ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಅವರು 2025ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಿಸಿದ್ದ ''ಮಿಷನ್ ಸುದರ್ಶನ ಚಕ್ರ" (Mission Sudarshan Chakra) ವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಅವರು ಶುಕ್ರವಾರ ಅನಾವರಣಗೊಳಿಸಿ, ಇದು ಆಧುನಿಕ ಭಾರತದ ಬಹು-ಹಂತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು. ಹೈದರಾಬಾದ್ ನ ಡಿಆರ್ ಡಿಒನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕ್ಷಿಪಣಿ ಸಂಕೀರ್ಣದಲ್ಲಿ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಿಷನ್ ಸುದರ್ಶನ ಚಕ್ರವು ಅಗತ್ಯವಿದ್ದಾಗ ನಿರ್ಣಾಯಕ ಹೊಡೆತ ನೀಡುತ್ತದೆ. ಮಿಲಿಟರಿ ಸ್ಥಾಪನೆಗಳು ಮತ್ತು ಮೂಲಸೌಕರ್ಯಗಳನ್ನು ರಕ್ಷಿಸುವುದಲ್ಲದೆ ನಾಗರಿಕ ಮೂಲಸೌಕರ್ಯ, ಪ್ರಮುಖ ಸಂಸ್ಥೆಗಳ ಸುರಕ್ಷತೆಯನ್ನು ಇದು ಖಚಿತಪಡಿಸುತ್ತದೆ ಎಂದು ತಿಳಿಸಿದರು.
ಲಿಯಾಕಿ ಫ್ರೀಡಂ ಹಡಗಿನ ಮೇಲೆ ದಾಳಿ, ನಾಲ್ವರು ನಾವಿಕರು ಸಾವಿನ ಬಗ್ಗೆ ಸರ್ಕಾರ ಹೇಳಿದ್ದೇನು?
ಇದು ಮೂರು ಪದರದ ರಕ್ಷಣೆಯನ್ನು ನಾಗರಿಕರಿಗೆ ಒದಗಿಸಲಿದೆ ಮತ್ತು ನಾಗರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದ ಅವರು, ಪ್ರಮುಖವಾಗಿರುವ ಎಲ್ಲಾ ಸ್ವತ್ತುಗಳಿಗೆ ಮಿಷನ್ ಸುದರ್ಶನ ಚಕ್ರವು ದೃಢವಾದ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠತೆ, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಭದ್ರತೆಗೆ ಡಿಆರ್‌ಡಿಒದ ಕ್ಷಿಪಣಿ ವ್ಯವಸ್ಥೆಗಳು ಮತ್ತು ಕಾರ್ಯತಂತ್ರದ ವ್ಯವಸ್ಥೆಗಳ ಕ್ಲಸ್ಟರ್ ನೀಡಿದ ಪ್ರಮುಖ ಕೊಡುಗೆಗಳಿಗಾಗಿ ಶ್ಲಾಘನೆ ವ್ಯಕ್ತಪಡಿಸಿದ ರಾಜನಾಥ್ ಸಿಂಗ್, ಆಪರೇಷನ್ ಸಿಂದೂರ್ ವೇಳೆ ಕ್ಷಿಪಣಿ ವ್ಯವಸ್ಥೆಗಳ ಅಸಾಧಾರಣ ಕಾರ್ಯಕ್ಷಮತೆಯು ಭಾರತದ ರಕ್ಷಣಾ ಆರ್ ಆಂಡ್ ಡಿ ಬೆಳೆಯುತ್ತಿರುವುದಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ಹೇಳಿದರು.
ಭಾರತವು ಜಾಗತಿಕ ರಕ್ಷಣಾ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದಕ್ಕೆ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಆಕಾಶ್ ಮತ್ತು ಬ್ರಹ್ಮೋಸ್ ಸಾಕ್ಷಿಯಾಗಿದೆ. ಆಪರೇಷನ್ ಸಿಂದೂರ್ ವೇಳೆ ಇವು ವಾಯು ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.
ಮಿಷನ್ ಸುದರ್ಶನ ಚಕ್ರವನ್ನು ರಚಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಬದ್ಧತೆಯ ಬಗ್ಗೆ ತಿಳಿಸಿದ ಅವರು, ಯುದ್ಧವು ತೀವ್ರವಾಗಿ ಹೆಚ್ಚಳವಾಗುತ್ತಿದೆ ಮತ್ತು ಅತೀ ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಹಂತದಲ್ಲಿ ರಾಷ್ಟ್ರೀಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಆಧುನಿಕ ಯುದ್ಧದಲ್ಲಿ ನಿಖರ ದಾಳಿ ಸಾಮರ್ಥ್ಯ ಬಹುಮುಖ್ಯವಾಗಿದೆ. ಇದರೊಂದಿಗೆ ಸಂಯೋಜಿತ ವಾಯು ರಕ್ಷಣಾ ವ್ಯವಸ್ಥೆ, ಹೈಪರ್‌ಸಾನಿಕ್ ಶಸ್ತ್ರಾಸ್ತ್ರ, ಸ್ವಾಯತ್ತ ವೇದಿಕೆ, ಕೃತಕ ಬುದ್ಧಿಮತ್ತೆ, ಎಲೆಕ್ಟ್ರಾನಿಕ್ ಯುದ್ಧ ಮತ್ತು ಮುಂದುವರಿದ ಸಂವೇದಕ ತಂತ್ರಜ್ಞಾನಗಳು ಕೂಡ ಮುಖ್ಯವಾಗಿದೆ ಎಂದರು.
ಉತ್ಪಾದನೆಯು ಅಭಿವೃದ್ಧಿ ಪ್ರಕ್ರಿಯೆಯ ಅವಿಭಾಜ್ಯ ಅಂಗ ಎಂದ ಅವರು, ಭವಿಷ್ಯದ ತಂತ್ರಜ್ಞಾನಗಳೊಂದಿಗೆ ವರ್ತಮಾನದ ಸವಾಲುಗಳನ್ನು ಎದುರಿಸಲು ಡಿಆರ್ ಡಿಒ ನಿರಂತರ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.