ನವದೆಹಲಿ, ಸೆ. 29: ತನ್ನ ಮೇಲೆ ಲೈಂಗಿಕ ದೌರ್ಜನ್ಯ (Physical Assault) ಎಸಗಿದ ವ್ಯಕ್ತಿ ವಯಸ್ಸಾಗುವವರೆಗೂ ಜೈಲಿನಲ್ಲೇ ಇರಬೇಕು ಎಂದು ಹೇಳಿದ್ದ ಅಪ್ರಾಪ್ತ ಬಾಲಕಿಯ ಮನವಿಗೆ ಸ್ಪಂದಿಸಿರುವ ನ್ಯಾಯಾಧೀಶರು, “ನಿನ್ನ ಮಾತನ್ನು ನ್ಯಾಯಾಲಯ ಕೇಳಿದೆ” ಎಂದು ಭಾವುಕ ಸಂದೇಶ ನೀಡಿದ್ದಾರೆ. ಆರೋಪಿ ತನ್ನ ಉಳಿದ ಜೀವನವನ್ನು ಜೈಲಿನಲ್ಲೇ ಕಳೆಯಲಿದ್ದಾನೆ ಎಂದು ಬಾಲಕಿಗೆ ತಿಳಿಸಿರುವ ನ್ಯಾಯಾಧೀಶರು, ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ರೋಹಿಣಿಯ POCSO ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ರಜನಿ ರಂಗ ತೀರ್ಪಿನ ಕೊನೆಯಲ್ಲಿ ಸಾಂಪ್ರದಾಯಿಕ ಕಾನೂನು ಭಾಷೆಯನ್ನು ಬದಿಗಿಟ್ಟು, ನೇರವಾಗಿ ಬಾಲಕಿಯನ್ನು ಉದ್ದೇಶಿಸಿ ವೈಯಕ್ತಿಕ ಸಂದೇಶ ಬರೆದಿದ್ದರು.
“ನಿನ್ನ ಮಾತನ್ನು ಈ ನ್ಯಾಯಾಲಯ ಕೇಳಿದೆ”
“‘ಅಂಕಲ್ ವಯಸ್ಸಾಗುವವರೆಗೂ ಜೈಲಿನಲ್ಲೇ ಇರಲಿ’ ಎಂದು ನೀನು ಹೇಳಿದ್ದೆ. ಈ ನ್ಯಾಯಾಲಯ ನಿನ್ನ ಮಾತನ್ನು ಕೇಳಿದೆ ಮತ್ತು ನಿನ್ನ ಮನವಿಗೆ ಉತ್ತರ ನೀಡಿದೆ” ಎಂದು ನ್ಯಾಯಾಧೀಶೆ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
“ನೀನು ಅಂಕಲ್ ಎಂದು ಕರೆಯುತ್ತಿದ್ದ ವ್ಯಕ್ತಿ ಇನ್ನು ಮುಂದೆ ಸ್ವತಂತ್ರವಾಗಿ ಹೊರಗೆ ಬರಲು ಸಾಧ್ಯವಿಲ್ಲ. ಆತ ತನ್ನ ಉಳಿದ ಜೀವನವನ್ನು ಜೈಲಿನಲ್ಲೇ ಕಳೆಯುತ್ತಾನೆ. ಅಲ್ಲಿಯೇ ವಯಸ್ಸಾಗುತ್ತಾನೆ ಮತ್ತು ಅಲ್ಲಿಯೇ ಸಾಯುತ್ತಾನೆ. ಇನ್ನು ಮುಂದೆ ನಿನ್ನನ್ನು, ನಿನ್ನ ಪುಟ್ಟ ತಂಗಿಯನ್ನು ಅಥವಾ ಬೇರೆ ಯಾವುದೇ ಮಗುವನ್ನು ನೋಯಿಸಲು ಆತನಿಗೆ ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.
“ನೀನು ಅತ್ಯಂತ ಧೈರ್ಯಶಾಲಿ ಬಾಲಕಿ”
ʼʼನೀನು ನ್ಯಾಯಾಲಯಕ್ಕೆ ಬಂದು ನಿನ್ನನ್ನು ನೋಯಿಸಿದ ವ್ಯಕ್ತಿಯನ್ನು ಗುರುತಿಸಿ ಸತ್ಯವನ್ನು ಹೇಳಿದ್ದೀಯ. ಆತ ನಿನ್ನೊಂದಿಗೆ ಕೆಟ್ಟ ಕೃತ್ಯ ಎಸಗಿದ್ದರೂ ನೀನು ಮೌನವಾಗಿರಲಿಲ್ಲ. ತಾಯಿಗೆ ವಿಷಯ ತಿಳಿಸಿದ್ದೀಯ. ಮಾತನಾಡುವ ಧೈರ್ಯ ತೋರಿಸಿದ್ದರಿಂದ ಆತ ಮತ್ತೊಬ್ಬ ಮಗುವಿಗೆ ಹಾನಿ ಮಾಡುವ ಸಾಧ್ಯತೆ ಇಲ್ಲʼʼ ಎಂದು ನ್ಯಾಯಾಧೀಶೆ ತಿಳಿಸಿದ್ದಾರೆ.
“ನಿನ್ನ ಬಾಲ್ಯವನ್ನು ನ್ಯಾಯಾಲಯಕ್ಕೆ ಮರಳಿ ಕೊಡಲು ಸಾಧ್ಯವಿಲ್ಲ. ಆದರೆ ನಿನ್ನ ಮಾತುಗಳನ್ನು ಕೇಳಲಾಗಿದೆ ಎಂಬ ಭರವಸೆ ನೀಡಬಹುದು. ನಿನ್ನ ಮನವಿಯನ್ನು ಪುರಸ್ಕರಿಸಲಾಗಿದೆ. ನಿನ್ನನ್ನು ನೋಯಿಸಿದ ವ್ಯಕ್ತಿ ಇನ್ನು ಮುಂದೆ ಸ್ವತಂತ್ರ ವ್ಯಕ್ತಿಯಾಗಿ ಸೂರ್ಯನನ್ನು ನೋಡುವುದಿಲ್ಲ” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
“ಈಗ ನೀನು ನಿನ್ನ ಜೀವನವನ್ನು ನಡೆಸು. ಶಾಲೆಗೆ ಹೋಗು. ಸ್ನೇಹಿತರನ್ನು ಮಾಡಿಕೋ. ನಗು, ಆಡು, ಕನಸು ಕಾಣು. ನಿನ್ನ ಧೈರ್ಯವನ್ನು ಈ ನ್ಯಾಯಾಲಯ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ” ಎಂದು ಬಾಲಕಿಗೆ ಹೇಳಿದ್ದಾರೆ.
2 ವಾರಗಳಲ್ಲಿ ಸಂದೇಶ ತಲುಪಿಸಲು ಹೈಕೋರ್ಟ್ ಸೂಚನೆ
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ದಿನೇಶ್ ಭಟ್ ಅವರ ಪೀಠ ಸೆಪ್ಟೆಂಬರ್ 22ರಂದು ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಬಾಲಕಿಗೆ ಬರೆದ ಸಂದೇಶವನ್ನು ಹೈಕೋರ್ಟ್ “ಧೈರ್ಯದ ಸಂದೇಶ” ಎಂದು ಬಣ್ಣಿಸಿದೆ. ಉತ್ತರ-ಪಶ್ಚಿಮ ದೆಹಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಈ ಸಂದೇಶವನ್ನು ಮುದ್ರಿಸಿ ಬಾಲಕಿ ಅಥವಾ ಆಕೆಯ ಕುಟುಂಬಕ್ಕೆ ತಲುಪಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ವಿಶ್ವವಿದ್ಯಾಲಯ ಧ್ವಂಸಗೊಳಿಸಿದ ಉದ್ರಿಕ್ತ ವಿದ್ಯಾರ್ಥಿಗಳು
ಎರಡು ವಾರಗಳೊಳಗೆ ಸಂದೇಶದ ಜತೆಗೆ ಬಾಲಕಿಗೆ ನಿಗದಿಪಡಿಸಿರುವ ಪರಿಹಾರದ ಮೊತ್ತವನ್ನೂ ತಲುಪಿಸುವಂತೆ ಆದೇಶಿಸಲಾಗಿದೆ. 2023ರ ಜುಲೈ 23ರಂದು ಘಟನೆ ನಡೆದಾಗ ಬಾಲಕಿಗೆ ಏಳು ವರ್ಷ ವಯಸ್ಸಾಗಿತ್ತು. ಇದೀಗ ಆಕೆಗೆ 10 ವರ್ಷ.
ಆರೋಪಿಗೆ ಜೀವನದ ಉಳಿದ ಅವಧಿವರೆಗೆ ಜೈಲು
ಈ ಪ್ರಕರಣದಲ್ಲಿ ಸುಮಿತ್ ಶಾಕ್ಯ ವಿರುದ್ಧ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲಾಗಿತ್ತು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆತನನ್ನು ದೋಷಿ ಎಂದು ಘೋಷಿಸಿತ್ತು. POCSO ಕಾಯ್ದೆಯಡಿ ಆತನಿಗೆ ಜೀವನದ ಉಳಿದ ಅವಧಿವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಲಾಗಿದೆ. ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಲಾಗಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿವೆ.
ಬಾಲಕಿಗೆ ₹ 10.50 ಲಕ್ಷ ಪರಿಹಾರ
ಬಾಲಕಿ ಮತ್ತು ಆಕೆಯ ಕುಟುಂಬ ಅನುಭವಿಸಿದ ಸಂಕಷ್ಟ, ಅಪರಾಧದ ಸ್ವರೂಪ ಹಾಗೂ ಅದರ ದೀರ್ಘಕಾಲೀನ ಪರಿಣಾಮಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯವು ₹ 10.50 ಲಕ್ಷ ಪರಿಹಾರ ನಿಗದಿಪಡಿಸಿತ್ತು. ಪರಿಹಾರದ ಮೊತ್ತದ ಪಾವತಿ ಸ್ಥಿತಿಯ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್ DLSA ಕಾರ್ಯದರ್ಶಿಗೆ ಸೂಚಿಸಿದೆ.
ಇದೇ ವೇಳೆ, ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಆರೋಪಿಯು ಸಲ್ಲಿಸಿದ್ದ ಮನವಿಗೆ ಹೈಕೋರ್ಟ್ ತಕ್ಷಣದ ಪರಿಹಾರ ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿರುವ ಸಾಕ್ಷ್ಯಗಳು, ವಿಧಿವಿಜ್ಞಾನ ಸಾಕ್ಷ್ಯ ಸೇರಿ ಇತರ ಅಂಶಗಳನ್ನು ಪರಿಗಣಿಸಿದ ಪೀಠ, ಈ ಹಂತದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಲು ಮುಂದಾಗಿಲ್ಲ.
DLSAಯ ಸ್ಥಿತಿಗತಿ ವರದಿಯನ್ನು 2026ರ ನವೆಂಬರ್ 4ರಂದು ವಿಚಾರಣೆ ನಡೆಸಲಾಗುತ್ತದೆ. ಪ್ರಕರಣದ ಮೇಲ್ಮನವಿಯನ್ನು ಮತ್ತೆ 2027ರ ಜನವರಿ 20ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.