾ ಲೋಕೇಶ್ ಕೂಡ ಈ ಹೇಳಿಕೆಗಳನ್ನು ಖಂಡಿಸಿದ್ದಾರೆ. ವೈಎಸ್‌ಆರ್‌ಸಿಪಿ ವಿಷಯುಕ್ತ ರಾಜಕೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ್ದಾರೆ. “ವಂಗಲಪುಡಿ ಅನಿತಾ ಅವರ ವಿರುದ್ಧದ ಅವಮಾನದ, ಸ್ತ್ರೀ ದ್ವೇಷದ ಹೇಳಿಕೆಗಳು, ವೈಎಸ್‌ಆರ್‌ಸಿಪಿಯ ನಿಜವಾದ ಸ್ವರೂಪವನ್ನು ಬಹಿರಂಗಪಡಿಸಿದೆ” ಎಂದು ಅವರು ಹೇಳಿದ್ದಾರೆ.

ಮಹಿಳೆ ಮತ್ತು ದಲಿತ ನಾಯಕಿಯನ್ನು ಗುರಿಯಾಗಿಸಿಕೊಂಡಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ ಅವರು, ವೈಎಸ್‌ಆರ್‌ಸಿಪಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಉಪಮುಖ್ಯಮಂತ್ರಿ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ಕಿಡಿಕಾರಿದ್ದಾರೆ. ರಾಜಕೀಯ ಚರ್ಚೆಗಳು ವೈಯಕ್ತಿಕ ದಾಳಿಗಳಿಗಿಂತ ನೀತಿಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.

ಪ್ರತಿಭಟನೆ

ಈ ಮಧ್ಯೆ, ಟಿಡಿಪಿ ನಾಯಕರು ಪ್ರತಿಭಟನೆ ನಡೆಸಿ, ಗುಡಿವಾಡ ಅಮರನಾಥ ಅವರ ಫ್ಲೆಕ್ಸ್, ಬ್ಯಾನರ್ ಮೇಲೆ ಮೊಟ್ಟೆ ಮತ್ತು ಚಪ್ಪಲಿಗಳಿಂದ ಸಾಂಕೇತಿಕವಾಗಿ ಹೊಡೆದು ಆಕ್ರೋಶ ಹೊರಹಾಕಿದರು. ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ವಿವಾದಕ್ಕೆ ಪ್ರತಿಕ್ರಿಯಿಸಿದ ವೈಎಸ್‌ಆರ್‌ಸಿಪಿ ವಕ್ತಾರೆ ಶ್ಯಾಮಲಾ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ʼʼರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಸಾರ್ವಜನಿಕ ಸುರಕ್ಷತಾ ಕಾಳಜಿಗಳನ್ನು ಪರಿಹರಿಸುವ ಬದಲು ಗೃಹ ಸಚಿವರು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆʼʼ ಎಂದಿದ್ದಾರೆ.