ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ʼನಿಮ್ಮ ಮನೆ ತುಂಬೆಲ್ಲ ಸಗಣಿ ತುಂಬಿಸುತ್ತೇನೆʼ': ಮಗನ ಥಾರ್ ಅಪಘಾತದ ಬೆನ್ನಲ್ಲೇ ಪೊಲೀಸರಿಗೆ ಬಿಜೆಪಿ ಶಾಸಕನ ಬೆದರಿಕೆ

ಮಧ್ಯ ಪ್ರದೇಶದ ಬಿಜೆಪಿ ಶಾಸಕ ಪ್ರೀತಮ್ ಲೋಧಿ ತಮ್ಮ ಮಗನ ಥಾರ್ ಅಪಘಾತ ಪ್ರಕರಣದ ತನಿಖೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗೆ 15 ದಿನಗಳಲ್ಲಿ ಸ್ಪಷ್ಟನೆ ನೀಡದಿದ್ದರೆ ಮನೆಗೆ ಸಗಣಿ ತುಂಬಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಶಾಸಕ ಪ್ರೀತಮ್ ಲೋಧಿ

ಭೋಪಾಲ್‌, ಏ. 20: ತಮ್ಮ ಮಗ ನಡೆಸಿದ ಕಾರು ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದ ಪಿಚೋರ್ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಲೋಧಿ (Pritam Lodhi) ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಚಿತ್ರ ಹಾಗೂ ಆಕ್ಷೇಪಾರ್ಹ ಎಚ್ಚರಿಕೆ ನೀಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಕರೇರಾ ಎಸ್‌ಡಿಒಪಿ ಆಯುಷ್ ಜಾಖಡ್ (Ayush Jakhad) ಅವರ ನಿವಾಸಕ್ಕೆ ಸಗಣಿ ತುಂಬಿಸುವುದಾಗಿ ಶಾಸಕರು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

ಕೆಲವು ದಿನಗಳ ಹಿಂದೆ ಕರೇರಾದಲ್ಲಿ ಶಾಸಕ ಲೋಧಿ ಅವರ ಪುತ್ರ ದಿನೇಶ್ ಲೋಧಿ (Dinesh Lodhi) ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ವಾಹನವು ಐವರ ಮೇಲೆ ಹರಿದಿತ್ತು. ಈ ಅಪಘಾತದ ನಂತರ ಪೊಲೀಸ್ ಆಡಳಿತ ಮತ್ತು ಶಾಸಕರ ನಡುವೆ ಸಂಘರ್ಷ ಏರ್ಪಟ್ಟಿದೆ. ಎಸ್‌ಡಿಒಪಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಲೋಧಿ, ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಅವರ ಬಂಗಲೆಯನ್ನು ಸಗಣಿಯಿಂದ ತುಂಬಿಸುವುದಾಗಿ ಗುಡುಗಿದ್ದಾರೆ.

ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರ ಬೆದರಿಕೆ:



ಅಪಘಾತವಲ್ಲ, ರಾಜಕೀಯ ಪಿತೂರಿ

"ಅಪಘಾತವೆಂದರೆ ಅದು ಆಕಸ್ಮಿಕವಾಗಿ ನಡೆಯುವುದು, ಯಾರೂ ಬೇಕೆಂದೇ ಮಾಡುವುದಿಲ್ಲ" ಎಂದು ಶಾಸಕರು ತಮ್ಮ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. ತನಿಖೆಗೆ ತಾವು ಸಂಪೂರ್ಣ ಸಹಕಾರ ನೀಡಿದ್ದರೂ, ಪೊಲೀಸರು ತಮ್ಮ ಮಗನಿಗೆ ಈ ಭಾಗದಲ್ಲಿ ಕಾಣಿಸಿಕೊಳ್ಳಬಾರದು ಅಥವಾ ಇಲ್ಲಿಂದ ಚುನಾವಣೆ ಎದುರಿಸಬಾರದು ಎಂದು ತಾಕೀತು ಮಾಡುತ್ತಿದ್ದಾರೆ ಎಂದು ಲೋಧಿ ದೂರಿದ್ದಾರೆ. "ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಲು ಪೊಲೀಸರಿಗೆ ಯಾವ ಅಧಿಕಾರವಿದೆ? ಯಾರ ನಿರ್ದೇಶನದ ಮೇರೆಗೆ ನೀವು ಇಂತಹ ಮಾತುಗಳನ್ನಾಡುತ್ತಿದ್ದೀರಿ?" ಎಂದು ಅವರು ಪ್ರಶ್ನಿಸಿದ್ದಾರೆ.

ಯೋಗಿ ನಾಡಿನಲ್ಲಿ ಅಲ್ಲೇ ಡ್ರಾ ಅಲ್ಲೇ ಬಹುಮಾನ

ಖಡಕ್ ಎಚ್ಚರಿಕೆ

ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಶಾಸಕರು, "ನಾನು ಮೊದಲೇ ಎಚ್ಚರಿಕೆ ನೀಡುತ್ತಿದ್ದೇನೆ. 15 ದಿನಗಳಲ್ಲಿ ಉತ್ತರ ಸಿಗದಿದ್ದರೆ 10-15 ಜನರನ್ನು ಕರೆದುಕೊಂಡು ಹೋಗಿ ಅಧಿಕಾರಿ ಮನೆಯೊಳಗೆ ಸಗಣಿ ತುಂಬಿಸುತ್ತೇನೆ" ಎಂದಿದ್ದಾರೆ. ಈ ಬೆಳವಣಿಗೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಶಂಕಿಸಿರುವ ಶಾಸಕರ ಈ ಹೇಳಿಕೆಗಳು ಈಗ ಮಧ್ಯ ಪ್ರದೇಶ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಸದ್ಯ ಈ ಪ್ರಕರಣವು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ತನಿಖೆಯಲ್ಲಿದೆ.