ಶ್ರೀನಗರ, ಮೇ 19: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ (Middle East Crisis) ಮಧ್ಯೆ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಗರಿಕರಿಗೆ ಮನವಿ ಮಾಡಿದ ನಂತರ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ನಾಯಕರು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ. ಇಲ್ಲೊಬ್ಬ ನಾಯಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ತಮ್ಮ ಬೆಂಗಾವಲು ಪಡೆಯನ್ನು ಕಡಿಮೆ ಮಾಡಿದ್ದಲ್ಲದೆ ಕಾರನ್ನು ಸಂಪೂರ್ಣವಾಗಿ ದೂರವಿಟ್ಟಿದ್ದಾರೆ. ಸೈಕಲಲ್ಲೇ ಓಡಾಡುತ್ತಿದ್ದಾರೆ.
ಹೌದು, ಜಮ್ಮುವಿನ ಗಡಿ ವಿಧಾನಸಭಾ ಕ್ಷೇತ್ರವಾದ ಮರ್ಹ್ ಶಾಸಕ ಸುರೇಂದರ್ ಭಗತ್ ಬೆಂಗಾವಲು ಪಡೆಯನ್ನು ಕಡಿಮೆ ಮಾಡಿದ್ದಲ್ಲದೆ ಪ್ರಧಾನಿ ಅವರ ಸಂದೇಶವನ್ನು ಜನರಿಗೆ ತಲುಪಿಸಲು ಸೈಕಲ್ ಸವಾರಿ ಆಯ್ದುಕೊಂಡಿದ್ದಾರೆ. ಪ್ರತಿ ಮುಂಜಾನೆ ಈ ಶಾಸಕ ತಮ್ಮ ಕ್ಷೇತ್ರದಲ್ಲಿ ಸೈಕಲ್ ಚಲಾಯಿಸುತ್ತಾ, ಜನರನ್ನು ಭೇಟಿಯಾಗುತ್ತಾ, ಅವರ ಸಮಸ್ಯೆಗಳನ್ನು ಆಲಿಸುತ್ತಾರೆ.
ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ತಮ್ಮ ಮತದಾರರನ್ನು ಭೇಟಿಯಾಗುವ ಸಮಯದಲ್ಲಿ ಸುಮಾರು 15 ಕಿಲೋ ಮೀಟರ್ ಸೈಕಲ್ ತುಳಿಯುತ್ತೇನೆ ಎಂದು ಸುರೇಂದರ್ ಭಗತ್ ಹೇಳಿದ್ದಾರೆ. ಇಂಧನ ಉಳಿಸುವಂತೆ ಪ್ರಧಾನಮಂತ್ರಿ ನೀಡಿರುವ ಕರೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಾಧ್ಯವಾದಷ್ಟು ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಸೈಕಲ್ ಸವಾರಿಯನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸುವುದೇ ತಮ್ಮ ಗುರಿ ಎಂದು ಅವರು ವಿವರಿಸಿದ್ದಾರೆ.
ಪ್ರಧಾನಿ ಮೋದಿ ಇಂಧನ ಮಿತವ್ಯಯ ಕರೆಗೆ ಕಾಂಗ್ರೆಸ್ ಶಾಸಕ ಪೊನ್ನಣ್ಣ ಸ್ಪಂದನೆ
ಪ್ರಧಾನಿ ಅವರ ಮನವಿಗೆ ಮುನ್ನ, ತಮ್ಮ ಭದ್ರತೆಗೆ 2 ಬೆಂಗಾವಲು ವಾಹನಗಳು ಇದ್ದವು ಎಂದು ಶಾಸಕರು ತಿಳಿಸಿದರು. ಈಗ, ಅವರು ತಮ್ಮ ಕ್ಷೇತ್ರದಲ್ಲಿ ಸೈಕಲ್ ತುಳಿಯುತ್ತಿದ್ದು, ಒಬ್ಬ ಭದ್ರತಾ ಅಧಿಕಾರಿ ಮಾತ್ರ ಮತ್ತೊಂದು ಸೈಕಲ್‌ನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದಾರೆ.
ದೀರ್ಘ ದೂರ ಪ್ರಯಾಣಕ್ಕಾಗಿ, ಕೇವಲ ಒಂದು ಎಸ್ಕಾರ್ಟ್ ಕಾರು ಹೊಂದಿರುವ ಎಲೆಕ್ಟ್ರಿಕ್ ವಾಹನವನ್ನು ಮಾತ್ರ ಬಳಸುವುದಾಗಿ ಭಗತ್ ಹೇಳಿದ್ದಾರೆ. ಪ್ರಧಾನಿ ಕರೆ ನೀಡಿದಂತೆ, ಜನರು ಕಾರುಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಇಂಧನವನ್ನು ಉಳಿಸಲು ತಾನು ಇತರರಿಗೆ ಮಾದರಿಯಾಗಬೇಕು ಎಂಬುದಾಗಿ ಬಯಸುತ್ತೇನೆ ಎಂದು ಶಾಸಕ ಭಗತ್ ಹೇಳಿದ್ದಾರೆ.
ಅಮೆರಿಕ-ಇರಾನ್ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಇಂಧನ ಬೆಲೆಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೇ 10 ರಂದು ನಾಗರಿಕರಲ್ಲಿ ವಿಶೇಷ ಮನವಿ ಮಾಡಿದ್ದರು. ಇಂಧನವನ್ನು ಉಳಿಸುವಂತೆ, ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವಂತೆ, ಒಂದು ವರ್ಷದವರೆಗೆ ಅಗತ್ಯವಿಲ್ಲದೆ ಚಿನ್ನ ಖರೀದಿಸದಂತೆ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಲು ಸ್ಥಳೀಯ ವಸ್ತುಗಳಿಗಾಗಿ ಹಣ ಖರ್ಚು ಮಾಡುವಂತೆ ಅವರು ಕರೆ ನೀಡಿದ್ದರು.
ಪ್ರಧಾನ ಮಂತ್ರಿ ಸ್ವತಃ ತಮ್ಮ ಬೆಂಗಾವಲು ಪಡೆಯನ್ನು ಕಡಿತಗೊಳಿಸಿ, ಇವಿ ವಾಹನಗಳನ್ನು ಹೆಚ್ಚಾಗಿ ಉಪಯೋಗಿಸುವಂತೆ ಆದೇಶಿಸಿದ್ದಾರೆ.