ನವದೆಹಲಿ, ಜೂ. 10: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ, ಈ ಅವಧಿಯಲ್ಲಿ ಜಾರಿಗೊಂಡ ಹಲವು ಜನಪರ ಯೋಜನೆಗಳು ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಹಣಕಾಸು ಸೇರ್ಪಡೆಯಿಂದ ಆರೋಗ್ಯ ಭದ್ರತೆಯವರೆಗೆ, ಸ್ವಚ್ಛತೆಯಿಂದ ವಸತಿ ಸೌಲಭ್ಯಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಕೋಟ್ಯಂತರ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ಅದರಲ್ಲೂ ಜನಧನ್ ಯೋಜನ), ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ ಹಾಗೂ ಆಯುಷ್ಮಾನ್ ಭಾರತ ಯೋಜನೆ ಮೋದಿ ಸರ್ಕಾರದ 12 ವರ್ಷಗಳ ಅವಧಿಯ ಪ್ರಮುಖ ಸಾಧನೆಗಳಾಗಿ ಗುರುತಿಸಿಕೊಂಡಿವೆ.
ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY)
2014ರ ಆಗಸ್ಟ್ 28ರಂದು ಆರಂಭವಾದ ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY) ದೇಶದ ಅತಿದೊಡ್ಡ ಹಣಕಾಸು ಸೇರ್ಪಡೆ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ. ಬ್ಯಾಂಕ್ ಖಾತೆ ಇಲ್ಲದವರಿಗೆ ಉಚಿತ ಬ್ಯಾಂಕ್ ಖಾತೆ ತೆರೆಯುವ ಅವಕಾಶ ಕಲ್ಪಿಸಲಾಗಿದ್ದು, ಪ್ರಸ್ತುತ 58.3 ಕೋಟಿಗೂ ಅಧಿಕ ಖಾತೆಗಳು ತೆರೆಯಲ್ಪಟ್ಟಿವೆ. ಈ ಖಾತೆಗಳಲ್ಲಿ 3 ಲಕ್ಷ ಕೋಟಿ ರುಪಾಯಿಗೂ ಅಧಿಕ ಮೊತ್ತ ಠೇವಣಿಯಾಗಿದೆ.
ಸ್ವಚ್ಛ ಭಾರತ ಅಭಿಯಾನ (SBM)
ಅದೇ ವರ್ಷ ಅಕ್ಟೋಬರ್ 2ರಂದು ಆರಂಭವಾದ ಸ್ವಚ್ಛ ಭಾರತ ಅಭಿಯಾನ (SBM) ದೇಶವನ್ನು ಮುಕ್ತ ಶೌಚಾಚರಣೆಯಿಂದ ಮುಕ್ತಗೊಳಿಸುವ ಗುರಿ ಹೊಂದಿತ್ತು. ಯೋಜನೆಯಡಿ 12 ಕೋಟಿಗೂ ಅಧಿಕ ಶೌಚಾಲಯಗಳು ನಿರ್ಮಾಣಗೊಂಡಿದ್ದು, 753 ಜಿಲ್ಲೆಗಳು ODF+ ಸ್ಥಾನಮಾನ ಪಡೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೂ ಗಮನಾರ್ಹವಾಗಿ ಸುಧಾರಿಸಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)
2015ರಲ್ಲಿ ಜಾರಿಗೆ ಬಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ವಸತಿ ಸೌಲಭ್ಯ ಒದಗಿಸಲಾಗಿದೆ. ಯೋಜನೆಯಡಿ 5 ಕೋಟಿಗೂ ಅಧಿಕ ಮನೆಗಳಿಗೆ ಮಂಜೂರಾತಿ ದೊರೆತಿದ್ದು, 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.
ಮೂರು ಬಾರಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)
2016ರ ಮೇ 1ರಂದು ಆರಂಭವಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ಯಡಿ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ LPG ಸಂಪರ್ಕ ನೀಡಲಾಗಿದೆ. ಇದುವರೆಗೆ 10 ಕೋಟಿಗೂ ಅಧಿಕ ಅನಿಲ ಸಂಪರ್ಕಗಳನ್ನು ವಿತರಿಸಲಾಗಿದ್ದು, ಸಾಂಪ್ರದಾಯಿಕ ಇಂಧನ ಬಳಕೆಯಿಂದ ಉಂಟಾಗುತ್ತಿದ್ದ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ.
ಆಯುಷ್ಮಾನ್ ಭಾರತ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY)
2018ರ ಸೆಪ್ಟೆಂಬರ್ 23ರಂದು ಜಾರಿಗೆ ಬಂದ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ. ಯೋಜನೆಯಡಿ 44 ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 10 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ 36 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ಯೋಜನೆಯೊಂದಿಗೆ ನೋಂದಣಿಯಾಗಿವೆ.
ಇವುಗಳ ಜತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಸೌಭಾಗ್ಯ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಸೇರಿ ಹಲವು ಯೋಜನೆಗಳು ದೇಶದ ವಿವಿಧ ವರ್ಗಗಳ ಜನರಿಗೆ ನೆರವಾಗುತ್ತಿವೆ. ಕೇಂದ್ರ ಸರ್ಕಾರದ ಪ್ರಕಾರ, 12 ವರ್ಷಗಳಲ್ಲಿ ಜಾರಿಗೊಂಡ ಈ ಯೋಜನೆಗಳು ಆರ್ಥಿಕ ಸೇರ್ಪಡೆ, ಮೂಲಭೂತ ಸೌಲಭ್ಯಗಳ ವಿಸ್ತರಣೆ ಹಾಗೂ ಸಾಮಾಜಿಕ ಭದ್ರತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.